ಕೈಬೆರಳುಗಳ ಚಲನವಲನ ಕಷ್ಟವಾಗುತ್ತಿದೆಯೇ? ಅದು ಮಧುಮೇಹದ ಆರಂಭಿಕ ಸಂಕೇತವಾಗಿರಬಹುದು

Update: 2020-01-24 16:12 GMT

ಟೈಪ್-2 ಮಧುಮೇಹಕ್ಕೆ ವ್ಯಕ್ತಿ ಗುರಿಯಾದರೆ ಅದು ಜೀವನಪರ್ಯಂತ ಆತನ/ಆಕೆಯ ಜೊತೆಯಲ್ಲಿರುತ್ತದೆ. ಮಧುಮೇಹಿಗಳಲ್ಲಿ ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಅತಿ ಹೆಚ್ಚಾಗಿರುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಹಾರ್ಮೋನ್ ಬಿಡುಗಡೆಗೊಳಿಸಲು ಮೇದೋಜ್ಜೀರಕ ಗ್ರಂಥಿಯು ಅಸಮರ್ಥವಾದಾಗ ಮಧುಮೇಹ ಕಾಣಿಸಿಕೊಳ್ಳುತ್ತದೆ. ಇನ್ಸುಲಿನ್ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ನಿಯಮಿತವಾಗಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ಪರೀಕ್ಷೆ ಮಾಡಿಸದಿದ್ದರೆ ಅಥವಾ ಸೂಕ್ತ ಚಿಕಿತ್ಸೆ ಪಡೆಯದಿದ್ದರೆ ಮಧುಮೇಹವು ಪಾರ್ಶ್ವವಾಯು,ಹೃದಯ ವೈಫಲ್ಯ,ಹೃದಯಾಘಾತಗಳಂತಹ ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಟೈಪ್-2 ಮಧುಮೇಹದೊಂದಿಗೆ ಗುರುತಿಸಿಕೊಂಡಿರುವ ಲಕ್ಷಣಗಳನ್ನು ಗಮನಿಸಿ ಮೊದಲು ರೋಗವನ್ನು ದೃಢಪಡಿಸಿಕೊಂಡು,ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ತಗ್ಗಿಸಲು ಕ್ರಮಗಳನ್ನು ಕೈಗೊಳ್ಳುವುದು ಅಗತ್ಯವಾಗುತ್ತದೆ.

ಟೈಪ್-2 ಮಧುಮೇಹವು ಹಲವಾರು ಲಕ್ಷಣಗಳನ್ನು ಹೊಂದಿದೆಯಾದರೂ ಕೆಲವು ಲಕ್ಷಣಗಳನ್ನು ತ್ವರಿತವಾಗಿ ಗುರುತಿಸಬಹುದು. ಕೈಬೆರಳುಗಳು ಪೆಡಸಾಗಿ ಸೆಳೆತವುಂಟಾಗುವುದರೊಂದಿಗೆ ಅವುಗಳ ಚಲನೆ ಕಷ್ಟಕರವಾಗುವುದು ಮಧುಮೇಹದ ಆರಂಭಿಕ ಲಕ್ಷಣಗಳಲ್ಲೊಂದಾಗಿದೆ. ಇದು ಬೆರಳುಗಳಲ್ಲಿ,ವಿಶೇಷವಾಗಿ ತೋರು ಬೆರಳು ಮತ್ತು ಹೆಬ್ಬೆರಳಿನಲ್ಲಿ ನೋವನ್ನುಂಟು ಮಾಡಬಲ್ಲದು. ಈ ಲಕ್ಷಣವನ್ನು ವೈದ್ಯಕೀಯವಾಗಿ ‘ಫ್ಲೆಕ್ಸರ್ ಟೆನೊಸೈನೊವೈಟಿಸ್ ’ ಎಂದು ಕರೆಯಲಾಗುತ್ತದೆ. ‘ಟ್ರಿಗರ್ ಫಿಂಗರ್ ’ಎಂಬ ಹೆಸರೂ ಈ ಲಕ್ಷಣಕ್ಕಿದೆ. ಈ ಸ್ಥಿತಿಯಲ್ಲಿ ಬೆರಳಿನ ಸುತ್ತ ಊತವುಂಟಾಗುತ್ತದೆ.

 ಬೆರಳುಗಳ ಚಿಪ್ಪುಗಳಿಗೆ ಹಾನಿಯುಂಟಾದಾಗ ಫೆಕ್ಸರ್ ಟೆಂಡನ್ ಅಥವಾ ಬೆರಳನ್ನು ಬಗ್ಗಿಸಲು ನೆರವಾಗುವ ಸ್ನಾಯುರಜ್ಜುವಿನ ಸ್ಥಿತಿಯು ವ್ಯತ್ಯಯಗೊಳ್ಳುತ್ತದೆ ಮತ್ತು ಇದು ಬೆರಳುಗಳನ್ನು ಚಲಿಸುವುದನ್ನು ಕಷ್ಟಕರವಾಗಿಸುತ್ತದೆ. ಫ್ಲೆಕ್ಸರ್ ಟೆಂಡನ್ ಬೆರಳುಗಳು ಮತ್ತು ಹೆಬ್ಬೆರಳುಗಳ ಮೂಳೆಗಳನ್ನು ಅಂಗೈಗೆ ಜೋಡಿಸುತ್ತದೆ. ಇದಲ್ಲದೆ ಇಡೀ ಬೆರಳು ಮತ್ತು ಹೆಬ್ಬೆರಳು ಪೆಡಸುಗೊಳ್ಳಬಹುದು,ಕೆಂಪುಬಣ್ಣಕ್ಕೆ ತಿರುಗಬಹುದು ಮತ್ತು ನೋವನ್ನುಂಟು ಮಾಡಬಹುದು. ಇದರೊಂದಿಗೆ ಪೀಡಿತ ಬೆರಳಿನ ತಳಭಾಗದಲ್ಲಿ ಗಂಟೊಂದು ಕಾಣಿಸಿಕೊಳ್ಳುತ್ತದೆ ಮತ್ತು ನೋಯಲು ಆರಂಭವಾಗುತ್ತದೆ. ಇಂತಹ ಸ್ಥಿತಿಯು ಬೆರಳುಗಳನ್ನು ನೇರವಾಗಿಸುವುದನ್ನು ಕಷ್ಟವಾಗಿಸುತ್ತದೆ. ಶೇ.11ರಷ್ಟು ಮಧುಮೇಹಿಗಳಲ್ಲಿ ಫ್ಲೆಕ್ಷರ್ ಟೆನೊಸೈನೊವೈಟಿಸ್ ಕಾಣಿಸಿಕೊಳ್ಳುತ್ತದೆ ಮತ್ತು ಮಧುಮೇಹಿಗಳಲ್ಲದ ರೋಗಿಗಳಲ್ಲಿ ಈ ಪ್ರಮಾಣ ಶೇ.1ಕ್ಕೂ ಕಡಿಮೆಯಿರುತ್ತದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ.

ಪದೇ ಪದೇ ವಿಶೇಷವಾಗಿ ರಾತ್ರಿ ವೇಳೆ ಅತಿಯಾದ ಮೂತ್ರವಿಸರ್ಜನೆ,ದಿನವಿಡೀ ಬಾಯಾರಿಕೆ,ಯಾವುದೇ ಪಥ್ಯ ಅಥವಾ ವ್ಯಾಯಾಮ ಮಾಡದಿದ್ದರೂ ದೇಹತೂಕದಲ್ಲಿ ಇಳಿಕೆ,ಜನನಾಂಗಗಳಲ್ಲಿ ತುರಿಕೆ,ಗಾಯಗಳ ಮಾಯುವಿಕೆಯಲ್ಲಿ ತುಂಬ ವಿಳಂಬ ಮತ್ತು ದೃಷ್ಟಿ ಮಸುಕಾಗುವುದು ಇವು ಮಧುಮೇಹವನ್ನು ಸೂಚಿಸುವ ಇತರ ಲಕ್ಷಣಗಳಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News