ಚೀನಾದ 13 ನಗರಗಳಿಗೆ ಬೀಗಮುದ್ರೆ : 4.1 ಕೋಟಿ ಜನರು ಬಂಧಿ

Update: 2020-01-24 14:15 GMT
file photo

ಬೀಜಿಂಗ್, ಜ. 24: ಮಾರಕ ಕೊರೋನವೈರಸ್ ಸೋಂಕನ್ನು ನಿಯಂತ್ರಿಸುವುದಕ್ಕಾಗಿ, ಅಭೂತಪೂರ್ವ ಕ್ರಮವೊಂದರಲ್ಲಿ, ಚೀನಾ ಶುಕ್ರವಾರ 13 ನಗರಗಳಿಗೆ ಬೀಗ ಮುದ್ರೆ ಹಾಕಿದೆ. ಇದು 4.1 ಕೋಟಿ ಜನರ ಮೇಲೆ ಪರಿಣಾಮ ಬೀರಿದೆ.

ಅದೇ ವೇಳೆ, ವೈರಸ್ ಮತ್ತಷ್ಟು ಹರಡುವುದನ್ನು ತಡೆಯುವುದಕ್ಕಾಗಿ ಚೀನಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ಚಾಂದ್ರಮಾನ ಹೊಸ ವರ್ಷಾಚರಣೆಯನ್ನು ರದ್ದುಗೊಳಿಸಿದೆ.

ಕ್ಸಿಯಾನಿಂಗ್, ಕ್ಸಿಯಾವೊಗಾನ್, ಎನ್ಶಿ ಮತ್ತು ಝಿಜಿಯಾಂಗ್ ನಗರಗಳ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಲಾಗಿದೆ.

 ಚೀನಾ ಗುರುವಾರವೇ ವುಹಾನ್ ಸೇರಿದಂತೆ ಐದು ನಗರಗಳಿಗೆ ಬೀಗಮುದ್ರೆ ಹಾಕಿತ್ತು ಹಾಗೂ ಎಲ್ಲ ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿತ್ತು. ಈ ಪಟ್ಟಿಗೆ ಶುಕ್ರವಾರ ಇನ್ನೂ 8 ನಗರಗಳನ್ನು ಸೇರಿಸಲಾಗಿದೆ.

ಹುಬೈ ಪ್ರಾಂತದಲ್ಲಿರುವ ಹುವಾಂಗಾಂಗ್, ಎಝೂ, ಝಿಜಿಯಾಂಗ್, ಕಿಯಾನ್‌ಜಿಯಾಂಗ್ ಮತ್ತು ವೂಹಾನ್- ಈ ಐದು ನಗರಗಳಲ್ಲಿ ಸಾರ್ವಜನಿಕ ಸಾರಿಗೆಯನ್ನು ಗುರುವಾರವೇ ಸ್ಥಗಿತಗೊಳಿಸಲಾಗಿತ್ತು.

 ಮಾರಕ ವೈರಸ್ ಮೊದಲು ಕಾಣಿಸಿಕೊಂಡಿದೆಯೆಂದು ಭಾವಿಸಲಾದ 1.1 ಕೋಟಿ ಜನಸಂಖ್ಯೆಯ ವೂಹಾನ್ ನಗರದಲ್ಲಿ ರೈಲುಗಳು ಮತ್ತು ವಿಮಾನಗಳು ಒಳ-ಹೊರಗೆ ಹೋಗುತ್ತಿಲ್ಲ. ನಗರ ಸಾರಿಗೆ ಬಸ್‌ಗಳು, ಸಬ್‌ವೇಗಳು, ತೆಪ್ಪಗಳು ಮತ್ತು ದೂರ ಪ್ರಯಾಣದ ಕೋಚ್‌ಗಳೆಲ್ಲವನ್ನೂ ನಿಲ್ಲಿಸಲಾಗಿದೆ.

ವೂಹಾನ್ ಮತ್ತು ಹುವಾಂಗಾಂಗ್ ನಗರಗಳ ಜನರು ಹೊರಹೋಗಬಾರದು ಎಂದು ಅಧಿಕಾರಿಗಳು ಸೂಚಿಸಿದ್ದಾರೆ. ವುಹಾನ್ ಮಹತ್ವದ ಪ್ರಯಾಣ ಕೇಂದ್ರ ಹಾಗೂ ಹಲವು ವಿಶ್ವವಿದ್ಯಾನಿಲಯಗಳ ತವರೂರಾಗಿದೆ.

700 ಭಾರತೀಯ ವಿದ್ಯಾರ್ಥಿಗಳು ಸಂಕಷ್ಟದಲ್ಲಿ

ಚೀನಾದ ವೂಹಾನ್ ನಗರದಲ್ಲಿ ಸುಮಾರು 700 ಭಾರತೀಯ ವಿದ್ಯಾರ್ಥಿಗಳಿದ್ದಾರೆ. ಹೆಚ್ಚಿನವರು ಅಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ನಗರಕ್ಕೆ ಬೀಗಮುದ್ರೆ ಹಾಕಿರುವುದರಿಂದ ಅವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.

ಆದರೆ, ಹೆಚ್ಚಿನ ಭಾರತೀಯ ವಿದ್ಯಾರ್ಥಿಗಳು ರಜೆಯಲ್ಲಿ ಸ್ವದೇಶಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿದೆ.

ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಕಳವಳ ಹೆಚ್ಚುತ್ತಿದ್ದಂತೆಯೇ, ಚೀನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಗುರುವಾರ ಸಹಾಯವಾಣಿಗಳನ್ನು ಆರಂಭಿಸಿದೆ. ನಗರದಲ್ಲಿಯೇ ಉಳಿದಿರುವ ಭಾರತೀಯ ವಿದ್ಯಾರ್ಥಿಗಳಿಗೆ ಆಹಾರ ಮತ್ತು ಇತರ ಅವಶ್ಯಕ ವಸ್ತುಗಳ ಪೂರೈಕೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಲು ಸಂಬಂಧಿತ ಚೀನಿ ಅಧಿಕಾರಿಗಳನ್ನು ಸಂಪರ್ಕಿಸಿದೆ.

ಯುದ್ಧೋಪಾದಿಯಲ್ಲಿ 1,000 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಾಣ

ಹೊಸ ಮಾದರಿಯ ಕೊರೋನವೈರಸ್ ಸೋಂಕು ಪೀಡಿತರಿಗೆ ಚಿಕಿತ್ಸೆ ನೀಡುವುದಕ್ಕಾಗಿ ಚೀನಾದ ವೂಹಾನ್ ನಗರವು ತ್ವರಿತವಾಗಿ ನೂತನ 1,000 ಹಾಸಿಗೆಗಳ ಆಸ್ಪತ್ರೆಯೊಂದನ್ನು ನಿರ್ಮಿಸುತ್ತಿದೆ. ಮುಂದಿನ ವಾರದ ಆರಂಭದಲ್ಲೇ ಆಸ್ಪತ್ರೆ ಪೂರ್ಣಗೊಳ್ಳುವಂತೆ ಚೀನಾ ಸರಕಾರವು ತನ್ನೆಲ್ಲ ಸಂಪನ್ಮೂಲಗಳನ್ನು ಒಗ್ಗೂಡಿಸುತ್ತಿದೆ.

ವೂಹಾನ್ ನಗರದ ಹೊರವಲಯದಲ್ಲಿರುವ ಸರೋವರದ ಪಕ್ಕದಲ್ಲಿರುವ ತೋಟದಲ್ಲಿರುವ ರಜಾ ಅವಧಿಯ ಕಟ್ಟಡ ಸಂಕೀರ್ಣದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ ಎಂದು ಅಧಿಕೃತ ‘ಚಾಂಗ್‌ಜಿಯಾಂಗ್ ಡೇಲಿ’ ಶುಕ್ರವಾರ ವರದಿ ಮಾಡಿದೆ. ಈ ರಜಾ ಅವಧಿಯ ಕಟ್ಟಡ ಸಂಕೀರ್ಣವನ್ನು ಮೂಲತಃ ಸ್ಥಳೀಯ ಕಾರ್ಮಿಕರಿಗಾಗಿ ನಿರ್ಮಿಸಲಾಗಿತ್ತು.

 35 ಡಿಗ್ಗರ್‌ಗಳು ಮತ್ತು 10 ಬುಲ್‌ಡೋಝರ್‌ಗಳು ಗುರುವಾರ ರಾತ್ರಿ ಸ್ಥಳಕ್ಕೆ ಆಗಮಿಸಿವೆ ಹಾಗೂ ಸೋಮವಾರದ ವೇಳೆಗೆ ಆಸ್ಪತ್ರೆಯನ್ನು ಸಿದ್ಧಗೊಳಿಸುವ ಗುರಿಯನ್ನು ಹೊಂದಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News