'ಪ್ರಧಾನಿ ಮೋದಿ ಹತ್ಯೆಗೆ ಸಂಚು' ಪ್ರಕರಣದಲ್ಲಿ ಹಲವು ಲೋಪಗಳು: ಮಹಾರಾಷ್ಟ್ರ ಡೆಪ್ಯುಟಿ ಸಿಎಂ ಅಜಿತ್ ಪವಾರ್

Update: 2020-01-24 10:46 GMT

ಮುಂಬೈ : ದಿಲ್ಲಿ ಮೂಲದ ಹೋರಾಟಗಾರ ರೋನಾ ವಿಲ್ಸನ್ ನಿವಾಸದಲ್ಲಿ ಪತ್ತೆಯಾಗಿದ್ದ ಪ್ರಧಾನಿ ನರೇಂದ್ರ ಮೋದಿಯ ಹತ್ಯೆಗೆ ಸಂಚು ಹೂಡಲಾಗಿದೆ ಎಂಬುದರ ಕುರಿತಾದ  ಪತ್ರ ಶಂಕಾಸ್ಪದ ಮೂಲಗಳಿಂದ ಪಡೆಯಲಾದ 'ನಕಲಿ' ಪತ್ರವಾಗಿರುವಂತೆ ಕಾಣುತ್ತದೆ ಎಂದು  ನಗರದ ನಕ್ಸಲ್ ಪ್ರಕರಣಗಳಲ್ಲಿ ದಾಖಲಿಸಲಾಗಿರುವ ಚಾರ್ಜ್ ಶೀಟ್ ಪರಿಶೀಲಿಸಿರುವ ಮಹಾರಾಷ್ಟ್ರ  ಉಪಮುಖ್ಯಮಂತ್ರಿ ಅಜಿತ್ ಪವಾರ್ ಪುಣೆ ಪೊಲೀಸರಿಗೆ ತಿಳಿಸಿದ್ದಾರೆನ್ನಲಾಗಿದೆ.

ಮಾವೋವಾದಿಗಳು ಹಾಗೂ ಶಂಕಿತ 'ನಗರದ ನಕ್ಸಲರ' ನಡುವೆ ನಡೆದ ಇ-ಮೇಲ್ ವಿನಿಮಯದಲ್ಲಿ ಸಮಯ ಒಂದೇ ಆಗಿರುವುದು ಅವುಗಳ ಸತ್ಯಾಸತ್ಯತೆಯ ಬಗ್ಗೆ ಶಂಕೆ ಮೂಡುವಂತೆ ಮಾಡಿದೆ. ಈ ಇಮೇಲ್‍ಗಳ ಮೂಲ ಹಾಗೂ  ಪೊಲೀಸರು 10 ಮಂದಿ ಹೋರಾಟಗಾರರ ವಿರುದ್ಧ ಸಿದ್ಧಪಡಿಸಿರುವ 5,000 ಪುಟದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿರುವ ಇತರ ಸಾಕ್ಷ್ಯಗಳನ್ನು 15 ದಿನಗಳೊಳಗೆ ದೃಢೀಕರಿಸಬೇಕು ಇಲ್ಲದೇ ಇದ್ದರೆ ಮಹಾರಾಷ್ಟ್ರದ ಸರಕಾರ ಈ ಪ್ರಕರಣಗಳ ಮರು ತನಿಖೆಗೆ ವಿಶೇಷ ತನಿಖಾ ತಂಡ ನೇಮಿಸಬಹುದು ಎಂದು ಪವಾರ್ ಪುಣೆ ಪೊಲೀಸರಿಗೆ ತಿಳಿಸಿದ್ದಾರೆ.

ಈ ಪ್ರಕರಣದ ಕುರಿತು ಪುಣೆಯ ಮಾಜಿ ಜಂಟಿ ಪೊಲೀಸ್ ಅಧಿಕಾರಿಯಾಗಿದ್ದ ರವೀಂಧ್ರ ಕದಮ್ ಹಾಗೂ  ಎಸಿಪಿ ಹಾಗೂ ಮುಖ್ಯ ತನಿಖಾಧಿಕಾರಿ ಶಿವಾಜಿ ಪವಾರ್ ಅವರನ್ನೊಳಗೊಂಡ ಪುಣೆ ಪೊಲೀಸರ ತಂಡ ಗುರುವಾರ ಸರಕಾರಕ್ಕೆ ಅಗತ್ಯ ಮಾಹಿತಿ ನೀಡಿದೆ.

ಚಾರ್ಜ್ ಶೀಟ್ ನಲ್ಲಿನ ಪುರಾವೆಗಳನ್ನು ದೃಢೀಕರಿಸಲು 15 ದಿನಗಳೊಳಗೆ ಸಾಧ್ಯವಾಗದೇ ಇದ್ದಲ್ಲಿ ಮರು ತನಿಖೆಗೆ ಸರಕಾರ ಮನಸ್ಸು ಮಾಡಲಿದೆ, 15 ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶಮುಖ್ ಹೇಳಿದ್ದಾರೆ.

ಭೀಮಾ ಕೋರೆಗಾಂವ್‍ನಲ್ಲಿ 2017ರಲ್ಲಿ ನಡೆದ ಹಿಂಸಾಚಾರ ಕುರಿತಂತೆ  ಪುಣೆ ಪೊಲೀಸರು ಎಲ್ಗಾರ್ ಪರಿಷದ್ ಗೆ ಸೇರಿದ ಸುಧೀರ್ ಧವಳೆ, ರೋನಾ ವಿಲ್ಸನ್, ಸುರೇಂದ್ರ ಗದ್ಲಿಂಗ್, ಮಹೇಶ್ ರಾವತ್, ಶೋಮಾ ಸೇನ್, ಅರುಣ್ ಫೆರ್ರೇರಾ, ವೆರ್ನೊನ್ ಗೊನ್ಸಾಲ್ವಿಸ್, ಸುಧಾ ಭಾರಧ್ವಾಜ್ ಹಾಗೂ ವರವರ ರಾವ್ ಅವರನ್ನು ಮಾವೋವಾದಿಗಳ ಜತೆ ನಂಟು ಹೊಂದಿದ ಆರೋಪದಲ್ಲಿ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News