ಮತ್ತೊಂದು ಮೆಲುಗಲ್ಲು ತಲುಪಿದ ರೋಹಿತ್ ಶರ್ಮಾ

Update: 2020-01-20 04:08 GMT

ಹೊಸದಿಲ್ಲಿ, ಜ.19: ಭಾರತದ ಆರಂಭಿಕ ಬ್ಯಾಟ್ಸ್ ಮನ್ ರೋಹಿತ್ ಶರ್ಮಾ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ತಲುಪಿದ್ದಾರೆ. ರೋಹಿತ್‌ಗೆ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 9,000 ರನ್ ಪೂರೈಸಲು ಇಂದು ಕೇವಲ 4 ರನ್ ಅಗತ್ಯವಿತ್ತು. ಇಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಪ್ಯಾಟ್ ಕಮಿನ್ಸ್ ಎಸೆದ ಇನಿಂಗ್ಸ್‌ನ ಮೊದಲ ಓವರ್‌ನ ಮೊದಲೆರಡು ಎಸೆತದಲ್ಲಿ 4 ರನ್ ಕಲೆ ಹಾಕಿ ಹೊಸ ಮೈಲುಗಲ್ಲು ಕ್ರಮಿಸಿದರು.

ರೋಹಿತ್ ಅತ್ಯಂತ ವೇಗವಾಗಿ 9,000 ರನ್ ಪೂರೈಸಿದ ವಿಶ್ವದ ಮೂರನೇ ಹಾಗೂ ಭಾರತದ ಎರಡನೇ ಬ್ಯಾಟ್ಸ್‌ಮನ್ ಎಂಬ ಹಿರಿಮೆಗೆ ಪಾತ್ರರಾದರು. ಸೌರವ್ ಗಂಗುಲಿ ಹಾಗೂ ಸಚಿನ್ ತೆಂಡುಲ್ಕರ್ ದಾಖಲೆಯನ್ನು ರೋಹಿತ್ ಮುರಿದರು.

 ರೋಹಿತ್ 217 ಇನಿಂಗ್ಸ್‌ನಲ್ಲಿ ಈ ಮೈಲುಗಲ್ಲು ತಲುಪಿದರೆ, ನಾಯಕ ವಿರಾಟ್ ಕೊಹ್ಲಿ 194 ಇನಿಂಗ್ಸ್‌ನಲ್ಲಿ 9,000 ರನ್ ಪೂರೈಸಿದ್ದರು. ಕೊಹ್ಲಿ ಈಗಾಗಲೇ ವೇಗವಾಗಿ 9 ಸಾವಿರ ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ದ.ಆಫ್ರಿಕಾದ ಎಬಿಡಿ ವಿಲಿಯರ್ಸ್(208) ಎರಡನೇ ಅತ್ಯಂತ ವೇಗದಲ್ಲಿ 9 ಸಾವಿರ ರನ್ ಪೂರೈಸಿದ್ದಾರೆ.

ಭಾರತದ ಪರ ರೋಹಿತ್ ಹಾಗೂ ಕೊಹ್ಲಿ ಅಲ್ಲದೆ, ತೆಂಡುಲ್ಕರ್(18,426 ರನ್), ಗಂಗುಲಿ(11,221 ರನ್), ರಾಹುಲ್ ದ್ರಾವಿಡ್(10,768 ರನ್), ಮಹೇಂದ್ರ ಸಿಂಗ್ ಧೋನಿ(10,599) ಹಾಗೂ ಮುಹಮ್ಮದ್ ಅಝರುದ್ದೀನ್(9,378)9,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News