ಫೆಡರರ್ ಗೆಲುವಿನ ಆರಂಭ, ಶಪೊವಾಲೊವ್‌ಗೆ ಸೋಲು

Update: 2020-01-21 03:57 GMT

ಮೆಲ್ಬೋರ್ನ್, ಜ.20: ಸ್ವಿಸ್ ಸೂಪರ್‌ಸ್ಟಾರ್ ರೋಜರ್ ಫೆಡರರ್ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸೋಮವಾರ ಆರಂಭವಾದ ವರ್ಷದ ಮೊದಲ ಗ್ರಾನ್‌ಸ್ಲಾಮ್ ಟೂರ್ನಿ ಆಸ್ಟ್ರೇಲಿಯನ್ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ. 20 ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್‌ಗೆ ಕಾಲಿಟ್ಟ ಬಳಿಕ ಈ ತನಕ ಫೆಡರರ್ ಮೊದಲ ಸುತ್ತಿನಲ್ಲಿ ಸೋತಿಲ್ಲ. ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ 38ರ ಹರೆಯದ ಫೆಡರರ್ ಅವರು ಸ್ಟೀವ್ ಜಾನ್ಸನ್‌ರನ್ನು 6-3, 6-2, 6-2 ಸೆಟ್‌ಗಳ ಅಂತರದಿಂದ ಮಣಿಸಿದರು. ಈ ಮೂಲಕ 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲಲು ಮೊದಲ ಹೆಜ್ಜೆ ಇಟ್ಟಿದ್ದಾರೆ. ಎಟಿಪಿ ಕಪ್‌ನಿಂದ ದೂರ ಉಳಿದು ಕುಟುಂಬ ಸದಸ್ಯರೊಂದಿಗೆ ಹೆಚ್ಚಿ ನ ಸಮಯ ಕಳೆದಿರುವ ಫೆಡರರ್ ಮೇಲೆ ವರ್ಷದ ಮೊದಲ ಟೂರ್ನಮೆಂಟ್‌ನಲ್ಲಿ ಹೆಚ್ಚಿನ ನಿರೀಕ್ಷೆ ಇಡಲಾಗಿಲ್ಲ. ಹೆಚ್ಚು ಪ್ರಾಕ್ಟೀಸ್ ನಡೆಸದ ಫೆಡರರ್ ಅಮೆರಿಕದ ಆಟಗಾರನ ವಿರುದ್ಧ ಚೆನ್ನಾಗಿ ಆಡಿದರು.

ಫೆಡರರ್ ಮುಂದಿನ ಸುತ್ತಿನಲ್ಲಿ ಫ್ರೆಂಚ್ ಕ್ವಾಲಿಫೈಯರ್ ಕ್ವಿಂಟಿನ್ ಹೇಲ್ಸ್ ಅಥವಾ ಸರ್ಬಿಯದ ಫಿಲಿಪ್ ಕ್ರಾಜಿನೊವಿಕ್‌ರನ್ನು ಎದುರಿಸಲಿದ್ದಾರೆ. 2018ರಲ್ಲಿ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಯಶಸ್ಸು ಕಂಡಿರುವ ಫೆಡರರ್ 21ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಮಾತ್ರವಲ್ಲ, ಆಸ್ಟ್ರೇಲಿಯದಲ್ಲಿ ಏಳನೇ ಪ್ರಶಸ್ತಿಯತ್ತ ಚಿತ್ತವಿರಿಸಿದ್ದಾರೆ. 2000ರಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೆಡರರ್ ಮೂರನೇ ಸುತ್ತಿನಲ್ಲಿ ಸೋತು ಹೊರ ನಡೆದಿದ್ದರು. 38ನೇ ವಯಸ್ಸಿನಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಿರುವ ಫೆಡರರ್ ಕಳೆದ ವರ್ಷ ನಾಲ್ಕು ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ವಿಂಬಲ್ಡನ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್‌ಗೆ ತಲುಪಿದ್ದ ಫೆಡರರ್ ಅವರು ನೊವಾಕ್ ಜೊಕೊವಿಕ್ ವಿರುದ್ಧ ಐದು ಸೆಟ್‌ಗಳ ಅಂತರದಿಂದ ಸೋತಿದ್ದರು. ಫೆಡರರ್ 2019ರಲ್ಲಿ ಗ್ರಾನ್‌ಸ್ಲಾಮ್ ಬರ ಎದುರಿಸಿದ್ದು, ಜೊಕೊವಿಕ್ ಹಾಗೂ ರಫೆಲ್ ನಡಾಲ್ ತಲಾ ಎರಡು ಪ್ರಶಸ್ತಿ ಜಯಿಸಿದ್ದರು.

► ಶಪೊವಾಲೊವ್‌ಗೆ ಸೋಲು

ಕೆನಡಾದ ಯುವ ಆಟಗಾರ ಡೆನಿಸ್ ಶಪೊವಾಲೊವ್ ಮೊದಲ ಸುತ್ತಿನಲ್ಲೇ ಸೋಲುವ ಮೂಲಕ ಆಸ್ಟ್ರೇಲಿಯನ್ ಓಪನ್‌ನಿಂದ ಬೇಗನೆ ಗಂಟುಮೂಟೆ ಕಟ್ಟಿದರು.ವಿಶ್ವದ ನಂ.13ನೇ ಆಟಗಾರ ಶಪೊವಾಲೊವ್ ಹಂಗೇರಿಯದ ಮಾರ್ಟನ್ ಫುಸೊವಿಕ್ಸ್ ವಿರುದ್ಧ 3-6, 6-7(7), 1-6,6-7(3) ಸೆಟ್‌ಗಳ ಅಂತರದಿಂದ ಸೋತಿದ್ದಾರೆ. ಸೋತ ಹತಾಶೆಯಲ್ಲಿ ತನ್ನ ಟೆನಿಸ್ ರಾಕೆಟನ್ನು ಎಸೆದ ಶಪೊವಾಲೊವ್ ಅಂಪೈರ್‌ರೊಂದಿಗೆ ವಾಗ್ವಾದ ನಡೆಸಿ ವಿವಾದಕ್ಕೆ ಸಿಲುಕಿದರು.

ಜೊಕೊವಿಕ್‌ಗೆ ಜಯ

ಮೆಲ್ಬೋರ್ನ್, ಜ.20: ಹಾಲಿ ಚಾಂಪಿಯನ್ ನೊವಾಕ್ ಜೊಕೊವಿಕ್ 2006ರ ಬಳಿಕ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್‌ನ ಮೊದಲ ಸುತ್ತಿನಲ್ಲಿ ಮೊದಲ ಸೆಟ್‌ನ್ನು ಕಳೆದುಕೊಂಡ ಹೊರತಾ ಗಿಯೂ ಯುವ ಆಟಗಾರ ಜಾನ್-ಲೆನಾರ್ಡ್ ಸ್ಟ್ರಫ್‌ರನ್ನು ಮಣಿಸಿ ಶುಭಾರಂಭ ಮಾಡಿದರು.

ಮೆಲ್ಬೋರ್ನ್ ಪಾರ್ಕ್‌ನಲ್ಲಿ ಸೋಮವಾರ ಆರಂಭವಾದ ಆಸ್ಟ್ರೇಲಿಯನ್ ಓಪನ್‌ನ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸರ್ಬಿಯ ಆಟಗಾರ ಜೊಕೊವಿಕ್ 7-6(7/5), 6-2, 2-6, 6-1 ಸೆಟ್‌ಗಳ ಅಂತರದಿಂದ ಜಯ ಸಾಧಿಸಿದರು.

ವೃತ್ತಿಬದುಕಿನಲ್ಲಿ 900ನೇ ಗೆಲುವು ದಾಖಲಿಸಿದ ಜೊಕೊವಿಕ್ ಸತತ 14ನೇ ವರ್ಷ ಮೆಲ್ಬೋರ್ನ್ ಪಾರ್ಕ್‌ನಲ್ಲಿ ಎರಡನೇ ಸುತ್ತಿಗೆ ತೇರ್ಗಡೆಯಾದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News