ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಪದವಿಗೆ ಅರ್ಜಿ ಸಲ್ಲಿಸಿದ ಅಜಿತ್ ಅಗರ್ಕರ್

Update: 2020-01-24 18:38 GMT

ಹೊಸದಿಲ್ಲಿ, ಜ.24: ಭಾರತದ ಮಾಜಿ ವೇಗದ ಬೌಲರ್ ಅಜಿತ್ ಅಗರ್ಕರ್ ರಾಷ್ಟ್ರೀಯ ಆಯ್ಕೆಗಾರರ ಹುದ್ದೆಯ ರೇಸ್‌ಗೆ ಪ್ರವೇಶಿಸಿದ್ದು, ಅಧ್ಯಕ್ಷ ಹುದ್ದೆಯನ್ನು ಪಡೆಯಲು ಮುಂಚೂಣಿಯಲ್ಲಿದ್ದಾರೆ.

ರಾಷ್ಟ್ರೀಯ ಆಯ್ಕೆಗಾರ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ ಎಂದು ಅಗರ್ಕರ್ ದೃಢಪಡಿಸಿದ್ದಾರೆ.

ಮುಂಬೈ ಹಿರಿಯರ ಆಯ್ಕೆ ಸಮಿತಿಯ ಮಾಜಿ ಅಧ್ಯಕ್ಷ ಅಗರ್ಕರ್ ಇದೀಗ ಅಧ್ಯಕ್ಷ ಹುದ್ದೆಗಾಗಿ ಸ್ಪರ್ಧಿಸಲಿದ್ದಾರೆ.

ಭಾರತದ ಮಾಜಿ ಮಧ್ಯಮ ವೇಗಿ ಹಾಗೂ ಜೂನಿಯರ್ ಆಟಗಾರರ ಆಯ್ಕೆ ಸಮಿತಿಯ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಕೂಡ ಮತ್ತೊಮ್ಮೆ ಹಿರಿಯ ಆಯ್ಕೆಗಾರರ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಸಾದ್‌ಗೆ ಜೂನಿಯರ್ ಆಯ್ಕೆ ಸಮಿತಿಯಲ್ಲೂ ಇನ್ನೂ ಒಂದೂವರೆ ವರ್ಷ ಅಧಿಕಾರ ಬಾಕಿ ಇದೆ.

 ಅರ್ಜಿ ಆಹ್ವಾನಕ್ಕೆ ಬಿಸಿಸಿಐ ಜನವರಿ 24 ಕೊನೆಯ ದಿನವಾಗಿದೆ ಎಂದು ಘೋಷಿಸಿತ್ತು. 26 ಟೆಸ್ಟ್, 191 ಏಕದಿನ ಹಾಗೂ 3 ಟ್ವೆಂಟಿ-20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನಾಡಿ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ 394 ವಿಕೆಟ್‌ಗಳನ್ನು ಪಡೆದಿರುವ 42ರ ಹರೆಯದ ಅಗರ್ಕರ್ ಸ್ಪರ್ಧೆಯಲ್ಲಿರುವ ಪ್ರಮುಖ ಆಕಾಂಕ್ಷಿಯಾಗಿದ್ದಾರೆ.

ಅನಿಲ್ ಕುಂಬ್ಳೆ(334 ವಿಕೆಟ್‌ಗಳು) ಹಾಗೂ ಜಾವಗಲ್ ಶ್ರೀನಾಥ್(315 ವಿಕೆಟ್)ನಂತರ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಪರ ಗರಿಷ್ಠ ವಿಕೆಟ್ ಪಡೆದಿರುವ ಮೂರನೇ ಬೌಲರ್ ಆಗಿದ್ದಾರೆ. ಅಗರ್ಕರ್ ವೇಗವಾಗಿ (23 ಪಂದ್ಯ)50 ವಿಕೆಟ್‌ಗಳನ್ನು ಕಬಳಿಸಿದ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News