ದೇಶದ ಅರ್ಥಿಕ ಹಿಂಜರಿತಕ್ಕೆ ಇನ್ನೊಂದು ಬರೆ: ನೇರ ತೆರಿಗೆ ಸಂಗ್ರಹ ಕುಸಿತ

Update: 2020-01-24 15:44 GMT

 ಹೊಸದಿಲ್ಲಿ, ಜ.22: ತೀವ್ರ ಆರ್ಥಿಕ ಹಿಂಜರಿತ ಹಾಗೂ ಕಾರ್ಪೊರೇಟ್ ತೆರಿಗೆ ಕಡಿತದ ನಡುವೆಯೇ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಕಾರ್ಪೊರೇಟ್ ಹಾಗೂ ಆದಾಯ ತೆರಿಗೆ ಸಂಗ್ರಹವು ಕಳೆದ ಎರಡು ದಶಕಗಳಲ್ಲಿಯೇ ಮೊದಲ ಬಾರಿಗೆ ಕುಸಿತವನ್ನು ಕಂಡಿರುವುದಾಗಿ ಆರಕ್ಕೂ ಅಧಿಕ ಹಿರಿಯ ತೆರಿಗೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆಂದು ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

  ಮಾರ್ಚ್ 31ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ 13.5 ಲಕ್ಷ ಕೋಟಿ ರೂ.ಗೂ ಅಧಿಕ ನೇರ ತೆರಿಗೆಯನ್ನು ಸಂಗ್ರಹಿಸುವ ಗುರಿಯನ್ನು ನರೇಂದ್ರ ಮೋದಿ ಸರಕಾರವು ಹೊಂದಿದ್ದು, ಇದು ಕಳೆದ ಹಣಕಾಸು ವರ್ಷಕ್ಕಿಂತ ಶೇ.17ರಷ್ಟು ಅಧಿಕವಾಗಿದೆ. ಆದರೆ ಈ ಗುರಿಯನ್ನು ಸಾಧಿಸುವುದು ಸಾಧ್ಯವಾಗಿಲ್ಲವೆಂದು ಆದಾಯ ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

  

  ಆದಾಗ್ಯೂ ಬೇಡಿಕೆಯಲ್ಲಿನ ತೀವ್ರ ಕುಸಿತವು ಉದ್ಯಮರಂಗಕ್ಕೆ ಭಾರೀ ಹೊಡೆತ ನೀಡಿದ್ದು, ಕಂಪೆನಿಗಳು ಹೂಡಿಕೆ ಹಾಗೂ ಉದ್ಯೋಗಗಳನ್ನು ಕಡಿತಗೊಳಿಸುವಂತೆ ಮಾಡಿವೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಭಾರೀ ಕುಸಿತವುಂಟಾಗಿದೆ. ಈ ಎಲ್ಲಾ ವಿದ್ಯಮಾನಗಳಿಂದಾಗಿ ಕೇಂದ್ರ ಸರಕಾರವು ಪ್ರಸಕ್ತ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆಯನ್ನು ಶೇ.5ಕ್ಕೆ ನಿಗದಿಪಡಿಸುವಂತಾಗಿದ್ದು, ಇದು ಕಳೆದ 11 ವರ್ಷಗಳಲ್ಲೇ ಅತ್ಯಂತ ಕನಿಷ್ಠವಾಗಿದೆ. ಅದಾಯ ತೆರಿಗೆ ಇಲಾಖೆಗೆ ಜನವರಿ 23ವರೆಗೆ ಕೇವಲ 7.3 ಲಕ್ಷ ಕೋಟಿ ರೂ.ಗಳನ್ನು ಮಾತ್ರವೇ ಸಂಗ್ರಹಿಸಲು ಸಾಧ್ಯವಾಗಿದೆ. ಇದು ಕಳೆದ ವರ್ಷ ಸಂಗ್ರಹಿಸಿದ ಮೊತ್ತಕ್ಕಿಂತ ಶೇ.5.5ರಷ್ಟು ಕಡಿಮೆಯಾಗಿದೆ ಎಂದು ಹಿರಿಯ ತೆರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 2018-19ರ ಸಾಲಿನಲ್ಲಿ 11.5 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹವಾಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಕಂಪೆನಿಗಳಿಂದ ಮುಂಗಡವಾಗಿ ತೆರಿಗೆಗಳನ್ನು ಸಂಗ್ರಹಿಸಿದ ಬಳಿಕ ಅಧಿಕಾರಿಗಳು ಸಾಮಾನ್ಯವಾಗಿ ಕೊನೆಯ ಮೂರು ತಿಂಗಳುಗಳಲ್ಲಿ ಶೇ.30-35ರಷ್ಟು ವಾರ್ಷಿಕ ನೇರ ತೆರಿಗೆಗಳನ್ನು ಸಂಗ್ರಹಿಸುತ್ತಾರೆ. ಆದರೆ ತಮ್ಮ ಅತ್ಯುತ್ತಮ ಪ್ರಯತ್ನಗಳ ಹೊರತಾಗಿಯೂ ಪ್ರಸಕ್ತ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಸಂಗ್ರಹವು 2018-19ರ ಸಾಲಿಗಿಂತ ಕುಸಿಯುವ ಸಾಧ್ಯತೆಯಿದೆಯೆಂದು 'ರಾಯ್ಟರ್' ಸುದ್ದಿಸಂಸ್ಥೆಯು ಸಂದರ್ಶಿಸಿದ ಎಂಟು ಮಂದಿ ಭಾರತೀಯ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

     ‘‘ ನಿಗದಿತ ಗುರಿಯನ್ನು ತಲುಪುವ ಮಾತು ಬಿಡಿ. ನೇರ ತೆರಿಗೆ ಸಂಗ್ರಹದಲ್ಲಿ ಎಂದೂ ಇಲ್ಲದಂತಹ ಕುಸಿತವುಂಟಾಗಿರುವುದನ್ನು ನಾವು ಕಾಣಲಿದ್ದೇವೆ

''ಎಂದು ಹೊಸದಿಲ್ಲಿಯ ತೆರಿಗೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಪ್ರಸಕ್ತ ವರ್ಷದಲ್ಲಿ ನೇರ ತೆರಿಗೆ ಸಂಗ್ರಹ 2018-19ರ ಹಣಕಾಸು ವರ್ಷಕ್ಕಿಂತ ಶೇ.10ರಷ್ಟು ಕುಸಿಯಲಿರುವುದಾಗಿ ಅವರು ಅಂದಾಜಿಸಿದ್ದಾರೆ.

  ಏಶ್ಯದ ಮೂರನೆ ಅತಿ ದೊಡ್ಡ ಅರ್ಥಿಕತೆಯ ರಾಷ್ಟ್ರವಾದ ಭಾರತದಲ್ಲಿ ಉತ್ಪಾದನೆಯನ್ನು ಉತ್ತೇಜಿಸಲು ಹಾಗೂ ಹೂಡಿಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕೇಂದ್ರ ಸರಕಾರವು ಕಳೆದ ವರ್ಷ ಕಾರ್ಪೊರೇಟ್ ತೆರಿಗೆಯಲ್ಲಿ ಭಾರೀ ಕಡಿತ ಮಾಡಿರುವುದೇ ನೇರ ತೆರಿಗೆ ಸಂಗ್ರಹದಲ್ಲಿ ತೀವ್ರ ಕುಸಿತವುಂಟಾಗಲು ಕಾರಣವೆಂದು ಆದಾಯ ತೆರಿಗೆ ಅಧಿಕಾರಿಗಳು ಅಭಿಪ್ರಾಯಿಸಿದ್ದಾರೆಂದು ರಾಯ್ಟರ್ಸ್‌ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News