ಇನ್ನೂ ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿಯ ಮಟ್ಟಕ್ಕೆ ಬಂದಿಲ್ಲ : ವಿಶ್ವ ಆರೋಗ್ಯ ಸಂಸ್ಥೆ

Update: 2020-01-24 14:22 GMT

ಜಿನೀವ (ಸ್ವಿಟ್ಸರ್‌ಲ್ಯಾಂಡ್), ಜ. 24: ಚೀನಾದಲ್ಲಿ ಸ್ಫೋಟಿಸಿರುವ ಮಾರಕ ಕೊರೋನವೈರಸ್ ಕಾಯಿಲೆಯು ಸದ್ಯಕ್ಕೆ ಜಾಗತಿಕ ತುರ್ತುಪರಿಸ್ಥಿತಿಯನ್ನು ಸೃಷ್ಟಿಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಗುರುವಾರ ಹೇಳಿದೆ ಹಾಗೂ ಹಲವು ನಗರಗಳಲ್ಲಿ ವಿಧಿಸಲಾಗಿರುವ ಬೀಗಮುದ್ರೆಯನ್ನು ತ್ವರಿತವಾಗಿ ತೆರವುಗೊಳಿಸುವಂತೆ ಚೀನಾವನ್ನು ಒತ್ತಾಯಿಸಿದೆ.

‘‘ನಾನು ಇಂದು ಅಂತರ್‌ರಾಷ್ಟ್ರೀಯ ಮಟ್ಟದ ಕಳವಳದ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಯನ್ನು ಘೋಷಿಸುವುದಿಲ್ಲ’’ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅದನೊಮ್ ಗೆಬ್ರಿಯೆಸಸ್ ಹೇಳಿದರು. ಕೊರೋನವೈರಸ್ ಕುರಿತು ಜಿನೀವದಲ್ಲಿ ನಡೆದ ಎರಡು ದಿನಗಳ ತುರ್ತು ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

ಆದರೆ, ಅತ್ಯಂತ ಗಂಭೀರ ಸಾಂಕ್ರಾಮಿಕ ಕಾಯಿಲೆಗಳ ಸಂದರ್ಭದಲ್ಲಿ ಮಾಡಲಾಗುವ ತುರ್ತು ಪರಿಸ್ಥಿತಿ ಘೋಷಣೆಯನ್ನು ಈ ಸಂದರ್ಭದಲ್ಲಿ ಮಾಡದಿರುವುದನ್ನು, ವಿಶ್ವ ಆರೋಗ್ಯ ಸಂಸ್ಥೆಯು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದಕ್ಕೆ ಸೂಚನೆ ಎಂಬುದಾಗಿ ಪರಿಗಣಿಸಬಾರದು ಎಂದು ಅವರು ನುಡಿದರು.

‘‘ಚೀನಾದಲ್ಲಿ ತುರ್ತು ಪರಿಸ್ಥಿತಿಯಿದೆ. ಆದರೆ ಅದು ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯಾಗಿ ಇನ್ನೂ ಮಾರ್ಪಟ್ಟಿಲ್ಲ’’ ಎಂದರು.

ಮೃತರ ಸಂಖ್ಯೆ 26ಕ್ಕೆ: 830 ಮಂದಿಗೆ ಸೋಂಕು

ಮಾರಕ ಕೊರೋನವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಮೃತಪಟ್ಟಿರುವವರ ಸಂಖ್ಯೆ ಶುಕ್ರವಾರ 26ಕ್ಕೇರಿದೆ.

ಸುಮಾರು 830 ಮಂದಿ ಸೋಂಕಿಗೊಳಗಾಗಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಥಾಯ್ಲೆಂಡ್, ಅಮೆರಿಕ, ತೈವಾನ್, ದಕ್ಷಿಣ ಕೊರಿಯ, ಜಪಾನ್, ವಿಯೆಟ್ನಾಮ್ ಮತ್ತು ಸಿಂಗಾಪುರ ಸೇರಿದಂತೆ ಚೀನಾದ ಹೊರಗಿನ ಹಲವು ದೇಶಗಳಲ್ಲಿ ಜನರು ಕೊರೋನವೈರಸ್ ಸೋಂಕಿಗೆ ಒಳಗಾಗಿರುವ ಪ್ರಕರಣಗಳು ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News