ದಿಢೀರ್ ಬೆಳವಣಿಗೆಯಲ್ಲಿ ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣಗಳನ್ನು ವಹಿಸಿಕೊಂಡ ಎನ್‌ಐಎ

Update: 2020-01-24 17:53 GMT

ಮುಂಬೈ,ಜ.24: ಶುಕ್ರವಾರ ದಿಢೀರ್ ಬೆಳವಣಿಗೆಯೊಂದರಲ್ಲಿ 2018ರ ಭೀಮಾ-ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣಗಳು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವರ್ಗಾವಣೆಗೊಂಡಿವೆ. ಗುರುವಾರವಷ್ಟೇ ಮಹಾರಾಷ್ಟ್ರ ಸರಕಾರವು ರಾಜಕೀಯವಾಗಿ ಸೂಕ್ಮ್ಮವಾಗಿರುವ ಈ ಪ್ರಕರಣಗಳ ತನಿಖೆಯ ಸ್ಥಿತಿಗತಿ ಕುರಿತು ಪೊಲೀಸರೊಂದಿಗೆ ಪುನರ್‌ಪರಿಶೀಲನಾ ಸಭೆಯನ್ನು ನಡೆಸಿತ್ತು.

ಪ್ರಕರಣಗಳನ್ನು ಕೈಬಿಡಬೇಕೇ ಅಥವಾ ತನಿಖೆಗಾಗಿ ವಾರದೊಳಗೆ ವಿಶೇಷ ತನಿಖಾ ತಂಡ (ಸಿಟ್)ವನ್ನು ರಚಿಸಬೇಕೇ ಎಂಬ ಬಗ್ಗೆ ಮಹಾ ವಿಕಾಸ್ ಅಘಾಡಿ ಸರಕಾರವು ಪರಿಶೀಲನೆ ನಡೆಸುತ್ತಿರುವಾಗಲೇ ಪ್ರಕರಣಗಳ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿರುವುದು ಕೇಂದ್ರ ಮತ್ತು ರಾಜ್ಯದ ನಡುವೆ ಹೊಸದೊಂದು ಸಂಘರ್ಷಕ್ಕೆ ನಾಂದಿ ಹಾಡುವ ಸಾಧ್ಯತೆಯಿದೆ. ತನಗೆ ಪ್ರಕರಣಗಳನ್ನು ವರ್ಗಾಯಿಸಿಕೊಳ್ಳಲು ಎನ್‌ಐಎಗೆ ರಾಜ್ಯ ಸರಕಾರದ ಅನುಮತಿಯ ಅಗತ್ಯವಿಲ್ಲ.

ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಗೃಹಸಚಿವ ಅನಿಲ ದೇಶಮುಖ್ ಅವರು ಗುರುವಾರ ಡಿಜಿಪಿ ಸುಬೋಧ ಜೈಸ್ವಾಲ್ ಮತ್ತು ರಾಜ್ಯ ಗುಪ್ತಚರ ಆಯುಕ್ತೆ ರಷ್ಮಿ ಶುಕ್ಲಾ ಅವರೊಂದಿಗೆ ಪುನರ್‌ಪರಿಶೀಲನಾ ಸಭೆಯನ್ನು ನಡೆಸಿದ್ದರು.

ಶುಕ್ರವಾರ ಬೆಳಿಗ್ಗೆ ಎನ್‌ಸಿಪಿ ವರಿಷ್ಠ ಶರದ ಪವಾರ್ ಅವರು ಪ್ರಕರಣಗಳಲ್ಲಿ ಸಿಟ್ ಮೂಲಕ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರವನ್ನು ಸಹ ಬರೆದಿದ್ದರು. ಜನರನ್ನು ಪ್ರಕರಣದಲ್ಲಿ ಸಿಲುಕಿಸುವುದರಲ್ಲಿ ಭಾಗಿಯಾಗಿದ್ದ ಅಧಿಕಾರಿಗಳನ್ನು ಅಮಾನತುಗೊಳಿಸುವ ಅಗತ್ಯವಿದೆ ಎಂದೂ ಅವರು ಹೇಳಿದ್ದರು.

 ಪ್ರಕರಣದ ವರ್ಗಾವಣೆಯ ಕುರಿತು ಮಹಾರಾಷ್ಟ್ರ ಸರಕಾರವು ಈವರೆಗೆ ಯಾವುದೇ ಸೂಚನೆಯನ್ನು ಸ್ವೀಕರಿಸಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News