ಚೆನ್ನೈ ತಂಡದಲ್ಲಿ ಧೋನಿ ಸ್ಥಾನ ಖಾಯಂ: ಶ್ರೀನಿವಾಸನ್

Update: 2020-01-20 04:14 GMT

ಚೆನ್ನೈ, ಜ.19: ಮಹೇಂದ್ರ ಸಿಂಗ್ ಧೋನಿ ಭಾರತ ತಂಡದಲ್ಲಿ ಮತ್ತೊಮ್ಮೆ ಆಡಲಿ ಅಥವಾ ಬಿಡಲಿ ಅವರನ್ನು 2021ರ ಐಪಿಎಲ್ ಆಟಗಾರರ ಹರಾಜಿನ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ತನ್ನಲ್ಲೇ ಉಳಿಸಿಕೊಳ್ಳಲಿದೆ ಎಂದು ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಹೇಳಿದ್ದಾರೆ.

ನಾಯಕನಾಗಿ ಎರಡು ಬಾರಿ ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟಿರುವ ಧೋನಿಗೆ ಈ ಬಾರಿ ಕೇಂದ್ರೀಯ ಗುತ್ತಿಗೆಯಲ್ಲಿ ಬಿಸಿಸಿಐ ಸ್ಥಾನ ನೀಡದೆ ಇರುವ ಕಾರಣ ಶೀಘ್ರವೇ ನಿವೃತ್ತಿಯಾಗಲಿದ್ದಾರೆಂಬ ವದಂತಿಗೆ ಪ್ರತಿಕ್ರಿಯಿಸಿದ ಶ್ರೀನಿವಾಸನ್,ಧೋನಿ ತನ್ನ ಫ್ರಾಂಚೈಸಿಯ ಪರ ಆಡುವುದನ್ನು ಮುಂದುವರಿಸಲಿದ್ದಾರೆ ಎಂದರು.

‘‘ಧೋನಿ ಎಷ್ಟು ದಿನ ತಂಡದಲ್ಲಿರುತ್ತಾರೆ, ಇನ್ನೆಷ್ಟು ದಿನ ಆಡುತ್ತಾರೆ ಎಂದು ಜನ ಕೇಳುತ್ತಿದ್ದಾರೆ. ಅವರು ಈ ವರ್ಷ ಆಡುತ್ತಾರೆಂದು ನಾನು ನಿಮಗೆ ಭರವಸೆ ನೀಡುವೆ. ಮುಂದಿನ ವರ್ಷ ಅವರು ಹರಾಜಿನ ಪಟ್ಟಿಯಲ್ಲಿರುತ್ತಾರೆ. ಅವರನ್ನು ನಮ್ಮ ತಂಡದಲ್ಲೇ ಉಳಿಸಿಕೊಳ್ಳಲಾಗುವುದು. ಈ ಕುರಿತು ಯಾರಿಗೂ ಸಂಶಯ ಬೇಡ’’ ಎಂದು ಇಂಡಿಯಾ ಸಿಮೆಂಟ್‌ನ ಆಡಳಿತ ನಿರ್ದೇಶಕರಾಗಿರುವ ಶ್ರೀನಿವಾಸನ್ ಹೇಳಿದ್ದಾರೆ.

ಧೋನಿ 2008ರಲ್ಲಿ ನಡೆದ ಮೊದಲ ಆವೃತ್ತಿಯ ಐಪಿಎಲ್‌ನಿಂದ ಚೆನ್ನೈ ತಂಡದಲ್ಲೇ ಇದ್ದಾರೆ. ಚೆನ್ನೈ ತಂಡ ಎರಡು ವರ್ಷಗಳ ಕಾಲ ಅಮಾನತಿನಲ್ಲಿದ್ದ ವೇಳೆ ಬೇರೆ ಫ್ರಾಂಚೈಸಿಯಲ್ಲಿ ಆಡಿದ್ದರು. ಚೆನ್ನೈ ತಂಡವನ್ನು ನಾಯಕನಾಗಿ ದಕ್ಷವಾಗಿ ಮುನ್ನಡೆಸಿದ್ದ ಅವರು ಮೂರು ಬಾರಿ ಪ್ರಶಸ್ತಿ ಜಯಿಸಲು ನೆರವಾಗಿದ್ದರು. ಕಳೆದ ವರ್ಷ ಜುಲೈನಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ವಿಶ್ವಕಪ್‌ನ ಸೆಮಿ ಫೈನಲ್‌ನಲ್ಲಿ ಭಾರತ ಸೋತ ಬಳಿಕ ಧೋನಿ ಟೀಮ್ ಇಂಡಿಯಾದಿಂದ ದೂರ ಉಳಿದಿದ್ದರು. ಗುರುವಾರ ಬಿಸಿಸಿಐ ಪ್ರಕಟಿಸಿರುವ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿ 38ರ ಹರೆಯದ ಧೋನಿಯವರನ್ನು ಕೈಬಿಟ್ಟ ಬಳಿಕ ಅವರ ವೃತ್ತಿಭವಿಷ್ಯದ ಕುರಿತಂತೆ ಮತ್ತೆ ಊಹಾಪೋಹ ಹರಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News