ಭಾರತಕ್ಕೆ ಕಠಿಣ ಸವಾಲು ನೀಡಲಿರುವ ನ್ಯೂಝಿಲ್ಯಾಂಡ್

Update: 2020-01-22 19:11 GMT

ವೆಲ್ಲಿಂಗ್ಟನ್, ಜ.22: ನ್ಯೂಝಿಲ್ಯಾಂಡ್‌ನಲ್ಲಿ ಜನವರಿ 24ರಿಂದ ಪ್ರಾರಂಭವಾಗುವ ಟ್ವೆಂಟಿ-20 ಕ್ರಿಕೆಟ್ ಸರಣಿಯಲ್ಲಿ ಭಾರತವನ್ನು ಎದುರಿಸಲು ನ್ಯೂಝಿಲ್ಯಾಂಡ್ ಪ್ರಬಲ 14 ಸದಸ್ಯರ ತಂಡವನ್ನು ಹೆಸರಿಸಿದೆ.

ಭಾರತಕ್ಕೆ ನ್ಯೂಝಿಲ್ಯಾಂಡ್ ಪ್ರವಾಸವು ಮುಂಬರುವ ಟ್ವೆಂಟಿ-20 ವಿಶ್ವಕಪ್ ತಂಡವನ್ನು ಸಜ್ಜುಗೊಳಿಸಲು ಉತ್ತಮ ಅವಕಾಶ ಒದಗಿಸಿದೆ. ತನ್ನ ಕೊನೆಯ ಅಂತರ್‌ರಾಷ್ಟ್ರೀಯ ಪಂದ್ಯದಿಂದ ಕೇವಲ ನಾಲ್ಕು ದಿನಗಳ ಬಳಿಕ ಭಾರತವು ಇನ್ನೊಂದು ಪ್ರವಾಸಕ್ಕೆ ಸಜ್ಜಾಗಿದೆ. ನ್ಯೂಝಿಲ್ಯಾಂಡ್ ಪ್ರವಾಸ ಸರಣಿ ಶುಕ್ರವಾರ (ಜನವರಿ 24) ಆಕ್ಲೆಂಡ್‌ನಲ್ಲಿ ಮೊದಲ ಟ್ವೆಂಟಿ-20 ಪಂದ್ಯದೊಂದಿಗೆ ಆರಂಭವಾಗಲಿದೆ.

ಆಟಗಾರರು ಇನ್ನೂ ಕಳೆದ ಸರಣಿಯಲ್ಲಿ ಆಡಿ ದಣಿದಿದ್ದರೂ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಅದು ಕ್ರಿಕೆಟ್ ವೇಳಾಪಟ್ಟಿಯಲ್ಲಿ ನಿಗದಿಯಾಗಿರುವ ಸರಣಿಯಿಂದ ಭಾರತ ಯಾವತ್ತೂ ದೂರ ಉಳಿಯುವುದಿಲ್ಲ. ಈ ಬಗ್ಗೆ ಭಾರತದ ಆಟಗಾರರು ತಕರಾರು ಮಾಡುವುದಿಲ್ಲ. ನ್ಯೂಝಿಲ್ಯಾಂಡ್‌ನಲ್ಲಿ ನಡೆಯಲಿರುವ 5 ಪಂದ್ಯಗಳ ಟ್ವೆಂಟಿ-20 ಸರಣಿಯ ಮೂಲಕ ಆಸ್ಟ್ರೇಲಿಯದಲ್ಲಿ ಮುಂದೆ ನಡೆಯಲಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಗೆ ತಯಾರಿಗಾಗಿ ಸಂಯೋಜನೆಯನ್ನು ಅಂತಿಮಗೊಳಿಸಲು ಮತ್ತೊಂದು ಅವಕಾಶವನ್ನು ಒದಗಿಸಲಿದೆ.

ಆಸ್ಟ್ರೇಲಿಯದ ವಾತಾವರಣಕ್ಕಿಂತ ವಿಭಿನ್ನವಾಗಿವೆ

   ಭಾರತವು ಈ ಸರಣಿಯನ್ನು ತಮ್ಮ ಸಿದ್ಧತೆಗಳ ನಿರ್ಣಾಯಕ ಹಂತವಾಗಿ ನೋಡುತ್ತದೆ. ಏಕೆಂದರೆ ಇದು ಆಸ್ಟ್ರೇಲಿಯಕ್ಕೆ ಅಲ್ಲಿ ಹೆಚ್ಚು ದೂರವಿಲ್ಲ. ನ್ಯೂಝಿಲ್ಯಾಂಡ್‌ನ ಮೈದಾನವು ಗಾತ್ರದಲ್ಲಿ ಚಿಕ್ಕದಾಗಿದೆ. ಆದರೆ ಅದನ್ನು ಹೊರತುಪಡಿಸಿದರೆ ಇತರ ಅಂಶಗಳು ಆಸ್ಟ್ರೇಲಿಯವನ್ನು ಹೋಲುತ್ತವೆ. ಪಿಚ್‌ಗಳು ಬ್ಯಾಟ್ಸ್‌ಮನ್ ಸ್ನೇಹಿಯಾಗಿರಬೇಕು ಮತ್ತು ಕೆಲವರು ವೇಗಿಗಳಿಗೆ ಸ್ನೇಹಿಯಾಗಿರಬೇಕು ಎಂದು ಹೇಳುತ್ತಾರೆ. ಸ್ಪಿನ್ನರ್‌ಗಳ ಕಾರ್ಯ ರನ್ ಪ್ರವಾಹ ನಿಯಂತ್ರಿಸುವುದಾಗಿದೆ . ವೇಗಿಗಳಿಗೆ ಪ್ರಮುಖ ಪಾತ್ರ ವಹಿಸಲು ಅನುವು ಮಾಡಿಕೊಡುವುದಾಗಿದೆ.

    ನ್ಯೂಝಿಲ್ಯಾಂಡ್ ಪ್ರವಾಸದ ನಂತರ ಭಾರತ ಬಹುತೇಕ ಆಟಗಾರರು ಐಪಿಎಲ್‌ನಲ್ಲಿ ಭಾಗವಹಿಸಲಿದ್ದಾರೆ. ವಿಶ್ವಕಪ್‌ಗೆ ಮುನ್ನ ಭಾರತಕ್ಕೆ ನ್ಯೂಝಿಲ್ಯಾಂಡ್ ಪ್ರವಾಸವನ್ನು ಹೊರತುಪಡಿಸಿದರೆ ಬೇರೆ ಸರಣಿಗಳಿಲ್ಲ. ಐದು ಪಂದ್ಯಗಳ ಸರಣಿಯು ತಂಡದ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ನೆರವಾಗಲಿದೆ.

ಶಿಖರ್ ಧವನ್ ಅನುಪಸ್ಥಿತಿ : ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತದ ಅತ್ಯುತ್ತಮ ಆರಂಭಿಕ ಜೋಡಿ ಪ್ರಸ್ತುತ ರೋಹಿತ್ ಶರ್ಮಾ ಮತ್ತು ಕೆ.ಎಲ್. ರಾಹುಲ್. ಅನುಭವಿ ಆಟಗಾರ ಶಿಖರ್ ಧವನ್ ಅವರನ್ನು ತಂಡದಲ್ಲಿ ಯಾವ ಸ್ಥಾನಕ್ಕೆ ಸೇರಿಸಿಕೊಳ್ಳುವುದು ಎಂಬ ಬಗ್ಗೆ ಭಾರತವು ಇತ್ತೀಚಿನ ದಿನಗಳಲ್ಲಿ ಇಕ್ಕಟ್ಟಿನ ಪರಿಸ್ಥಿತಿಯನ್ನು ಎದುರಿಸುತ್ತಿತ್ತು. ಆದರೆ ಶಿಖರ್ ಧವನ್ ಭುಜದ ಗಾಯದಿಂದಾಗಿ ತಂಡದಿಂದ ದೂರ ಉಳಿದಿರುವುದು ಆರಂಭಿಕ ಬ್ಯಾಟ್ಸ್‌ಮನ್ ಹುದ್ದೆಗೆ ಆಟಗಾರರ ಆಯ್ಕೆಯನ್ನು ಸುಲಭಗೊಳಿಸಿದೆ.

ಕೊನೆಯ ಟ್ವೆಂಟಿ-20ಯಲ್ಲಿ ಶ್ರೀಲಂಕಾ ವಿರುದ್ಧ ಧವನ್ ಅರ್ಧಶತಕ ಬಾರಿಸಿದರು. ಆದರೆ ಅದನ್ನು ಹೊರತುಪಡಿಸಿ, ಅವರು ಇತ್ತೀಚಿನ ಟ್ವೆಂಟಿ-20 ಕ್ರಿಕೆಟ್ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡಿಲ್ಲ. ಏತನ್ಮಧ್ಯೆ ರಾಹುಲ್ ಗಮನ ಸೆಳೆಯುವ ಪ್ರದರ್ಶನ ನೀಡಿದ್ದಾರೆ. ನ್ಯೂಝಿಲ್ಯಾಂಡ್‌ನಲ್ಲಿ ಐದು ಪಂದ್ಯಗಳ ಸರಣಿಯು ಅವರಿಗೆ ಆರಂಭಿಕ ಬ್ಯಾಟ್ಸ್‌ಮನ್ ಸ್ಥಾನವನ್ನು ಭದ್ರಪಡಿಸಲು ಮತ್ತೊಂದು ಅವಕಾಶವನ್ನು ನೀಡಲಿದೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಮತ್ತು ರೋಹಿತ್ ಟ್ವೆಂಟಿ-20ಯಲ್ಲಿ ಆರಂಭಿಕ ಆಟಗಾರರಾಗಿ ಸ್ಥಿರ ಪ್ರದರ್ಶನ ನೀಡುತ್ತಿರುವುದು ಇದು ಭಾರತ ತಂಡದ ಪಾಲಿಗೆ ಒಳ್ಳೆಯ ಬೆಳವಣಿಗೆಯಾಗಿದೆ.

ಮಧ್ಯಮ ಕ್ರಮಾಂಕಕ್ಕೆ ತಾಲೀಮು

   ಐದು ಪಂದ್ಯಗಳ ಸರಣಿಯು ಭಾರತಕ್ಕೆ ತನ್ನ ಮಧ್ಯಮ ಕ್ರಮಾಂಕದ ಆಯ್ಕೆಗಳನ್ನು ಪರೀಕ್ಷಿಸಲು ಸಾಕಷ್ಟು ಸಮಯ ಒದಗಿಸಿದೆ. ವಿರಾಟ್ ಕೊಹ್ಲಿ ಕೆಳಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರೂ ಕೂದಾ ಭಾರತವು ತನ್ನ ಮಧ್ಯಮ ಕ್ರಮಾಂಕದ ಕೆಲವು ಬ್ಯಾಟ್ಸ್‌ಮನ್‌ಗಳಿಗೆ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಳ್ಳಲು ಹೆಚ್ಚಿನ ಅವಕಾಶ ನೀಡುವತ್ತ ಒಲವು ತೋರಿಸಿದೆ.

  ವೆಸ್ಟ್ ಇಂಡೀಸ್ ವಿರುದ್ಧದ ಟ್ವೆಂಟಿ-20 ಪಂದ್ಯದಲ್ಲಿ ಶಿವಮ್ ದುಬೆ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದಾರೆ. ಅದೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಮತ್ತು ಸಂಜು ಸ್ಯಾಮ್ಸನ್ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಕೊಹ್ಲಿ ಕಳೆದ ಟ್ವೆಂಟಿ-20 ಯಲ್ಲಿ 6ನೇ ಕ್ರಮಾಂಕದಲ್ಲಿ ಆಡಿದ್ದರು.

       ಇತ್ತೀಚಿನ ವರ್ಷಗಳಲ್ಲಿ ಆರಂಭಿಕ ಜೋಡಿಯನ್ನು ಆಯ್ಕೆ ಮಾಡುವುದು ಒಂದು ಸಮಸ್ಯೆಯಾಗಿತ್ತು. ಆದರೆ ಇದೀಗ ಆರಂಭಿಕ ಬ್ಯಾಟ್ಸ್‌ಮನ್‌ಗಳು ಉತ್ತಮ ಮೊತ್ತ ಕಲೆ ಹಾಕುತ್ತಿದ್ದರೂ ಕೂದಾ ತಂಡದಲ್ಲಿರುವ ಇತರ ಆಯ್ಕೆಗಳನ್ನು ಪರೀಕ್ಷಿಸಲು ಭಾರತ ಗಮನ ಹರಿಸಿದೆ. ವಿಶೇಷವಾಗಿ ಏಕದಿನ ಪಂದ್ಯಗಳಲ್ಲಿ ಅಗ್ರ ಮೂರು ಮಂದಿ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ. ಟ್ವೆಂಟಿ-20ಯಲ್ಲಿ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಭಾರತ ಉತ್ಸುಕವಾಗಿದೆ.

ಕೊಹ್ಲಿ ತನ್ನ ಸಾಮರ್ಥ್ಯವನ್ನು ಪರೀಕ್ಷಿಸಲು ಸ್ವತಃ ಮುಂದಾಗಿದ್ದಾರೆ. ಅವರು ಈವರೆಗೆ ಇದರಲ್ಲಿ ಉತ್ತಮವಾಗಿ ಆಡಿದ್ದಾರೆ. ಕಳೆದ ಎರಡು ಪಂದ್ಯಗಳಲ್ಲಿ ಔಟಾಗದೆ 30 ರನ್ (17ಎ) ಮತ್ತು 26 (17 ಎ) ಗಳಿಸಿದ್ದಾರೆ. ನ್ಯೂಝಿಲ್ಯಾಂಡ್‌ನಲ್ಲಿ ಅವರಿಂದ ಇನ್ನಷ್ಟು ಉತ್ತಮವಾಗಿ ಆಡುವುದನ್ನು ನಿರೀಕ್ಷಿಸಲಾಗಿದೆ.

ರಿಷಭ್ ಪಂತ್ ಸ್ಪರ್ಧೆಯಿಂದ ದೂರ ಸರಿಯುವ ಸಾಧ್ಯತೆ: ಲೋಕೇಶ್ ರಾಹುಲ್ ಆಸ್ಟ್ರೇಲಿಯ ವಿರುದ್ಧ ವಿಕೆಟ್ ಕೀಪಿಂಗ್‌ನಲ್ಲಿ ಯಶಸ್ವಿಯಾಗಿರುವುದು ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಹಲವು ಮಂದಿ ವಿಕೆಟ್ ಕೀಪರ್‌ಗಳಿಗೆ ಬಿಸಿ ತಟ್ಟಿದೆ. ಪಂತ್ ತಂಡದಲ್ಲಿ ಅವಕಾಶಕ್ಕಾಗಿ ಸವಾಲು ಎದುರಿಸುವಂತಾಗಿದೆ.

ಪ್ಯಾಟ್ ಕಮಿನ್ಸ್‌ನ ಬೌನ್ಸರ್ ಎದುರಿಸಲು ಹೋದಾಗ ಪಂತ್ ಅವರ ಬ್ಯಾಟ್‌ನ್ನು ಸ್ಪರ್ಶಿಸಿದ ಚೆಂಡು ಬಳಿಕ ಪಂತ್‌ನ ಹೆಲ್ಮೆಟ್‌ಗೆ ಬಡಿದಿತ್ತು. ಇದರಿಂದಾಗಿ ರಾಹುಲ್ ವಿಕೆಟ್ ಕೀಪರ್ ಆಗಿ ಕ್ರೀದಾಂಗಣದಲ್ಲಿ ಹೊಸ ಜವಾಬ್ದಾರಿಯನ್ನು ಹೊತ್ತುಕೊಳ್ಳಲು ಅವಕಾಶ ಒದಗಿಸಿತ್ತು. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್‌ನಲ್ಲಿ ಸಿಕ್ಕಿರುವ ಅವಕಾಶವನ್ನು ರಾಹುಲ್ ಸಮರ್ಥವಾಗಿ ಬಳಸಿಕೊಂಡಿದ್ದಾರೆ.

   ಈ ವರ್ಷ ಟ್ವೆಂಟಿ-20ಗಳಿಗೆ ಭಾರತ ಏಕದಿನ ಪಂದ್ಯಗಳನ್ನು ವೇದಿಕೆಯಾಗಿ ಬಳಸಿಕೊಳ್ಳಲಿದೆ ಎಂದು ಕೋಚ್ ರವಿಶಾಸ್ತ್ರಿ ಇತ್ತೀಚಿನ ಸಂದರ್ಶನದಲ್ಲಿ ಹೇಳಿದ್ದಾರೆ. ಹೀಗಾಗಿ ಅಂತಿಮ ಇಲೆವೆನ್‌ನಲ್ಲಿ ಧವನ್ ಮತ್ತು ರಾಹುಲ್ ಅವರೊಂದಿಗೆ ಆಡಲು ಪಂತ್ ಅವಕಾಶಕ್ಕಾಗಿ ಕಾಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಪಂತ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ರನ್ ಗಳಿಸುವ ಭರವಸೆ ಇದೆ. ಭಾರತದ ಕೊನೆಯ ಟ್ವೆಂಟಿ-20ಯಲ್ಲಿ ಸಂಜು ಸ್ಯಾಮ್ಸನ್‌ಗಾಗಿ ಪಂತ್ ಅವರನ್ನು ಹೊರಗಿಡಲಾಗಿತ್ತು. ಆದರೆ ಅವರು ಇನ್ನೂ ಮೊದಲ ಆಯ್ಕೆಯ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಆಗಿದ್ದಾರೆ. ಪಂತ್ ವೆಸ್ಟ್ ಇಂಡೀಸ್ ವಿರುದ್ಧ ಒಂದೆರಡು ಬಾರಿ ಉತ್ತಮ ಪ್ರದರ್ಶನ ನೀಡಿದ್ದರು. ಅವರು ಅವಕಾಶ ಸಿಕ್ಕಾಗ ಉತ್ತಮ ಪ್ರದರ್ಶನ ನೀಡಲು ಪ್ರಯತ್ನಿಸುತ್ತಾರೆ.

  ಬುಮ್ರಾ ನೇತೃತ್ವದ ವೇಗದ ಬೌಲಿಂಗ್ ವಿಭಾಗ ಬಲಿಷ್ಠ: ವೇಗದ ಬೌಲಿಂಗ್ ವಿಭಾಗದಲ್ಲಿ ಗಾಯದಿಂದ ಹೊರಗುಳಿದಿರುವ ದೀಪಕ್ ಚಹರ್ ಅವರನ್ನು ಹೊರತುಪಡಿಸಿದರೆ ಭಾರತವು ತಮ್ಮ ಪ್ರಬಲ ದಾಳಿಯನ್ನು ಹೊಂದಿದೆ. ಅನುಭವಿ ಮುಹಮ್ಮದ್ ಶಮಿ ಅವರನ್ನು ಹಿಂದಿಕ್ಕಿ ಜಸ್‌ಪ್ರೀತ್ ಬುಮ್ರಾ ಮೇಲುಗೈ ಸಾಧಿಸಿದ್ದಾರೆ. ನವದೀಪ್ ಸೈನಿ ಮತ್ತು ಶಾರ್ದುಲ್ ಠಾಕೂರ್ ವೇಗದ ಆಲ್‌ರೌಂಡರ್‌ಗಳಾಗಿ ಮಿಂಚುತ್ತಿದ್ದಾರೆ. ಕುಲದೀಪ್ ಯಾದವ್ ಮತ್ತು ಯಜುವೇಂದ್ರ ಚಹಾಲ್, ವಾಶಿಂಗ್ಟನ್ ಸುಂದರ್ ಮತ್ತು ರವೀಂದ್ರ ಜಡೇಜ ಅವರನ್ನು ಒಳಗೊಂಡ ಭಾರತ ಬಲಿಷ್ಠ ಬೌಲಿಂಗ್ ಘಟಕವನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News