​ದೆಹಲಿ ಚುನಾವಣೆ: ಕೇಜ್ರಿವಾಲ್ ವಿರುದ್ಧ ಬಿಜೆಪಿ ಸ್ಪರ್ಧಿ ಯಾರು ಗೊತ್ತೇ?

Update: 2020-01-21 04:01 GMT
ಅರವಿಂದ್ ಕೇಜ್ರಿವಾಲ್ 

ಹೊಸದಿಲ್ಲಿ, ಜ.21: ದೆಹಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದ್ದು, ಪ್ರತಿಷ್ಠಿತ ಹೊಸದಿಲ್ಲಿ ಕ್ಷೇತ್ರದಿಂದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಸುನೀಲ್ ಯಾದವ್ ಅವರನ್ನು ಕಣಕ್ಕಿಳಿಸಿದೆ.

ಇನ್ನೊಂದೆಡೆ ಎನ್‌ಎಸ್‌ಯುಐ ದೆಹಲಿ ಘಟಕದ ಮಾಜಿ ಅಧ್ಯಕ್ಷ ರಮೇಶ್ ಸಬರ್‌ವಾಲ್ ಅವರನ್ನು ಎಎಪಿ ಧುರೀಣನ ವಿರುದ್ಧ ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ಕೇಜ್ರೀವಾಲ್ ಅವರು 2013 ಹಾಗೂ 2015ರ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಅಗಾಧ ಅಂತರದ ಗೆಲುವು ಸಾಧಿಸಿದ್ದರು.

ಶಿರೋಮಣಿ ಅಕಾಲಿದಳ ಜತೆಗಿನ ಮೈತ್ರಿ ಮಾತುಕತೆ ಮುರಿದು ಬಿದ್ದ ಬೆನ್ನಲ್ಲೇ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆ ಮಾಡಿದೆ. ಮೈತ್ರಿ ಮುರಿದು ಬಿದ್ದ ಬಳಿಕ ಹೇಳಿಕೆ ನೀಡಿರುವ ಶಿರೋಮಣಿ ಅಕಾಲಿದಳ, ದೆಹಲಿ ಚುನಾವಣೆಯಿಂದ ಹೊರಗುಳಿಯುವುದಾಗಿ ಪ್ರಕಟಿಸಿದೆ. ಬಿಜೆಪಿಯ ಎರಡನೇ ಪಟ್ಟಿಯಲ್ಲಿ ಶಿರೋಮಣಿ ಅಕಾಲಿದಳ ಸ್ಪರ್ಧಿಸಲು ಬಯಸಿದ್ದ ನಾಲ್ಕು ಸ್ಥಾನಗಳ ಅಭ್ಯರ್ಥಿಗಳ ಹೆಸರು ಕೂಡಾ ಸೇರಿದೆ.

ಹರಿನಗರ ಕ್ಷೇತ್ರದಿಂದ ಪಕ್ಷದ ವಕ್ತಾರ ತೇಜೀಂದರ್ ಪಾಲ್ ಬಗ್ಗಾ ಅವರನ್ನು ಹಾಗೂ ಶಹಾದರ ಕ್ಷೇತ್ರದಿಂದ ಇಡಿಎಂಸಿ ಮಾಜಿ ಉಪಮೇಯರ್ ಸಂಜಯ್ ಗೋಯಲ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ.

ಬುರರಿ ಹಾಗೂ ಸಂಗಮ್ ವಿಹಾರ್ ಕ್ಷೇತ್ರಗಳನ್ನು ಬಿಜೆಪಿ ಮಿತ್ರಪಕ್ಷವಾದ ಸಂಯುಕ್ತ ಜನತಾದಳಕ್ಕೆ ಬಿಟ್ಟುಕೊಟ್ಟಿದೆ. ಅಂತೆಯೇ ಸೀಮಾಪುರಿ ಕ್ಷೇತ್ರದಲ್ಲಿ ಮತ್ತೊಂದು ಮಿತ್ರಪಕ್ಷ ಲೋಕತಾಂತ್ರಿಕ ಜನಶಕ್ತಿ ಪಾರ್ಟಿ ಅಭ್ಯರ್ಥಿ ಕಣಕ್ಕೆ ಇಳಿಯಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News