ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಇಂದು ಆಯ್ಕೆ ಸಾಧ್ಯತೆ

Update: 2020-01-20 05:20 GMT

ಹೊಸದಿಲ್ಲಿ, ಜ.20:  ಬಿಜೆಪಿ ಕಾರ್ಯಾಧ್ಯಕ್ಷ  ಜಗತ್ ಪ್ರಕಾಶ್ ನಡ್ಡಾ ಅವರು ಸೋಮವಾರ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ  ಆಯ್ಕೆಯಾಗಲಿದ್ದಾರೆ.

ಬೆಳಗ್ಗೆ   10.30 ಕ್ಕೆ ನಡ್ಡಾ ಅವರು ಈ ಹುದ್ದೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಪಕ್ಷದ ಉನ್ನತ ಹುದ್ದೆಗೆ ಏರುವುದು ನಿಶ್ಚಿತ ,ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಶಾ ಅವರು ನಡ್ಡಾ ಅವರನ್ನು ಈಗಾಗಲೇ ಉನ್ನತ ಹುದ್ದೆಗೆ ಆಯ್ಕೆ ಮಾಡಿದ್ದಾರೆ. ಕೇಂದ್ರ ಸಚಿವರು ಮತ್ತು ವಿವಿಧ  ರಾಜ್ಯಗಳ  ಪಕ್ಷದ ನಾಯಕರು  ನಡ್ಡಾ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡ ರಾಧಾ ಮೋಹನ್ ಸಿಂಗ್ ಅವರು  ಸಾಂಸ್ಥಿಕ ಚುನಾವಣಾ ಪ್ರಕ್ರಿಯೆಯ ಉಸ್ತುವಾರಿ ವಹಿಸಿಕೊಂಡು ಚುನಾವಣಾ  ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ನಡ್ಡಾ ಅವರ ಹೆಸರನ್ನು ಪಕ್ಷದ ಮಾಜಿ ಮುಖ್ಯಸ್ಥರು ಮತ್ತು ಸಂಸದೀಯ ಮಂಡಳಿ ಸದಸ್ಯರು ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಪ್ರಸ್ತಾಪಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಡ್ಡಾ ಅವರನ್ನು ಕಳೆದ ಜುಲೈನಲ್ಲಿ ಪಕ್ಷದ ಕಾರ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.  ಹಿಮಾಚಲ ಪ್ರದೇಶದ ನಾಯಕ ಇದೀಗ ಬಿಜೆಪಿಯ ಉನ್ನತ ಹುದ್ದೆಗೆ ಏರುತ್ತಿದ್ದಾರೆ.

2019 ರ ಲೋಕಸಭಾ ಚುನಾವಣೆಯ ವೇಳೆ  ಅವರು  ರಾಜಕೀಯವಾಗಿ ಮಹತ್ವದ ರಾಜ್ಯವಾಗಿರುವ ಉತ್ತರಪ್ರದೇಶದ ಬಿಜೆಪಿಯ ಚುನಾವಣಾ ಪ್ರಚಾರದ ಉಸ್ತುವಾರಿ ವಹಿಸಿದ್ದರು, ಅಲ್ಲಿ ಪಕ್ಷವು ಸಮಾಜವಾದಿ ಪಕ್ಷದ (ಎಸ್‌ಪಿ) ಮಹಾ ಮೈತ್ರಿಕೂಟದಿಂದ ಕಠಿಣ ಸವಾಲನ್ನು ಎದುರಿಸಿತು. ಬಿಜೆಪಿ  ಉತ್ತರ ಪ್ರದೇಶದ 80 ಲೋಕಸಭಾ ಸ್ಥಾನಗಳಲ್ಲಿ 62 ಸ್ಥಾನಗಳನ್ನು ಗೆದ್ದಿದೆ.

ನಡ್ಡಾ ಬಹಳ ಹಿಂದಿನಿಂದಲೂ ಬಿಜೆಪಿ ಸಂಸದೀಯ ಮಂಡಳಿಯ ಸದಸ್ಯರಾಗಿದ್ದರು, ಇದು ಅದರ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿದೆ. ಅವರು ಮೊದಲ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ಹೊಸ ಅಧ್ಯಕ್ಷರ ಚುನಾವಣೆಯು ಈಗಿನ ಶಾ ಅವರ ಐದೂವರೆ ವರ್ಷಗಳ ಅಧಿಕಾರಾವಧಿಯನ್ನು ಕೊನೆಗೊಳಿಸಲಿದೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News