ಎಫ್‌ಎಟಿಎಫ್ ಶರತ್ತುಗಳನ್ನು ಪೂರೈಸದಿದ್ದರೆ ಪಾಕ್ ಆರ್ಥಿಕತೆ ಮೇಲೆ ಮಾರಕ ಪರಿಣಾಮ

Update: 2020-01-25 16:39 GMT

ವಾಶಿಂಗ್ಟನ್, ಜ. 25: ಭಯೋತ್ಪಾದಕರಿಗೆ ಪೂರೈಕೆಯಾಗುವ ಹಣದ ಮೇಲೆ ನಿಗಾ ಇಡುವ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಶರತ್ತುಗಳನ್ನು ಪಾಕಿಸ್ತಾನ ಪೂರೈಸದಿದ್ದರೆ, ಅದು ಆ ದೇಶದ ಆರ್ಥಿಕ ಸುಧಾರಣೆ ಕಾರ್ಯಕ್ರಮದ ಮೇಲೆ ಮಾರಕ ಪರಿಣಾಮಗಳನ್ನು ಬೀರಲಿದೆ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಅಮೆರಿಕದ ಉಸ್ತುವಾರಿ ಸಹಾಯಕ ವಿದೇಶ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ಶುಕ್ರವಾರ ಹೇಳಿದ್ದಾರೆ.

 ಎಫ್‌ಎಟಿಎಫ್‌ನ ನಿಬಂಧನೆಗಳನ್ನು ಈಡೇರಿಸುವಲ್ಲಿ ಪಾಕಿಸ್ತಾನ ಗಣನೀಯ ಪ್ರಗತಿ ಸಾಧಿಸಿರುವ ಹಿನ್ನೆಲೆಯಲ್ಲಿ, ಪಾಕಿಸ್ತಾನವನ್ನು ಎಫ್‌ಎಟಿಎಫ್‌ನ ‘ಬೂದು ಪಟ್ಟಿ’ (ಕಪ್ಪು ಪಟ್ಟಿಗೆ ಸೇರ್ಪಡೆಯಾಗುವುದಕ್ಕಿಂತ ಒಂದು ಹಂತ ಹಿಂದೆ)ಯಿಂದ ಕೈಬಿಡಬೇಕು ಎಂಬುದಾಗಿ ಆ ದೇಶದ ವಿದೇಶ ಸಚಿವ ಶಾ ಮಹ್ಮೂದ್ ಕುರೇಶಿ ಹೇಳಿದ ಒಂದು ದಿನದ ಬಳಿಕ ಅಮೆರಿಕದ ಉನ್ನತ ರಾಜತಾಂತ್ರಿಕರ ಈ ಹೇಳಿಕೆ ಹೊರಬಿದ್ದಿದೆ.

‘‘ಖಂಡಿತವಾಗಿಯೂ, ಪಾಕಿಸ್ತಾನ ತನ್ನ ಎಫ್‌ಎಟಿಎಫ್ ಬದ್ಧತೆಗಳನ್ನು ನಿಭಾಯಿಸಲು ವಿಫಲವಾದರೆ ಹಾಗೂ ಕಪ್ಪು ಪಟ್ಟಿಗೆ ಸೇರಿಸಲ್ಪಟ್ಟರೆ, ಅದರ ಆರ್ಥಿಕ ಸುಧಾರಣೆ ಕಾರ್ಯಕ್ರಮ ಮತ್ತು ಹೂಡಿಕೆದಾರರನ್ನು ಸೆಳೆಯುವ ಅದರ ಸಾಮರ್ಥ್ಯದ ಮೇಲೆ ವಿನಾಶಕಾರಿ ಪರಿಣಾಮ ಉಂಟಾಗುತ್ತದೆ’’ ಎಂದು ವಾಶಿಂಗ್ಟನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆ್ಯಲಿಸ್ ವೆಲ್ಸ್ ನುಡಿದರು.

 ‘‘ಎಫ್‌ಎಟಿಎಫ್ ಬದ್ಧತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಪಾಕಿಸ್ತಾನ ಮಾಡಿರುವ ಪ್ರಗತಿಯನ್ನು ನೋಡಿ ನಮಗೆ ಸಂತೋಷವಾಗಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News