ಭಾರತದಲ್ಲಿ ಅಸ್ಪೃಶ್ಯತೆ ಇನ್ನೂ ಜೀವಂತ!

Update: 2020-01-23 09:03 GMT

ಹೈದರಾಬಾದ್, ಜ.22: ಭಾರತದ ಮಹಾನ್ ನಾಯಕರಾದ ಮಹಾತ್ಮಾಗಾಂಧೀಜಿ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅವರು ಅಸ್ಪೃಶ್ಯತೆ ವಿರುದ್ಧ ಹೋರಾಡಿದ್ದರೂ ಮತ್ತು 1950ರಲ್ಲೇ ಸಂವಿಧಾನವು ಅಸ್ಪೃಶ್ಯತೆ ಆಚರಣೆಯು ಅಪರಾಧವೆಂದು ಘೋಷಿಸಿದ್ದರೂ, ಈ ದುಷ್ಟ ಪಿಡುಗು ಈಗಲೂ ಭಾರತದ ಹಲವೆಡೆ ಆಳವಾಗಿ ಬೇರೂರಿದೆಯೆಂದು ಅಧ್ಯಯನ ವರದಿಯೊಂದು ತಿಳಿಸಿದೆ.

ಮಧ್ಯ ಹಾಗೂ ಉತ್ತರಭಾರತದ ಶೇ.89ರಷ್ಟು ಮನೆಗಳಲ್ಲಿ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆಯೆಂಬ ಆಘಾತಕಾರಿ ಸಂಗತಿಯನ್ನು ಇಕನಾಮಿಕ್ ಹಾಗೂ ಪಾಲಿಟಿಕಲ್ ವೀಕ್ಲಿ ಜರ್ನಲ್‌ನಲ್ಲಿ ಪ್ರಕಟವಾದ ವರದಿಯೊಂದು ಬಹಿರಂಗಪಡಿಸಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಶೇ.20ಕ್ಕೂ ಕಡಿಮೆ ಮನೆಗಳಲ್ಲಿ ಅಸ್ಪೃಶ್ಯತೆಯನ್ನು ಆಚರಿಸಲಾಗುತ್ತಿದೆ ಎಂದು ಅಮಿತ್ ಥೋರಟ್ ಹಾಗೂ ಓಂಕಾರ್ ಜೋಶಿ ಅವರು ತಿಳಿಸಿದ್ದಾರೆ. ಭಾರತೀಯ ಮಾನವ ಅಭಿವೃದ್ಧಿ ಸಮೀಕ್ಷೆ-ಐಐ ಅನ್ನು ಬಳಸಿಕೊಂಡು ಅಸ್ಪೃಶ್ಯತೆಯ ಶೇಕಡವಾರು ಪ್ರಮಾಣವನ್ನು ಲೆಕ್ಕಹಾಕಿ, ಈ ವರದಿಯನ್ನು ತಯಾರಿಸಿದ್ದಾರೆ.

ಥೋರಟ್ ಅವರು ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದ ಪ್ರೊಫೆಸರ್ ಆಗಿದ್ದರೆ, ಜೋಶಿ ಅವರು ಸಮಾಜಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಸಂಶೋಧನಾರ್ಥಿಯಾಗಿದ್ದಾರೆ.

ಗ್ರಾಮೀಣ ಭಾರತದ ಶೇ.30ರಷ್ಟು ಮನೆಗಳು ಹಳೆಯ ಕಾಲದ ಅಸ್ಪೃಶ್ಯತೆ ಪದ್ಧತಿಯನ್ನು ಇಂದಿಗೂ ಆಚರಿಸುತ್ತಿವೆಯೆಂದು ಸಮೀಕ್ಷೆ ವರದಿಯು ತಿಳಿಸಿದೆ. ನಗರಪ್ರದೇಶಗಳ ಶೇ.20ರಷ್ಟು ಮನೆಗಳಲ್ಲಿ ಅಸ್ಪೃಶ್ಯತೆ ಆಚರಣೆಯಲ್ಲಿದೆಯೆಂದು ಅದು ಹೇಳಿದೆ.

ಧರ್ಮಾಧಾರಿತ ಅಸ್ಪಶ್ಯತೆ

ಜೈನ ಮನೆಗಳಲ್ಲಿ ಅಸ್ಪಶ್ಯತೆಯ ಪ್ರಮಾಣವು ಅತ್ಯಧಿಕವಾಗಿದ್ದು, ಶೇ.35ರಷ್ಟು ಮಂದಿ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದಾರೆ. ಜೈನರು ಕಟ್ಟಾ ಶಾಖಾಹಾರಿಗಳಾಗಿದ್ದು, ಇತರರು ತಮ್ಮ ಅಡುಗೆಮನೆಯನ್ನು ಪ್ರವೇಶಿಸುವುದನ್ನು ಅವರು ಇಷ್ಟಪಡದಿರುವುದು ಇದಕ್ಕೆ ಕಾರಣವಾಗಿ ರಬಹುದೆಂದು ವರದಿಯಲ್ಲಿ ಅಂದಾಜಿಸಲಾಗಿದೆ. ಅಸ್ಪಶತೆಯ ಆಚರಣೆಯಲ್ಲಿ ಹಿಂದೂಗಳು ಆನಂತರದ ಸ್ಥಾನದಲ್ಲಿದ್ದು ಅವರಲ್ಲಿ ಶೇ.30ರಷ್ಟು ಮಂದಿ ಅದನ್ನು ಆಚರಿಸುತ್ತಿದ್ದಾರೆ. ಬೌದ್ಧಧರ್ಮದ ಅನುಯಾಯಿಗಳಲ್ಲಿ ಅಸ್ಪೃಶ್ಯತೆಯ ಆಚರಣೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದ್ಧು, ಶೇ.1ರಷ್ಟು ಮಂದಿ ಮಾತ್ರವೇ ಅಸ್ಪೃಶ್ಯತೆ ಆಚರಿಸುತ್ತಿದ್ದಾರೆ. ಶೇ.30 ರಷ್ಟು ಅನಕ್ಷರಸ್ಥರು ಈಗಲೂ ಅಸ್ಪೃಶ್ಯತೆಯನ್ನು ಆಚರಿ ಸುತ್ತಿದ್ದರೆ, ಪದವೀಧರ ಅಥವಾ ಡಿಪ್ಲೊಮಾ ಪದವಿ ಹೊಂದಿರುವ ವಯಸ್ಕರ ಪೈಕಿ ಶೇ.6ಮಂದಿಯಲ್ಲಿ ಮಾತ್ರವೇ ಅಸ್ಪೃಶ್ಯತೆಯ ಪಾಲನೆ ಇರುವುದನ್ನು ವರದಿಯು ಕಂಡುಹಿಡಿದಿದೆ.

ಶಿಕ್ಷಣದ ಮಟ್ಟ ಅಭ್ಯುದಯ ಹೊಂದಿದಂತೆ ಬ್ರಾಹ್ಮಣರು, ಒಬಿಸಿ, ಎಸ್ಸಿ, ಎಸ್ಟಿಯಂತಹ ಸಮುದಾಯಗಳಲ್ಲಿ ಅಸ್ಪೃಶ್ಯತೆಯ ಆಚರಣೆಯಲ್ಲಿ ಇಳಿಕೆಯಾಗಿರುವುದು ಕೂಡಾ ಗಮನಕ್ಕೆ ಬಂದಿದೆ. ಪ್ರಾಥಮಿಕ ಶಿಕ್ಷಣದಿಂದ ಪದವಿ ಮಟ್ಟದವರೆಗೆ ಶಿಕ್ಷಣ ದೊರೆತ ಬ್ರಾಹ್ಮಣರಲ್ಲಿಯೂ ಅಸ್ಪೃಶ್ಯತೆ ಆಚರಣೆಯ ಪ್ರಮಾಣವು ಶೇ.69ರಿಂದ ಶೇ.48ಕ್ಕೆ ಕುಸಿದಿದೆ.

ಬಡವರಲ್ಲಿ ಶೇ.32.56 ರಷ್ಟು ಮನೆಗಳು ಅಸ್ಪಶ್ಯತೆ ಆಚರಿಸುತ್ತಿದ್ದರೆ, ಅತ್ಯಂತ ಶ್ರೀಮಂತರಲ್ಲಿ ಈ ಸಂಖ್ಯೆಯು ಶೇ.23.35ಕ್ಕೆ ಕುಸಿದಿದೆ.

ಉತ್ತರ ಹಾಗೂ ಮಧ್ಯಭಾರತದ ರಾಜ್ಯಗಳಲ್ಲಿ ಶೇ.89ರಷ್ಟು ಕುಟುಂಬಗಳು ಇನ್ನೂ ಅಸ್ಪೃಶ್ಯತೆಯನ್ನು ಪಾಲಿಸುತ್ತಿವೆ. ಪಶ್ಚಿಮದ ರಾಜ್ಯಗಳ ಶೇ.13ರಷ್ಟು ಕುಟುಂಬಗಳು ಈಗಲೂ ಈ ತಾರತಮ್ಯವಾದಿ ದುಷ್ಟಪಿಡುಗಿನಲ್ಲಿ ನಂಬಿಕೆಯಿಟ್ಟಿರುವುದಾಗಿ ವರದಿಯು ಬೆಟ್ಟು ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News