ಭಾರತ ‘ಎ’ ತಂಡಕ್ಕೆ ರೋಚಕ ಜಯ

Update: 2020-01-20 04:13 GMT

ಲಿಂಕೊಲಿನ್, ಜ.19: ಪೃಥ್ವಿ ಶಾ ಅಬ್ಬರದ ಬ್ಯಾಟಿಂಗ್(150 ರನ್, 100 ಎಸೆತ)ನೆರವಿನಿಂದ ಭಾರತ ‘ಎ’ ತಂಡ ನ್ಯೂಝಿಲ್ಯಾಂಡ್ ಇಲೆವೆನ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯವನ್ನು 12 ರನ್‌ನಿಂದ ಗೆದ್ದುಕೊಂಡಿದೆ. ಟೀಮ್ ಇಂಡಿಯಾಕ್ಕೆ ವಾಪಸಾಗಲು ಎದುರು ನೋಡುತ್ತಿರುವ 20ರ ಹರೆಯದ ಶಾ ತನ್ನ ಬಿರುಸಿನ ಬ್ಯಾಟಿಂಗ್ ವೇಳೆ 22 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದರು. ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿಗೆ ಭಾರತ ತಂಡವನ್ನು ಆಯ್ಕೆ ಮಾಡಲಿರುವ ಆಯ್ಕೆಗಾರರಿಗೆ ಶಾ ಇನಿಂಗ್ಸ್ ಖುಷಿ ತಂದಿದೆ.

ನ್ಯೂಝಿಲ್ಯಾಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ಫೆ.21ರಂದು ಹ್ಯಾಮಿಲ್ಟನ್‌ನಲ್ಲಿ ನಡೆಯಲಿದೆ. ಫೆ.29ರಂದು ಕ್ರೈಸ್ಟ್‌ಚರ್ಚ್‌ನಲ್ಲಿ ಎರಡನೇ ಪಂದ್ಯ ನಡೆಯಲಿದೆ. ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ‘ಎ’ ತಂಡ 49.2 ಓವರ್‌ಗಳಲ್ಲಿ 372 ರನ್‌ಗೆ ಆಲೌಟಾಯಿತು. ಗೆಲ್ಲಲು ಕಠಿಣ ಸವಾಲು ಪಡೆದ ಆತಿಥೇಯ ತಂಡವನ್ನು ಆರು ವಿಕೆಟ್ ನಷ್ಟಕ್ಕೆ 360ಕ್ಕೆ ನಿಯಂತ್ರಿಸಿತು. ಈ ಮೂಲಕ ಕಿವೀಸ್ ಪ್ರವಾಸದಲ್ಲಿ 2ನೇ ಗೆಲುವು ದಾಖಲಿಸಿತು.

 ಕರ್ನಾಟಕದ ವಿರುದ್ಧ ರಣಜಿ ಟ್ರೋಫಿ ಪಂದ್ಯದ ವೇಳೆ ಮುಂಬೈ ಪರ ಆಡುತ್ತಿದ್ದಾಗ ಭುಜನೋವಿಗೆ ಒಳಗಾಗಿ ಚೇತರಿಸಿಕೊಂಡಿರುವ ಶಾ ಮೊದಲ ವಿಕೆಟ್‌ಗೆ ಮಾಯಾಂಕ್ ಅಗರ್ವಾಲ್(32)ಅವರೊಂದಿಗೆ 89 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ನಾಯಕ ಶುಭಮನ್ ಗಿಲ್(24), ಸೂರ್ಯಕುಮಾರ ಯಾದವ್(26) ಹಾಗೂ ಇಶಾನ್ ಕಿಶನ್(14)ಒಂದಷ್ಟು ಕಾಣಿಕೆ ನೀಡಿದರು. 35ನೇ ಓವರ್‌ನಲ್ಲಿ ಶಾ ಔಟಾದ ಬಳಿಕ ಆಲ್‌ರೌಂಡರ್ ವಿಜಯ್ ಶಂಕರ್(58,41 ಎಸೆತ)ಅರ್ಧಶತಕ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. 373 ರನ್ ಚೇಸಿಂಗ್‌ಗೆ ತೊಡಗಿದ ನ್ಯೂಝಿಲ್ಯಾಂಡ್ ಆರಂಭಿಕ ಕಾಟೆನ್ ಕ್ಲಾರ್ಕ್(1)ವಿಕೆಟನ್ನು ಬೇಗನೇ ಕಳೆದುಕೊಂಡಿತು. ಇನ್ನೋರ್ವ ಆರಂಭಿಕ ಆಟಗಾರ ಜಾಕ್ ಬೊಯ್ಲೆ(130) ಹಾಗೂ ಫಿನ್ ಅಲ್ಲೆನ್(87)ತಂಡವನ್ನು ಆಧರಿಸಿದರು. ಭಾರತದ ಪರ ಬಲಗೈ ಮಧ್ಯಮ ವೇಗದ ಬೌಲರ್ ಇಶಾನ್ ಪೊರೆಲ್(2-39)ಹಾಗೂ ಸ್ಪಿನ್ನರ್ ಕೃನಾಲ್ ಪಾಂಡ್ಯ(2-50)ತಲಾ ಎರಡು ವಿಕೆಟ್ ಪಡೆದರು. ಭಾರತ ‘ಎ’ ಮೊದಲ ಅಭ್ಯಾಸ ಪಂದ್ಯವನ್ನು 92 ರನ್‌ನಿಂದ ಗೆದ್ದುಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News