ಇಸ್ರೇಲ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ಫ್ರಾನ್ಸ್ ಅಧ್ಯಕ್ಷ

Update: 2020-01-23 14:11 GMT
ಫೈಲ್ ಚಿತ್ರ

ಜೆರುಸಲೇಮ್, ಜ. 23: ಜೆರುಸಲೇಮ್‌ನ ಓಲ್ಡ್ ಸಿಟಿಗೆ ಬುಧವಾರ ಭೇಟಿ ನೀಡಿದ ಫ್ರಾನ್ಸ್ ಅಧ್ಯಕ್ಷ ಇಮಾನುಯೆಲ್ ಮ್ಯಾಕ್ರೋನ್ ಇಸ್ರೇಲ್‌ನ ಭದ್ರತಾ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿ ನಡೆಸಿರುವುದು ವರದಿಯಾಗಿದೆ.

ಜೆರುಸಲೇಮ್‌ನಲ್ಲಿರುವ ಸೇಂಟ್ ಆ್ಯನ್ ಚರ್ಚ್ ಅಂತರ್‌ರಾಷ್ಟ್ರೀಯ ಒಪ್ಪಂದಗಳ ಪ್ರಕಾರ ಫ್ರಾನ್ಸ್‌ಗೆ ಸೇರಿದೆ. ಫ್ರಾನ್ಸ್ ಅಧ್ಯಕ್ಷರು ಅಲ್ಲಿಗೆ ಭೇಟಿ ನೀಡಲು ಹೋಗಿದ್ದಾಗ ಈ ಘಟನೆ ಸಂಭವಿಸಿದೆ.

ಇಸ್ರೇಲ್ ಪೊಲೀಸರು ಮತ್ತು ಇತರ ಭದ್ರತಾ ಏಜಂಟ್‌ಗಳು ಫ್ರಾನ್ಸ್ ಭದ್ರತಾ ಸಿಬ್ಬಂದಿಯನ್ನು ಹಿಂದಿಕ್ಕಿ ಸೇಂಟ್ ಆ್ಯನ್ ಚರ್ಚ್‌ನ್ನು ಮೊದಲು ಪ್ರವೇಶಿಸಿದರು. ಇದು ಮ್ಯಾಕ್ರೋನ್‌ರ ಅಸಮಾಧಾನಕ್ಕೆ ಕಾರಣವಾಯಿತು.

‘‘ಎಲ್ಲರಿಗೂ ನಿಯಮಾವಳಿಗಳ ಬಗ್ಗೆ ಗೊತ್ತಿದೆ. ನನ್ನೆದುರಿನಲ್ಲಿ ನೀವು ಮಾಡಿರುವುದು ನನಗೆ ಸರಿಕಂಡಿಲ್ಲ’’ ಎಂದು ಇಸ್ರೇಲ್ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಅವರು ಹೇಳಿದರು.

‘‘ಹೊರಗೆ ಹೋಗಿ.. ಹೊರಗೆ ನಿಲ್ಲಿ, ದಯವಿಟ್ಟು’’ ಎಂದು ಏರಿದ ಸ್ವರದಲ್ಲಿ ಅವರು ಹೇಳಿದರು.

ಒಲ್ಡ್ ಸಿಟಿಯ ಮುಸ್ಲಿಮ್ ಕ್ವಾರ್ಟರ್‌ನಲ್ಲಿರುವ ವಯಾ ಡೊಲೊರೊಸದ ಆರಂಭದಲ್ಲೇ ರೋಮನ್ ಕೆಥೋಲಿಕ್ ಚರ್ಚ್ ನೆಲೆಸಿದೆ. ಅದು 1850ರಿಂದಲು ಹೋಲಿಲ್ಯಾಂಡ್‌ನಲ್ಲಿರುವ ಫ್ರಾನ್ಸ್ ಭೂಭಾಗಗಳ ಭಾಗವಾಗಿದೆ.

‘‘ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳು ಶತಮಾನಗಳಿಂದಲೂ ಇವೆ. ಅದು ನನ್ನೊಂದಿಗೆ ಬದಲಾಗುವುದಿಲ್ಲ. ಹಾಗಾಗಿ, ಪ್ರತಿಯೊಬ್ಬರೂ ನಿಯಮಗಳನ್ನು ಪಾಲಿಸಬೇಕು’’ ಎಂದು ಅವರು ಅಂತಿಮವಾಗಿ ಇಸ್ರೇಲ್ ಭದ್ರತಾ ಸಿಬ್ಬಂದಿಗೆ ಬುದ್ಧಿ ಮಾತು ಹೇಳಿದರು.

ಜಾಕ್ ಶೀರಕ್ ಭೇಟಿಯ ವೇಳೆಯೂ ಚಕಮಕಿ ನಡೆದಿತ್ತು:

ಈ ಘಟನೆಯು 1996ರಲ್ಲಿ ಅಂದಿನ ಫ್ರಾನ್ಸ್ ಅಧ್ಯಕ್ಷ ದಿವಂಗತ ಜಾಕ್ ಶೀರಕ್‌ರ ಪ್ರಕರಣವನ್ನು ನೆನಪಿಸುತ್ತದೆ. ಅಂದು ಜೆರುಸಲೇಮ್‌ಗೆ ಅವರು ನೀಡಿದ ಭೇಟಿಯ ವೇಳೆ, ಬೇಗ ಬೇಗ ಮುಂದೆ ಹೋಗುವಂತೆ ಇಸ್ರೇಲ್ ಭದ್ರತಾ ಸಿಬ್ಬಂದಿ ಅವರನ್ನು ಒತ್ತಾಯಿಸುತ್ತಿದ್ದರು.

ಒಂದು ಹಂತದಲ್ಲಿ ತಾಳ್ಮೆ ಕಳೆದುಕೊಂಡ ಶೀರಕ್, ನಿಮ್ಮ ವರ್ತನೆಯು ‘ಪ್ರಚೋದನಕಾರಿ’ಯಾಗಿದೆ ಎಂದು ಹೇಳಿದರು. ‘‘ನಿಮಗೆ ಏನು ಬೇಕು? ನಾನು ನನ್ನ ವಿಮಾನಕ್ಕೆ ಹಿಂದೆ ಹೋಗಬೇಕೇ ಹಾಗೂ ಅಲ್ಲಿಂದ ಫ್ರಾನ್ಸ್‌ಗೆ ವಾಪಸ್ ಹೋಗಬೇಕೆ? ನೀವು ಇದನ್ನು ಬಯಸುತ್ತಿದ್ದೀರಾ?’’ ಎಂದು ಇಸ್ರೇಲ್ ಭದ್ರತಾ ಸಿಬ್ಬಂದಿಯನ್ನು ಉದ್ದೇಶಿಸಿ ಕೋಪದಿಂದ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News