ನರೇಂದ್ರ ಮೋದಿ ಕಾಶ್ಮೀರದಲ್ಲಿ ದಂಡನಾತ್ಮಕ ಕ್ರಮ ಕೈಗೊಳ್ಳುತ್ತಿದ್ದಾರೆ: ಜಾರ್ಜ್ ಸೊರೊಸ್

Update: 2020-01-24 15:11 GMT

 ದಾವೋಸ್,ಜ.24: ಹಂಗೇರಿಯನ್-ಅಮೆರಿಕನ್ ಶತಕೋಟ್ಯಧಿಪತಿ ಹಾಗೂ ಲೋಕೋಪಕಾರಿ ಜಾರ್ಜ್ ಸೊರೊಸ್ ಅವರು ಶುಕ್ರವಾರ ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ ಶೃಂಗಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತನ್ನ ಭಾಷಣದಲ್ಲಿ ಹಲವಾರು ಜಾಗತಿಕ, ರಾಜಕೀಯ ಮತ್ತು ತಂತ್ರಜ್ಞಾನ ಸಂಬಂಧಿತ ವಿಷಯಗಳ ಕುರಿತು ಮಾತನಾಡಿದ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನೂ ಬಿಡಲಿಲ್ಲ.

 ರಾಷ್ಟ್ರವಾದವು ಇನ್ನಷ್ಟು ಪ್ರಖರಗೊಳ್ಳುತ್ತಿದೆ. ಇದರ ಅತ್ಯಂತ ದೊಡ್ಡದಾದ ಮತ್ತು ಬೆದರಿಕೆ ಮೂಡಿಸುವಂತಹ ಆಘಾತ ಭಾರತದಲ್ಲಿ ಉಂಟಾಗಿದೆ. ಅಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದು ರಾಷ್ಟ್ರವನ್ನು ಸೃಷ್ಟಿಸುತ್ತಿದ್ದಾರೆ,ಅರೆ ಸ್ವಾಯತ್ತ ಮುಸ್ಲಿಮ್ ಪ್ರದೇಶ ಕಾಶ್ಮೀರದಲ್ಲಿ ದಂಡನಾತ್ಮಕ ಕ್ರಮಗಳನ್ನು ಹೇರುತ್ತಿದ್ದಾರೆ ಮತ್ತು ಕೋಟ್ಯಂತರ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವ ಬೆದರಿಕೆಯನ್ನೊಡ್ಡುತ್ತಿದ್ದಾರೆ ಎಂದು ಸೊರೊಸ್ ವಾಗ್ದಾಳಿ ನಡೆಸಿದರು.

 ಟ್ರಂಪ್ ದಗಾಕೋರ ವ್ಯಕ್ತಿಯಾಗಿದ್ದಾರೆ ಮತ್ತು ಸ್ವಪ್ರಶಂಸಕರಾಗಿದ್ದಾರೆ,ಜಗತ್ತು ತನ್ನ ಸುತ್ತ ತಿರುಗಬೇಕು ಎಂದು ಅವರು ಬಯಸುತ್ತಿದ್ದಾರೆ. ಅಮೆರಿಕದ ಅಧ್ಯಕ್ಷನಾಗುವ ತನ್ನ ಬಯಕೆ ಸಾಕಾರಗೊಂಡ ಬಳಿಕ ಅವರ ಆತ್ಮಶ್ಲಾಘನೆ ಪ್ರವೃತ್ತಿ ವಿಕೃತ ಆಯಾಮವನ್ನು ಪಡೆದುಕೊಂಡಿದೆ. ವಾಸ್ತವದಲ್ಲಿ ಸಂವಿಧಾನವು ಅಧ್ಯಕ್ಷ ಹುದ್ದೆಯ ಮೇಲೆ ಹೇರಿರುವ ಮಿತಿಗಳನ್ನು ಟ್ರಂಪ್ ಉಲ್ಲಂಘಿಸಿದ್ದಾರೆ ಮತ್ತು ಅದಕ್ಕಾಗಿ ಅವರಿಗೆ ವಾಗ್ದಂಡನೆಯೂ ಆಗಿದೆ ಎಂದ ಸೊರೊಸ್,ಟ್ರಂಪ್ ಅವರ ಆರ್ಥಿಕ ತಂಡವು ಅಮೆರಿಕದ ಆರ್ಥಿಕತೆಯು ಅತ್ಯಂತ ವೇಗದಲ್ಲಿ ಬೆಳವಣಿಯಾಗುವಂತೆ ಮಾಡುತ್ತಿದೆ. ಇಂತಹ ಆರ್ಥಿಕತೆ ದೀರ್ಘ ಕಾಲ ಈ ವೇಗವನ್ನು ಉಳಿಸಿಕೊಳ್ಳುವುದಿಲ್ಲ. ಇದು ಚುನಾವಣೆ ಸನ್ನಿಹಿತವಾದಾಗ ನಡೆದಿದ್ದರೆ ಅದು ಟ್ರಂಪ್ ಪುನರಾಯ್ಕೆಯನ್ನು ಖಚಿತಪಡಿಸಬಹುದಿತ್ತು. ಆದರೆ ಚುನಾವಣೆ ಇನ್ನೂ 10 ತಿಂಗಳು ದೂರವಿದೆ ಎಂದರು.

 ಅಮೆರಿಕ-ಚೀನಾ ಸಂಬಂಧದ ಕುರಿತಂತೆ ಸೊರೊಸ್,ಟ್ರಂಪ್ ತನ್ನ ವೈಯಕ್ತಿಕ ಹಿತಾಸಕ್ತಿಗಾಗಿ ರಾಷ್ಟ್ರದ ಹಿತಾಸಕ್ತಿಯನ್ನು ಬಲಿಕೊಡಲು ಸಿದ್ಧರಿದ್ದಾರೆ ಮತ್ತು ಅವರು ಚುನಾವಣೆಯಲ್ಲಿ ಪುನರಾಯ್ಕೆಯಾಗಲು ಏನನ್ನೂ ಮಾಡಲು ಹಿಂಜರಿಯುವುದಿಲ್ಲ. ಇದಕ್ಕೆ ವಿರುದ್ಧವಾಗಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಟ್ರಂಪ್ ಅವರ ದೌರ್ಬಲ್ಯದ ಲಾಭವೆತ್ತಲು ಕಾತುರರಾಗಿದ್ದಾರೆ ಮತ್ತು ತನ್ನ ಜನರ ಮೇಲೆ ಸಂಪೂರ್ಣ ನಿಯಂತ್ರಣವನ್ನು ಸಾಧಿಸಲು ಕೃತಕ ಬುದ್ಧಿಮತ್ತೆಯನ್ನು ಬಳಸುತ್ತಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News