ಆಸ್ಟ್ರೇಲಿಯ: ಕಾಡ್ಗಿಚ್ಚು ಆರಿಸುತ್ತಿದ್ದ ವಿಮಾನ ಪತನ

Update: 2020-01-23 16:27 GMT

ಸಿಡ್ನಿ (ಆಸ್ಟ್ರೇಲಿಯ), ಜ. 23: ಸಿಡ್ನಿಯ ನೈರುತ್ಯ ಭಾಗದಲ್ಲಿ ಗುರುವಾರ ಕಾಡ್ಗಿಚ್ಚಿಗೆ ನೀರು ಸುರಿಯುತ್ತಿದ್ದ ಬೃಹತ್ ‘ವಾಟರ್ ಬಾಂಬ್’ ವಿಮಾನವೊಂದು ಪತನಗೊಂಡಿದ್ದು, ಅದರಲ್ಲಿದ್ದ ಎಲ್ಲ ಮೂವರು ಅಮೆರಿಕನ್ ಸಿಬ್ಬಂದಿ ಮೃತಪಟ್ಟಿದ್ದಾರೆ ಎಂದು ಆಸ್ಟ್ರೇಲಿಯದ ಅಧಿಕಾರಿಗಳು ತಿಳಿಸಿದ್ದಾರೆ.

 ಮಂಜಿನಿಂದ ಕೂಡಿದ ಮೊನಾರೊ ವಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೆನಡಕ್ಕೆ ಸೇರಿದ ಸಿ-130 ಹರ್ಕ್ಯುಲಸ್ ವಿಮಾನದೊಂದಿಗಿನ ಸಂಪರ್ಕವನ್ನು ಗುರುವಾರ ಮಧ್ಯಾಹ್ನ 1:30ರ ವೇಳೆಗೆ ಅಧಿಕಾರಿಗಳು ಕಳೆದುಕೊಂಡರು ಎಂದು ನ್ಯೂಸೌತ್‌ವೇಲ್ಸ್ ಗ್ರಾಮೀಣ ಅಗ್ನಿಶಾಮಕ ಕಮಿಶನರ್ ಶೇನ್ ಫೀಟ್ಝಿಮನ್ಸ್ ಹೇಳಿದರು.

ವಿಮಾನದಲ್ಲಿದ್ದ ಎಲ್ಲ ಮೂವರು ಸಿಬ್ಬಂದಿ ಅಮೆರಿಕದ ನಿವಾಸಿಗಳು ಎಂದು ಅವರು ತಿಳಿಸಿದರು. ಆಸ್ಟ್ರೇಲಿಯದ ಕಾಡ್ಗಿಚ್ಚನ್ನು ನಂದಿಸುವುದಕ್ಕಾಗಿ ಅಮೆರಿಕ ಸೇರಿದಂತೆ ಹಲವು ದೇಶಗಳು ಪರಿಣತ ಅಗ್ನಿಶಾಮಕ ಸಿಬ್ಬಂದಿಯನ್ನು ಕಳುಹಿಸಿಕೊಟ್ಟಿವೆ.

ಇದರೊಂದಿಗೆ, ಸೆಪ್ಟಂಬರ್‌ನಲ್ಲಿ ಕಾಡ್ಗಿಚ್ಚು ಆರಂಭಗೊಂಡಂದಿನಿಂದ ಅದಕ್ಕೆ ಬಲಿಯಾದವರ ಸಂಖ್ಯೆ ಕನಿಷ್ಠ 32ಕ್ಕೇರಿದೆ.

ಉಷ್ಣತೆಯಲ್ಲಿ ಹೆಚ್ಚಳ, ಬಲವಾದ ಗಾಳಿ ಎಚ್ಚರಿಕೆ

ಸುಡುತ್ತಿರುವ ಉಷ್ಣತೆ ಮತ್ತು ಬಲವಾದ ಗಾಳಿ ಹೊಸದಾಗಿ ಕಾಡ್ಗಿಚ್ಚು ಪ್ರಕರಣಗಳಿಗೆ ಕಾರಣವಾಗುವ ಸಾಧ್ಯತೆಯಿದೆ ಎಂಬ ಎಚ್ಚರಿಕೆಯ ಬೆನ್ನಲ್ಲೇ, ಆಸ್ಟ್ರೇಲಿಯದ ಅಗ್ನಿಶಾಮಕರು ಗರಿಷ್ಠ ಎಚ್ಚರದಲ್ಲಿ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿದ್ದಾರೆ.

ಕಾಡ್ಗಿಚ್ಚು ಪೀಡಿತ ಪ್ರದೇಶಗಳಲ್ಲಿ ಕಳೆದ ವಾರ ಭಾರೀ ಮಳೆ ಸುರಿದ ಬಳಿಕ, ಪರಿಸ್ಥಿತಿಯಲ್ಲಿ ಕೊಂಚ ಸುಧಾರಣೆ ಗೋಚರಿಸಿತ್ತಾದರೂ, ಈಗ ಉಷ್ಣತೆ ಮತ್ತೆ ಏರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News