ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಪುನರ್ ಪರಿಶೀಲನೆ

Update: 2020-01-23 05:04 GMT

ಮುಂಬೈಜ.23: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳ ಪುನರ್  ಪರಿಶೀಲನೆಗೆ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಗೃಹ ಸಚಿವ ಅನಿಲ್ ದೇಶ ಮುಖ್ ಮತ್ತು ಪುಣೆ ಪೊಲೀಸ್ ಅಧಿಕಾರಿಗಳ ಸಭೆ ಆರಂಭವಾಗಿದೆ.

ಈ ಸಭೆಯಲ್ಲಿ ಮಹಾರಾಷ್ಟ್ರದ ಡಿ.ಜಿ. ಸುಬೋಧ್ ಜೈಸ್ವಾಲ್ ಮತ್ತು ರಾಜ್ಯ ಗುಪ್ತಚರ ಆಯುಕ್ತ ರಶ್ಮಿ ಶುಕ್ಲಾ ಉಪಸ್ಥಿತರಿದ್ದು, ಪ್ರಕರಣಗಳಲ್ಲಿ ಮುಂದಿನ ಕ್ರಮಗಳನ್ನು ನಿರ್ಧರಿಸಲಿದ್ದಾರೆ.

“ಕೊರೆಗಾಂವ್-ಭೀಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಈ ಬಗ್ಗೆ ಯೋಚಿಸುತ್ತೇವೆ. ಈ ಬಗ್ಗೆ ತನಿಖೆ ನಡೆಸಲು ಎಸ್‌ಐಟಿ ರಚಿಸುವ ಬಗ್ಗೆ ಬೇಡಿಕೆಗಳು ಬರುತ್ತಿವೆ. ನಾವು ಅದನ್ನು ನಮ್ಮ ಅಧಿಕಾರಿಗಳ ಮೂಲಕ ಪರಿಶೀಲಿಸುತ್ತೇವೆ ಮತ್ತು ಭವಿಷ್ಯದ ಕೋರ್ಸ್ ಅನ್ನು ನಿರ್ಧರಿಸುತ್ತೇವೆ, ” ಎಂದು ಅವರು ಹೇಳಿದರು.

ಡಿಸೆಂಬರ್ 31, 2017 ರಂದು ಪುಣೆಯಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶವನ್ನು ಮಾವೋವಾದಿಗಳು ಬೆಂಬಲಿಸಿದರು. ಈ ಸಂದರ್ಭದಲ್ಲಿ ಮಾಡಿದ ಪ್ರಚೋದನಕಾರಿ  ಭಾಷಣಗಳು ಮರುದಿನ ಜಿಲ್ಲೆಯ ಕೊರೆಗಾಂವ್-ಭೀಮಾ ಯುದ್ಧ ಸ್ಮಾರಕದಲ್ಲಿ ಜಾತಿ ಸಂಘರ್ಷಕ್ಕೆ ಕಾರಣವಾಯಿತು ಎನ್ನುವುದು ಪುಣೆ ಪೊಲೀಸರ ಅಭಿಪ್ರಾಯವಾಗಿದೆ.

ತನಿಖೆಯ ಸಮಯದಲ್ಲಿ ಬಂಧಿಸಲ್ಪಟ್ಟ ಎಡಪಂಥೀಯ ಕಾರ್ಯಕರ್ತರಿಗೆ ಮಾವೋವಾದಿಗಳೊಂದಿಗೆ ಸಂಪರ್ಕವಿದೆ ಎಂದು ಪೊಲೀಸರು ಹೇಳಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆ ಪೊಲೀಸರು ಒಂಬತ್ತು ಕಾರ್ಯಕರ್ತರಾದ ಸುಧೀರ್ ಧವಾಲೆ, ರೋನಾ ವಿಲ್ಸನ್, ಸುರೇಂದ್ರ ಗ್ಯಾಡ್ಲಿಂಗ್, ಮಹೇಶ್ ರೌತ್, ಶೋಮಾ ಸೇನ್, ಅರುಣ್ ಫೆರೀರಾ, ವೆರ್ನಾನ್ ಗೊನ್ಸಾಲ್ವೆಸ್, ಸುಧಾ ಭಾರದ್ವಾಜ್ ಮತ್ತು ವರವರ ರಾವ್ ಅವರನ್ನು ಬಂಧಿಸಿದ್ದರು.

ಎಲ್ಗರ್ ಪರಿಷತ್ ಪ್ರಕರಣದಲ್ಲಿ ಕಾರ್ಯಕರ್ತರ ಬಂಧನವನ್ನು "ತಪ್ಪು" ಮತ್ತು "ಪ್ರತೀಕಾರ" ಎಂದು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಹಿಂದೆ ಹೇಳಿದ್ದರು ಮತ್ತು ಪುಣೆ ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ  ವಿಶೇಷ ತನಿಖಾ ತಂಡವನ್ನು ರಚಿಸಬೇಕು ಎಂದು ಒತ್ತಾಯಿಸಿದ್ದರು.

ಎನ್‌ಸಿಪಿ ಮುಖಂಡ ಮತ್ತು ಶಾಸಕ ಧನಂಜಯ್ ಮುಂಡೆ ಕೂಡಾ ಪ್ರಕರಣಗಳನ್ನು ಹಿಂಪಡೆಯಲು ಕೋರಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ನಾನಾರ್ ರಿಫೈನರಿ ಮತ್ತು ಆರೆ ಮೆಟ್ರೊ ವಿರುದ್ಧ ಪ್ರತಿಭಟನಾಕಾರರ ವಿರುದ್ಧ ಪ್ರಕರಣಗಳನ್ನು ಕೈಬಿಡುವುದಾಗಿ ಘೋಷಿಸಿಸಿದ್ದರು.

ಭೀಮಾ-ಕೊರೆಗಾಂವ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಕಾಂಗ್ರೆಸ್ ಮತ್ತು ಎನ್‌ಸಿಪಿಯ ಬೇಡಿಕೆಯ ಮೇಲೆ ವಿಪಕ್ಷ ಬಿಜೆಪಿ ಇದನ್ನು "ನಕ್ಸಲಿಸಂಗೆ ಸ್ಪಷ್ಟವಾದ ಬೆಂಬಲ" ಎಂದು ಬಣ್ಣಿಸಿದೆ.

"ಪ್ರಕರಣಗಳನ್ನು ಹಿಂಪಡೆಯಬೇಕೆಂಬ ಎನ್‌ಸಿಪಿಯ ಬೇಡಿಕೆಯು ನಕ್ಸಲಿಸಂಗೆ ಒಂದು ಸ್ಪಷ್ಟವಾದ ಬೆಂಬಲವಾಗಿದೆ. ಪುಣೆ  ನ್ಯಾಯಾಲಯವೂ ಸಹ ಆರೋಪಿಗಳ ವಿರುದ್ಧ ಕೆಲವು ಪ್ರಾಥಮಿಕ ಸಾಕ್ಷ್ಯಗಳಿವೆ ಎಂದು ಒಪ್ಪಿಕೊಂಡಿದೆ, ಇದಕ್ಕೆ ಕಾರಣ ಅವರ ಜಾಮೀನು ಅರ್ಜಿಗಳನ್ನು ನ್ಯಾಯಾಲಯ ಸ್ವೀಕರಿಸಲಿಲ್ಲ" ಎಂದು ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಮಾಧವ್ ಭಂಡಾರಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News