ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯ ಅವಾಂತರ

Update: 2020-01-22 07:00 GMT

ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಾಗಿ ಹಠ ಹಿಡಿದು ಸಂವಿಧಾನದ ಜೊತೆಗೆ ಸಂಘರ್ಷಕ್ಕೆ ಮುಂದಾದ ಗೃಹಮಂತ್ರಿ ಅಮಿತ್ ಶಾ ಪ್ರಜೆಗಳ ಮೇಲೆ ಸೇಡು ತೀರಿಸಿಕೊಳ್ಳಲು ಹೊರಟಿದ್ದಾರೆ. ಈ ಕರಾಳ ಕಾನೂನು ಮೇಲ್ನೋಟಕ್ಕೆ ಅಲ್ಪಸಂಖ್ಯಾತ ಮುಸ್ಲಿಮರನ್ನು ಗುರಿಯಾಗಿರಿಸಿದಂತೆ ಕಂಡರೂ ವಾಸ್ತವವಾಗಿ ಹಿಂದೂಗಳು, ಲಿಂಗಾಯತರು, ಜೈನರು, ಕ್ರೈಸ್ತರು ಸೇರಿದಂತೆ ಎಲ್ಲ ಜಾತಿಯ ದುಡಿದುಂಡು ಜೀವಿಸುವ ಬಡವರು ಇದಕ್ಕೆ ಬಲಿಪಶುವಾಗುತ್ತಿದ್ದಾರೆ. ಇದಕ್ಕೆ ಬೆಂಗಳೂರಿನಲ್ಲಿ ಸೋಮವಾರ ನಡೆದ ಘಟನೆ ಒಂದು ಜ್ವಲಂತ ಉದಾಹರಣೆಯಾಗಿದೆ. ಹೊಟ್ಟೆಪಾಡಿಗಾಗಿ ರಾಜಧಾನಿ ಬೆಂಗಳೂರಿಗೆ ಬಂದ ಉತ್ತರ ಕರ್ನಾಟಕದ ಕಟ್ಟಡ ಮತ್ತು ಇತರ ಕಡೆ ಕೆಲಸ ಮಾಡುವ ದಿನಗೂಲಿ ಕಾರ್ಮಿಕರನ್ನು ಬಾಂಗ್ಲಾದೇಶದ ಪ್ರಜೆಗಳೆಂದು ಹಣೆಪಟ್ಟಿ ಕಟ್ಟಿ ಅವರ ಗುಡಿಸಲುಗಳನ್ನು ಪೊಲೀಸರು ನೆಲಸಮಗೊಳಿಸಿದ್ದಾರೆ. ಇದರಿಂದ ತಮ್ಮ ಬದುಕು ಮೂರಾಬಟ್ಟೆಯಾಗಿದೆ ಎಂದು ಈ ಕಾರ್ಮಿಕರು ಗೋಳಾಡುತ್ತಿದ್ದಾರೆ. ಇವರೆಲ್ಲ ಬಹುತೇಕ ದಲಿತ, ಹಿಂದುಳಿದ ಸಮುದಾಯಗಳಿಗೆ ಸೇರಿದವರು.

ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಅಸಹಜ ಆಸಕ್ತಿ ತೋರಿಸಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಪೊಲೀಸರ ಮೂಲಕ ಕರಿಯಮ್ಮನ ಅಗ್ರಹಾರ, ದೇವರ ಬೀಸನಹಳ್ಳಿಗಳಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ದಿನಗೂಲಿ ಕಾರ್ಮಿಕರ ಜೋಪಡಿಗಳನ್ನು ಏಕಾಏಕಿ ನೆಲಸಮಗೊಳಿಸಿದೆ. ಈ ಬಗ್ಗೆ ಪ್ರಶ್ನಿಸಿದರೆ, ಕೊಪ್ಪಳದ ಕಾರ್ಮಿಕರಿಗೆ ‘‘ಬಾಂಗ್ಲಾದೇಶದವರು ಇಲ್ಲಿರಬಾರದು ವಾಪಸ್ ಹೋಗಿ’’ ಎಂದು ಬಿಬಿಎಂಪಿ ಅಧಿಕಾರಿಗಳು ಬೆದರಿಸಿರುವುದು ಖಂಡನೀಯವಾಗಿದೆ. ಕನ್ನಡ ಮಾತಾಡುವ ಕೊಪ್ಪಳದ ಕಟ್ಟಡ ಕಾರ್ಮಿಕರನ್ನು ಬಾಂಗ್ಲಾದೇಶದವರೆಂದು ಕರೆದು ಅವರ ಕಷ್ಟಾರ್ಜಿತ ಸಂಪಾದನೆಯಿಂದ ನಿರ್ಮಿಸಿಕೊಂಡ ಗುಡಿಸಲುಗಳನ್ನು ನೆಲಸಮಗೊಳಿಸುವುದು ಅತಿರೇಕದ ಕ್ರಮವಾಗಿದೆ. ಈ ಕಾರ್ಮಿಕರು ತಮ್ಮ ಊರಾದ ಕೊಪ್ಪಳದ ಮೂಲ ದಾಖಲೆಗಳನ್ನು ತೋರಿಸಿದರೂ ಕೂಡ ಅದನ್ನು ನೋಡುವ ತಾಳ್ಮೆಯಿಲ್ಲದ ಅಧಿಕಾರಿಗಳು ದೌರ್ಜನ್ಯದಿಂದ ವರ್ತಿಸಿದ್ದಾರೆ.

ಇದು ಪಾಲಿಕೆಯ ಜಾಗವಲ್ಲ. ಜಾಗದ ಮಾಲಕರಿಗೆ ತಿಂಗಳಿಗೆ ಮೂರು ಸಾವಿರ ರೂಪಾಯಿ ಬಾಡಿಗೆ ಕೊಟ್ಟು ಗುಡಿಸಲು ಕಟ್ಟಿಕೊಂಡಿದ್ದ ಈ ಶ್ರಮಜೀವಿಗಳ ಬದುಕು ಈಗ ಬೀದಿಗೆ ಬಂದು ಬಿದ್ದಿದೆ.

  ಇದು ಒಂದು ಉದಾಹರಣೆ ಮಾತ್ರ. ದೇಶದ ಬಹುತೇಕ ಕಡೆ ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯ ಹೆಸರಿನಲ್ಲಿ ಬಡವರ ಬದುಕಿನ ಮೇಲೆ ದಾಳಿ ನಡೆದಿದೆ. ವಾಸ್ತವವಾಗಿ ಕೇಂದ್ರದ ಬಿಜೆಪಿ ಸರಕಾರ ಧರ್ಮದ ಆಧಾರದಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನಗಳಿಂದ ಬಂದವರಿಗೆ ಪೌರತ್ವ ನೀಡಲು ಹೊರಟಿರುವುದು ಸಂವಿಧಾನ ವಿರೋಧಿಯಾಗಿದೆ. ಸಿಎಎ ಯಿಂದ ಭಾರತದಲ್ಲಿ ನೆಲೆಸಿದ ಜನರ ಪೌರತ್ವಕ್ಕೆ ಯಾವುದೇ ಧಕ್ಕೆಯಾಗುವುದಿಲ್ಲವೆಂದು ಸರಕಾರ ಜನರನ್ನು ದಾರಿ ತಪ್ಪಿಸುತ್ತಿದೆ. ಸುಳ್ಳು ಹೇಳುತ್ತಿದೆ. ಆದರೆ ಈ ದೇಶದಲ್ಲಿ 48 ಕೋಟಿ ಮಂದಿ ಭೂರಹಿತರಿದ್ದಾರೆ. ಬುಡಕಟ್ಟು ಸಮುದಾಯಗಳಿಗೆ ಸೇರಿದ ಹತ್ತು ಕೋಟಿ ಜನರಿದ್ದಾರೆ. 6 ಕೋಟಿ ಮಂದಿ ಅಲೆಮಾರಿಗಳಿದ್ದಾರೆ. 48 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಇವರ ಬಳಿ ಸರಕಾರ ಬಯಸುವ ಯಾವ ದಾಖಲೆಗಳೂ ಇಲ್ಲ. ಇಂಥ ದಾಖಲೆಗಳಿಲ್ಲದ ಬಡವರು ಎಲ್ಲ ಸಮುದಾಯಗಳಿಗೆ ಸೇರಿದ್ದಾರೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಇಂಥವರ ಬದುಕನ್ನು ಚಿಂದಿಚಿಂದಿ ಮಾಡಲು ಹೊರಟಿದೆ.

ದೇಶ ಆರ್ಥಿಕ ಬಿಕ್ಕಟ್ಟಿನ ಸುಳಿಗೆ ಸಿಲುಕಿರುವಾಗ, ಬೆಲೆಏರಿಕೆ, ಹಣದುಬ್ಬರದಿಂದ ಜನ ತತ್ತರಿಸಿರುವಾಗ, ಜಿಡಿಪಿ ಪಾತಾಳಕ್ಕೆ ಕುಸಿದಿರುವಾಗ ಇಂಥ ಜ್ವಲಂತ ಸಮಸ್ಯೆಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಮಾತ್ರವಲ್ಲ, ಫ್ಯಾಶಿಸ್ಟ್ ಹಿಂದೂರಾಷ್ಟ್ರ ನಿರ್ಮಿಸಲು ಈ ಸರಕಾರ ಇಂಥ ಜನವಿರೋಧಿ, ಜೀವ ವಿರೋಧಿ ಕಾಯ್ದೆಯನ್ನು ತಂದಿದೆ.

ಇದನ್ನು ತಮ್ಮ ಅಧಿಕಾರಾವಧಿಯಲ್ಲೇ ಜಾರಿಗೆ ತರುವ ಆತುರ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬಾಯಿಗೆ ಬಂದಂತೆ ಮಾತಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ರೀತಿ ಹೇಳಿಕೆಯನ್ನು ನೀಡಿ ದೇಶವನ್ನು, ದೇಶದ ಜನರನ್ನು ಕತ್ತಲಲ್ಲಿಡುತ್ತಿದ್ದಾರೆ. ಅವರಷ್ಟೆ ಅಲ್ಲ, ಹಳ್ಳಿ,ನಗರಗಳ ಗಲ್ಲಿಗಳ ಬಿಜೆಪಿ ನಾಯಕರು ತಮ್ಮ ಮೇಲಿನ ನಾಯಕರನ್ನು ಓಲೈಸಲು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ತಮ್ಮ ಸಂವಿಧಾನ ವಿರೋಧಿ ಕಾರ್ಯಸೂಚಿಯನ್ನು ಜಾರಿಗೆ ತರಲು ಸಂವಿಧಾನದತ್ತ ಅಧಿಕಾರವನ್ನು ಉಪಯೋಗಿಸುತ್ತಿದ್ದಾರೆ ಮತ್ತು ಸರಕಾರಿ ಅಧಿಕಾರಿಗಳು ಮತ್ತು ಪೊಲೀಸರನ್ನು ಬಳಸಿಕೊಳ್ಳುತ್ತಿದ್ದಾರೆ.

ಈ ಪೌರತ್ವ ತಿದ್ದುಪಡಿ ಕಾಯ್ದೆ ದಮನಿತ ದಲಿತ, ಹಿಂದುಳಿದ ಜನರ ವಿರೋಧಿಯಾಗಿದೆ. ಅಲ್ಲದೆ ಇಂದಲ್ಲ ನಾಳೆ ವೈದಿಕೇತರ ಧರ್ಮಗಳಾದ ಜೈನ ಮತ್ತು ಬೌದ್ಧ ಧರ್ಮದ ಅನುಯಾಯಿಗಳಿಗೂ ಇದು ಗಂಡಾಂತರಕಾರಿಯಾಗಲಿದೆ. ಇದು ಸರ್ವ ಧರ್ಮಗಳ ಸಮಭಾವದಲ್ಲಿ ನಂಬಿಕೆ ಹೊಂದಿರುವ ಭಾರತೀಯರ ವಿರುದ್ಧ ಹಿಟ್ಲರ್ ಸಿದ್ಧಾಂತದಲ್ಲಿ ನಂಬಿಕೆ ಹೊಂದಿರುವ, ವಂಚನೆಯ ಮೂಲಕ ಪ್ರಭುತ್ವದ ಅಧಿಕಾರ ಸೂತ್ರ ಹಿಡಿದವರು ನಡೆಸಿದ ಹಲ್ಲೆಯಾಗಿದೆ. ಅಂತಲೇ ಜಾತಿ, ಮತವೆನ್ನದೆ ಎಲ್ಲ ಭಾರತೀಯರು ಈ ಕರಾಳ ಕಾಯ್ದೆಯ ವಿರುದ್ಧ ಬಂಡೆದ್ದಿದ್ದಾರೆ. ಜನರ ಈ ಹೋರಾಟಕ್ಕೆ ಜಯವಾದರೆ ಮಾತ್ರ ಬಾಬಾಸಾಹೇಬರ ಸಂವಿಧಾನ ಉಳಿಯುತ್ತದೆ. ಸಂವಿಧಾನ ಉಳಿದರೆ ಈ ದೇಶ ಉಳಿಯುತ್ತದೆ.

ಈಗ ನಡೆದಿರುವುದು ದೇಶದ ಸಂವಿಧಾನದ ಅಳಿವು ಉಳಿವಿನ ಸಂಘರ್ಷ. ಶೇಕಡಾ 46ರಷ್ಟು ಮತ ಪಡೆದು ಅಧಿಕಾರ ಸೂತ್ರ ಹಿಡಿದ ಬಿಜೆಪಿ ಜನಾದೇಶ ಪಡೆದಿರುವುದು ಸಂವಿಧಾನ ವಿರೋಧಿ ಕೃತ್ಯಗಳನ್ನು ಎಸಗಲು ಅಲ್ಲ. ಈ ದೇಶದ ಸಂವಿಧಾನ ಜಾತಿ, ಧರ್ಮ, ಭಾಷೆ ಪ್ರದೇಶದ ಆಧಾರದಲ್ಲಿ ಪ್ರಜೆಗಳನ್ನು ತಾರತಮ್ಯದಿಂದ ಕಾಣಲು ಅವಕಾಶ ನೀಡುವುದಿಲ್ಲ. ಚುನಾಯಿತ ಸರಕಾರ ಸಂವಿಧಾನಕ್ಕೆ ಬದ್ಧವಾಗಿ ಕಾರ್ಯನಿರ್ವಹಿಸಬೇಕು, ಅದನ್ನು ಬಿಟ್ಟು ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರದ ರಹಸ್ಯ ಆದೇಶದಂತೆ ಕಾರ್ಯನಿರ್ವಹಿಸುವುದು ಜನತೆಗೆ ದ್ರೋಹ ಬಗೆದಂತೆ. ಇಂಥ ಜನದ್ರೋಹವನ್ನು ಭಾರತೀಯರು ಎಂದೂ ಸಹಿಸುವುದಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News