ನಿದ್ರೆಗೆ ಮೊದಲು ಗ್ರೀನ್ ಟೀ ಸೇವನೆಯ ಲಾಭಗಳು ಗೊತ್ತೇ?

Update: 2020-01-24 06:59 GMT

ತೂಕ ಇಳಿಕೆಯಿಂದ ಹಿಡಿದು ಉರಿಯೂತ ಮತ್ತು ಹೊಟ್ಟೆಯುಬ್ಬರ ನಿವಾರಣೆಯವರೆಗೂ ಹಲವಾರು ಆರೋಗ್ಯಲಾಭಗಳನ್ನು ನೀಡುವ ಗ್ರೀನ್ ಟೀ ಜನಪ್ರಿಯ ಪೇಯವಾಗಿದೆ.

ಗ್ರೀನ್ ಟೀಯಲ್ಲಿರುವ ಪಾಲಿಫೆನಾಲಿಕ್ ಸಂಯುಕ್ತಗಳ ಮಿಶ್ರಣವು ವಿಶೇಷ ಉತ್ಕರ್ಷಣ ನಿರೋಧಕಗಳಾಗಿದ್ದು,ನಮ್ಮ ಶರೀರದ ಒಟ್ಟಾರೆ ಆರೋಗ್ಯಕ್ಕೆ ಹೆಚ್ಚಿನ ಲಾಭಗಳನ್ನು ನೀಡುತ್ತದೆ.

ಜನರು ಸಾಮಾನ್ಯವಾಗಿ ಗ್ರೀನ್ ಟೀಯನ್ನು ಬೆಳಗಿನ ಸಮಯದಲ್ಲಿ ಕುಡಿಯಲು ಇಷ್ಟಪಡುತ್ತಾರೆ. ಆದರೆ ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಸೇವನೆಯು ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ ಎಂದರೆ ನಿಮಗೆ ಅಚ್ಚರಿಯಾಗಬಹುದು. ನೀವು ರಾತ್ರಿ ಮಲಗುವ ಮುನ್ನ ಸೇವಿಸುವ ಆಹಾರ ಮತ್ತು ಪಾನೀಯಗಳು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮಗಳನ್ನು ಬೀರುತ್ತವೆ. ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಸೇವನೆಯ ಕೆಲವು ಆರೋಗ್ಯಲಾಭಗಳ ಕುರಿತು ಮಾಹಿತಿಯಿಲ್ಲಿದೆ.

►ನಿದ್ರೆಯನ್ನು ಉತ್ತಮಗೊಳಿಸುತ್ತದೆ

ಮಲಗುವ ಮುನ್ನ ಗ್ರೀನ್ ಟೀ ಸೇವನೆಯು ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿಭಾಯಿಸಲು ನೆರವಾಗುತ್ತದೆ. ಗ್ರೀನ್ ಟೀಯಲ್ಲಿರುವ ಆ್ಯಮಿನೊ ಆ್ಯಸಿಡ್ ಆಗಿರುವ ಎಲ್-ಥಿಯಾನೈನ್ ಸಂಯುಕ್ತವು ಒತ್ತಡ ಮತ್ತು ಉದ್ವೇಗಗಳನ್ನು ತಗ್ಗಿಸಲು ನೆರವಾಗುತ್ತದೆ ಮತ್ತು ಮನಸ್ಸನ್ನು ನಿರಾಳಗೊಳಿಸುತ್ತದೆ. ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಸೇವನೆಯು ರಾತ್ರಿಯಿಡೀ ಉತ್ತಮ ನಿದ್ರೆಯನ್ನು ನೀಡುತ್ತದೆ ಮತ್ತು ಬೆಳಿಗ್ಗೆ ಎದ್ದಾಗ ನಿಮ್ಮನ್ನು ತಾಜಾ ಆಗಿರಿಸುತ್ತದೆ.

►ನೆಮ್ಮದಿಯನ್ನು ನೀಡುತ್ತದೆ

ಇದು ಮಲಗುವ ಮುನ್ನ ಗ್ರೀನ್ ಟೀ ಸೇವನೆಯ ಪ್ರಮುಖ ಲಾಭಗಳಲ್ಲೊಂದಾಗಿದೆ. ಇದರಲ್ಲಿರುವ ಕೆಫೀನ್ ಮಿದುಳಿನ ಕಾರ್ಯ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ. ಜೊತೆಗೆ ಎಲ್-ಥಿಯಾನೈನ್ ಉದ್ವೇಗ,ಆತಂಕಗಳಿಂದ ಮುಕ್ತಗೊಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ.

►ಚಯಾಪಚಯವನ್ನು ಹೆಚ್ಚಿಸುತ್ತದೆ

ರಾತ್ರಿ ಯಾವುದೇ ವ್ಯತ್ಯಯವಿಲ್ಲದ ಸುಖವಾದ ನಿದ್ರೆಯು ಶರೀರದ ಚಯಾಪಚಯ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ನೆರವಾಗುತ್ತದೆ ಎನ್ನುವುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.

►ಫ್ಲೂ ಅಪಾಯವನ್ನು ತಗ್ಗಿಸುತ್ತದೆ

ಋತುಮಾನಗಳು ಬದಲಾದಾಗ ವೈರಲ್ ಜ್ವರಗಳು ಹಾವಳಿಯಿಡುವುದು ಹೆಚ್ಚು. ಗ್ರೀನ್ ಟೀಯಲ್ಲಿರುವ ಪಾಲಿಫಿನಾಲ್ ವೈರಸ್‌ಗಳ ದಾಳಿಯನ್ನು ತಡೆಯುತ್ತದೆ ಮತ್ತು ಫ್ಲೂಗೆ ಗುರಿಯಾಗುವ ಅಪಾಯವನ್ನು ಶೇ.75ರಷ್ಟು ನಿವಾರಿಸುತ್ತದೆ.

►ಶರೀರದಲ್ಲಿಯ ವಿಷವಸ್ತುಗಳನ್ನು ತೊಲಗಿಸುತ್ತದೆ

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಸೇವನೆಯು ಬೆಳಿಗ್ಗೆ ಸುಗಮ ಮಲವಿಸರ್ಜನೆಗೆ ನೆರವಾಗುವ ಮೂಲಕ ಶರೀರದಲ್ಲಿಯ ಎಲ್ಲ ನೈಸರ್ಗಿಕ ತ್ಯಾಜ್ಯಗಳು ಹೊರಹೋಗುವಂತೆ ಮಾಡುತ್ತದೆ. ಶರೀರದಲ್ಲಿ ಹೆಚ್ಚು ತ್ಯಾಜ್ಯ ಸಂಗ್ರಹವಾದಷ್ಟೂ ಹೆಚ್ಚು ವಿಷವಸ್ತುಗಳು ಬಿಡುಗಡೆಯಾಗುತ್ತವೆ ಮತ್ತು ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತವೆ. ರಾತ್ರಿ ಊಟದ ಬಳಿಕ ಗ್ರೀನ್ ಟೀ ಸೇವಿಸಿದ ಬಳಿಕ ಬೆಳಿಗ್ಗೆಯವರೆಗೂ ಇನ್ಯಾವುದೇ ಆಹಾರವನ್ನು ಸೇವಿಸುವ ಗೋಜಿಗೆ ಹೋಗಬೇಡಿ.

►ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ

ರಾತ್ರಿ ಗ್ರೀನ್ ಟೀ ಸೇವನೆಯು ಹೃದ್ರೋಗಕ್ಕೆ ಗುರಿಯಾಗುವ ಅಪಾಯವನ್ನು ಗಣನೀಯವಾಗಿ ತಗ್ಗಿಸುತ್ತದೆ ಎಂದು ಕೆಲವು ಅಧ್ಯಯನಗಳು ಬೆಟ್ಟು ಮಾಡಿವೆ. ಅದು ಶರೀರದಲ್ಲಿಯ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ.

►ಬಾಯಿಯ ಆರೋಗ್ಯವನ್ನು ಹೆಚ್ಚಿಸುತ್ತದೆ

ಬೆಳಿಗ್ಗೆ ನಿದ್ರೆಯಿಂದ ಎದ್ದಾಗ ಕೆಲವರ ಬಾಯಿಯು ಕೆಟ್ಟ ವಾಸನೆಯನ್ನು ಬೀರುತ್ತದೆ. ರಾತ್ರಿ ನಾವು ನಿದ್ರೆಯಲ್ಲಿದ್ದಾಗ ನಮ್ಮ ಬಾಯಿ ಉರಿಯೂತಕಾರಕ,ಹಾನಿಕಾರಕ ಬ್ಯಾಕ್ಟೀರಿಯಾಗಳ ಸಾಮ್ರಾಜ್ಯವಾಗಿರುತ್ತದೆ ಮತ್ತು ಇದರಿಂದಾಗಿ ಬೆಳಿಗ್ಗೆ ನಮ್ಮ ಉಸಿರು ಅಷ್ಟೊಂದು ತಾಜಾ ಆಗಿರುವುದಿಲ್ಲ. ರಾತ್ರಿ ಮಲಗುವ ಮುನ್ನ ಒಂದು ಕಪ್ ಗ್ರೀನ್ ಟೀ ಸೇವಿಸಿದರೆ ಅದರಲ್ಲಿರುವ ಕ್ಯಾಟೆಚಿನ್ ಎಂಬ ಸಂಯುಕ್ತಗಳು ಮತ್ತು ಉತ್ಕರ್ಷಣ ನಿರೋಧಕಗಳು ಬಾಯಿಯಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳು ಬೆಳೆಯುವುದನ್ನು ತಡೆಯುತ್ತವೆ.

►ಕೊಬ್ಬನ್ನು ಕರಗಿಸುತ್ತದೆ.

ರಾತ್ರಿ ಮಲಗುವ ಮುನ್ನ ಗ್ರೀನ್ ಟೀ ಸೇವನೆಯು ಉತ್ತಮ ನಿದ್ರೆಯೊಂದಿಗೆ ಶರೀರದ ಚಯಾಪಚಯವನ್ನು ಶೇ.4ರಷ್ಟು ಹೆಚ್ಚಿಸುತ್ತದೆ. ಇದು ಗ್ರೀನ್ ಟೀಯಲ್ಲಿರುವ ಥರ್ಮೊಜೆನಿಕ್ ಗುಣಗಳೊಂದಿಗೆ ಸೇರಿಕೊಂಡು ಕೊಬ್ಬನ್ನು ಕರಗಿಸುತ್ತದೆ.

 ಗ್ರೀನ್ ಟೀ ಸೇವನೆಗೆ ಉತ್ತಮ ಸಮಯ ಯಾವುದು?

ಗ್ರೀನ್ ಟೀ ಸೇವಿಸಿದ ತಕ್ಷಣ ನಿದ್ರಿಸಿದರೆ ಅದು ವ್ಯರ್ಥವಾದಂತೆ. ಮಲಗುವ ಒಂದು ಗಂಟೆ ಮೊದಲು ಗ್ರೀನ್ ಟೀ ಸೇವಿಸಲು ಸೂಕ್ತ ಸಮಯವಾಗಿದೆ.

ಅಂತಿಮ ಷರಾ: ನಿದ್ರೆಗೆ ಮುನ್ನ ಗ್ರೀನ್ ಟೀ ಸೇವನೆಯು ಮಾನಸಿಕ ಮತ್ತು ದೈಹಿಕ ಆರೋಗ್ಯಲಾಭಗಳನ್ನು ಒದಗಿಸುತ್ತದೆ ನಿಜ. ಆದರೆ ಸೇವನೆಯ ಪ್ರಮಾಣ ಮತ್ತು ಸಮಯದ ಬಗ್ಗೆ ಗಮನವಿರಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News