ಅಮೆಝಾನ್ ಸ್ಥಾಪಕ ಜೆಫ್ ಬೆಝೋಸ್ ಫೋನ್‌ಗೆ ಕನ್ನ: ತನಿಖೆಗೆ ವಿಶ್ವಸಂಸ್ಥೆ ಪರಿಣತರ ಒತ್ತಾಯ

Update: 2020-01-23 14:29 GMT

ಸ್ಯಾನ್‌ಫ್ರಾನ್ಸಿಸ್ಕೊ (ಅಮೆರಿಕ), ಜ. 23: ಅಮೆಝಾನ್ ಕಂಪೆನಿಯ ಸ್ಥಾಪಕ ಹಾಗೂ ‘ವಾಶಿಂಗ್ಟನ್ ಪೋಸ್ಟ್’ನ ಮಾಲೀಕ ಜೆಫ್ ಬೆಝೋಸ್ ರ ಫೋನ್‌ಗೆ ಕನ್ನಹಾಕುವ ಸಂಚಿನಲ್ಲಿ ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಶಾಮೀಲಾಗಿದ್ದಾರೆ ಎಂಬ ಆರೋಪಗಳ ಬಗ್ಗೆ ಅಮೆರಿಕ ಮತ್ತು ಇತರ ಸಂಸ್ಥೆಗಳು ತಕ್ಷಣ ತನಿಖೆ ನಡೆಸಬೇಕು ಎಂದು ವಿಶ್ವಸಂಸ್ಥೆಯ ಪರಿಣತರು ಒತ್ತಾಯಿಸಿದ್ದಾರೆ.

2018ರಲ್ಲಿ ನಡೆಯಿತೆನ್ನಲಾದ ಸೈಬರ್ ದಾಳಿಯಲ್ಲಿ ಮುಹಮ್ಮದ್ ಬಿನ್ ಸಲ್ಮಾನ್‌ರ ‘ಸಂಭಾವ್ಯ ಪಾತ್ರ’ವಿರುವ ಬಗ್ಗೆ ತಮಗೆ ಮಾಹಿತಿಯಿದೆ ಎಂದು ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಗಳಾದ ಆ್ಯಗ್ನೆಸ್ ಕ್ಯಾಲಮಾರ್ಡ್ ಮತ್ತು ಡೇವಿಡ್ ಕೇಯ್ ಬುಧವಾರ ಹೇಳಿದರು. ಈ ಸೈಬರ್ ದಾಳಿಯ ಬಳಿಕ, ಬಿಲಿಯಾಧೀಶ ತಂತ್ರಜ್ಞಾನ ಉದ್ಯಮದ ದೈತ್ಯನ ಖಾಸಗಿ ಚಿತ್ರಗಳನ್ನು ಪ್ರಕಟಿಸುವುದಾಗಿ ಅಮೆರಿಕದ ‘ನ್ಯಾಶನಲ್ ಎನಕ್ವಯರರ್’ ಪತ್ರಿಕೆಯು ಬೆದರಿಕೆ ಹಾಕಿತ್ತು.

 ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಬಾಯಿ ಮುಚ್ಚಿಸಲು ಅಲ್ಲದಿದ್ದರೂ, ಸೌದಿ ಅರೇಬಿಯದ ಬಗ್ಗೆ ಅದು ಮಾಡುತ್ತಿದ್ದ ವರದಿಗಳ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಬೆಝೋಸ್ ಫೋನ್‌ಗೆ ಕನ್ನ ಹಾಕಲಾಗಿತ್ತು ಎಂದು ತಾವು ಭಾವಿಸುವುದಾಗಿ ವಿಶ್ವಸಂಸ್ಥೆಯ ನ್ಯಾಯಾಂಗೇತರ ಹತ್ಯೆಗಳ ವಿಶೇಷ ಪ್ರತಿನಿಧಿ ಕ್ಯಾಲಮಾರ್ಡ್ ಮತ್ತು ಅಭಿವ್ಯಕ್ತಿ ಸ್ವಾತಂತ್ರದ ವಿಶೇಷ ಪ್ರತಿನಿಧಿ ಕೇಯ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಈ ಆರೋಪಗಳ ಬಗ್ಗೆ ಅಮೆರಿಕ ಮತ್ತು ಇತರ ಸೂಕ್ತ ಪ್ರಾಧಿಕಾರಗಳು ತನಿಖೆ ನಡೆಸಬೇಕು ಎಂದು ಅವರು ಕರೆ ನೀಡಿದ್ದಾರೆ.

ಜೆಫ್ ದಂಪತಿ ವಿಚ್ಛೇದನ:

 ಜೆಫ್ ಬೆಝೋಸ್ ಮಾಜಿ ಟೆಲಿವಿಶನ್ ನಿರೂಪಕಿ ಲಾರೆನ್ ಸ್ಯಾಂಚೆಝ್ ಜೊತೆ ವಿವಾಹಬಾಹಿರ ಸಂಬಂಧ ಹೊಂದಿದ್ದಾರೆ ಎಂಬುದಾಗಿ ‘ನ್ಯಾಶನಲ್ ಎನ್‌ಕ್ವಯರರ್’ ವರದಿ ಪ್ರಕಟಿಸಿದ ಬಳಿಕ, ಬೆಝೋಸ್ ಮತ್ತು ಅವರ ಪತ್ನಿ ಮೆಕೆಂಝೀ ಬೆರೆಸ್ ವಿವಾಹ ವಿಚ್ಛೇದನ ಪಡೆದುಕೊಂಡಿದ್ದಾರೆ.

ಬೆಝೋಸ್ ಅವರು ಸ್ಯಾಂಚೆಝ್ ಜೊತೆ ಹೊಂದಿರುವ ಸಂಬಂಧದ ವಿವರಗಳನ್ನು ಮತ್ತು ಚಿತ್ರಗಳನ್ನು ಅವರ ಫೋನ್‌ಗೆ ಕನ್ನ ಹಾಕಿ ಪಡೆದುಕೊಳ್ಳಲಾಗಿದೆ ಹಾಗೂ ಅವುಗಳನ್ನು ‘ನ್ಯಾಶನಲ್ ಎನ್‌ಕ್ವಯರರ್’ಗೆ ನೀಡಲಾಗಿದೆ ಎಂದು ಆರೋಪಿಸಲಾಗಿದೆ.

ಖಶೋಗಿ ಹತ್ಯೆಗೆ ಮೊದಲೇ ಹಾಕಲಾಗಿತ್ತು ಕನ್ನ

ಸೌದಿ ಅರೇಬಿಯದ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್‌ರ ತೀವ್ರ ಟೀಕಾಕಾರ ಹಾಗೂ ಜೆಫ್ ಬೆಝೋಸ್ ಮಾಲೀಕತ್ವದ ‘ವಾಶಿಂಗ್ಟನ್ ಪೋಸ್ಟ್’ ಪತ್ರಿಕೆಯ ಅಂಕಣಕಾರ ಜಮಾಲ್‌ಎ ಖಶೋಗಿ ಹತ್ಯೆಗೆ ತಿಂಗಳುಗಳ ಮೊದಲೇ ಬೆಝೋಸ್ ಫೋನ್‌ಗೆ ಕನ್ನ ಹಾಕಲಾಗಿತ್ತು ಎನ್ನಲಾಗಿದೆ. ಖಶೋಗಿ ಹತ್ಯೆಯು 2018 ಅಕ್ಟೋಬರ್ 2ರಂದು ನಡೆದಿತ್ತು.

ಖಶೋಗಿ ಹತ್ಯೆಗೆ ಸೌದಿ ಯುವರಾಜನೇ ಆದೇಶ ನೀಡಿದ್ದರು ಎಂದು ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎ ಭಾವಿಸಿದೆ.

ಖಶೋಗಿ ಹತ್ಯೆಗೆ ಸಂಬಂಧಿಸಿ ‘ವಾಶಿಂಗ್ಟನ್ ಪೋಸ್ಟ್’ ಸೌದಿ ಯುವರಾಜನ ವಿರುದ್ಧ ಹಲವು ಟೀಕಾತ್ಮಕ ವರದಿಗಳನ್ನು ಪ್ರಕಟಿಸಿತ್ತು.

ಜೆಫ್... ನೀವು ಕೇಳಿರುವುದು ಸತ್ಯವಲ್ಲ: ಸೌದಿ ಯುವರಾಜ

 ಜೆಫ್ ಬೆಝೋಸ್ ‌ರ ಫೋನ್‌ಗೆ ಸೌದಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಕನ್ನ ಹಾಕಿದ್ದಾರೆ ಎಂಬ ಆರೋಪಗಳು ಕೇಳಿಬಂದ ಬಳಿಕ, 2019ರ ಆದಿ ಭಾಗದಲ್ಲಿ ಸೌದಿ ಯುವರಾಜ ಬೆರೆಸ್‌ಗೆ ಸಂದೇಶವೊಂದನ್ನು ಕಳುಹಿಸಿ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿದ್ದರು.

‘‘ಜೆಫ್, ನೀವು ಏನು ಕೇಳಿದ್ದೀರೋ ಅಥವಾ ನಿಮಗೆ ಏನು ಹೇಳಲಾಗಿದೆಯೋ, ಅದು ಸತ್ಯವಲ್ಲ’’ ಎಂದು ಆ ಸಂದೇಶದಲ್ಲಿ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದ್ದರು. ‘‘ಸತ್ಯ ನಿಮಗೆ ಗೊತ್ತಿದೆ. ನಿಮ್ಮ ವಿರುದ್ಧ ಅಥವಾ ಅಮೆಝಾನ್ ವಿರುದ್ಧ ನನಗೆ ಅಥವಾ ಸೌದಿ ಅರೇಬಿಯಕ್ಕೆ ಯಾವುದೇ ದ್ವೇಷವಿಲ್ಲ’’ ಎಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News