ಪುತ್ರನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ ಆರೋಪ: ಮಹಿಳೆ ವಿರುದ್ಧ 8 ವರ್ಷದ ಬಳಿಕ ಪ್ರಕರಣ ದಾಖಲು

Update: 2020-01-24 17:19 GMT

ಗಾಂಧೀನಗರ, ಜ.24: ಜಿಲ್ಲಾಧಿಕಾರಿಯ ಅನುಮತಿ ಪಡೆಯದೆ ಮತಾಂತರ ಮಾಡಿದ ಆರೋಪದಡಿ ಗುಜರಾತ್‌ನ 42 ವರ್ಷದ ಹಿಂದೂ ಮಹಿಳೆಯ ವಿರುದ್ಧ 8 ವರ್ಷದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿರುವುದಾಗಿ ವರದಿಯಾಗಿದೆ. ಮತಾಂತರಗೊಳಿಸಿದ ಧರ್ಮಗುರುವನ್ನು ಇನ್ನೂ ಗುರುತಿಸಲಾಗಿಲ್ಲ. ಆದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ. 2012ರಲ್ಲಿ ಸುಧಾ ಮಕ್ವಾನಾ ಎಂಬಾಕೆ ತನ್ನ ಪುತ್ರನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿದ್ದಾಳೆ. ಆದರೆ ಇದಕ್ಕೆ ಆಕೆ ತನ್ನ ಮೊದಲನೇ ಪತಿಯಿಂದ ಅಥವಾ ಜಿಲ್ಲಾಧಿಕಾರಿಯಿಂದ ಅನುಮತಿ ಪಡೆದಿರಲಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಧರ್ಮೇಂದ್ರ ರಾಥೋಡ್ ಎಂಬಾತ 2013ರಲ್ಲಿ ಅರ್ಜಿ ದಾಖಲಿಸಿದ್ದರು. ಈ ಕುರಿತ ತನಿಖೆಯನ್ನು 2020ರ ಜನವರಿ 3ರಂದು ಪೂರ್ಣಗೊಳಿಸಿದ ಪೊಲೀಸರು ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಲು ಸೂಚಿಸಿದ್ದಾರೆ ಎಂದು ವರದಿ ತಿಳಿಸಿದೆ.

2001ರಲ್ಲಿ ಸುಧಾ ಮಕ್ವಾನಾರ ವಿವಾಹವಾಗಿದ್ದು 2008ರಲ್ಲಿ ವಿಚ್ಛೇದನವಾಗಿದೆ. ದಂಪತಿಗೆ ಒಬ್ಬ ಪುತ್ರನಿದ್ದು ತಾಯಿ ಜೊತೆ ವಾಸಿಸುತ್ತಿದ್ದ. 2012ರ ಎಪ್ರಿಲ್ 8ರಂದು ಅಮೋದ್ ಗ್ರಾಮದ ಕ್ಯಾಥೊಲಿಕ್ ಚರ್ಚ್‌ಗೆ ತೆರಳಿದ್ದ ಸುಧಾ ತನ್ನ ಪುತ್ರನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸುವಂತೆ ಕೋರಿದ್ದಳು. ಅದರಂತೆ ಧರ್ಮಗುರು ಮತಾಂತರ ಪ್ರಕ್ರಿಯೆ ನಡೆಸಿದ್ದಾರೆ. ತನ್ನ ಪುತ್ರನ ಮತಾಂತರದ ಮಾಹಿತಿ ತಿಳಿದ ತಂದೆ, 2013ರಲ್ಲಿ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದು ಇದನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಅಂದಿನ ಮುಖ್ಯ ಕಾರ್ಯದರ್ಶಿಗೆ ಸೂಚಿಸಿತ್ತು. ಆದರೆ ಪ್ರಕರಣ ನನೆಗುದಿಗೆ ಬಿದ್ದಿತ್ತು. ಈ ಮಧ್ಯೆ ಸಾಮಾಜಿಕ ಕಾರ್ಯಕರ್ತ ರಾಠೋಡ್ ಜಿಲ್ಲಾಧಿಕಾರಿಗೆ ದೂರು ನೀಡಿ ಸುಧಾ ಮಕ್ವಾನ ‘ಗುಜರಾತ್ ಧಾರ್ಮಿಕ ಸ್ವಾತಂತ್ರ ಕಾಯ್ದೆ’ಯ ಉಲ್ಲಂಘನೆಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದರು. ಬಲವಂತದಿಂದ, ಆಕರ್ಷಣೆ ಒಡ್ಡಿ ಅಥವಾ ಮೋಸದಿಂದ ಮತಾಂತರ ಮಾಡುವುದನ್ನು ಈ ಕಾಯ್ದೆ ನಿಷೇಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News