ಕರೊಲಿನಾ ಪ್ಲಿಸ್ಕೋವಾ ಗೆ ಸೋಲು

Update: 2020-01-25 17:31 GMT

ಮೆಲ್ಬೋರ್ನ್, ಜ.25: ವಿಶ್ವದ ನಂ.2ನೇ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ಆಸ್ಟ್ರೇಲಿಯನ್ ಓಪನ್‌ನ ಮೂರನೇ ಸುತ್ತಿನಲ್ಲಿ ಸೋಲುಣ್ಣುವುದರೊಂದಿಗೆ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಸೆರೆನಾ ವಿಲಿಯಮ್ಸ್ ಹಾಗೂ ಹಾಲಿ ಚಾಂಪಿಯನ್ ನವೊಮಿ ಒಸಾಕಾ ಸೋತು ಟೂರ್ನಿಯಿಂದ ಹೊರ ನಡೆದ ಮರುದಿನವೇ ರಶ್ಯದ ಅನಸ್ಟೇಸಿಯ ಪಾವ್ಲಚೆಂಕೊವಾ ಝೆಕ್‌ನ ಪ್ಲಿಸ್ಕೋವಾ ವಿರುದ್ಧ 7-6(7/4), 7-6(7/3)ಸೆಟ್‌ಗಳ ಅಂತರದಿಂದ ಜಯ ಸಾಧಿಸಿದ್ದಾರೆ. ಎರಡನೇ ಶ್ರೇಯಾಂಕದ ಪ್ಲಿಸ್ಕೋವಾ ಸೋಲಿನೊಂದಿಗೆ ಅಗ್ರ ಮೂರು ಶ್ರೇಯಾಂಕದ ಆಟಗಾರ್ತಿಯರ ಪೈಕಿ ಇಬ್ಬರ ಸವಾಲು ಅಂತ್ಯವಾಗಿದೆ. ಮೂರನೇ ಶ್ರೇಯಾಂಕದ ಒಸಾಕಾ ಅಮೆರಿಕದ 15ರ ಬಾಲಕಿ ಕೊಕೊ ಗೌಫ್‌ಗೆ ಶುಕ್ರವಾರ ಸೋತಿದ್ದರು.

ದಾಖಲೆ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ನಿರೀಕ್ಷೆಯಲ್ಲಿದ್ದ ಏಳು ಬಾರಿಯ ಮೆಲ್ಬೋರ್ನ್ ಚಾಂಪಿಯನ್ ಸೆರೆನಾ ವಿಲಿಯಮ್ಸ್ ಚೀನಾದ ವಾಂಗ್ ಕ್ವಿಯಾಂಗ್ ವಿರುದ್ಧ ಸೋತಿದ್ದರು. ಇತ್ತೀಚೆಗಷ್ಟೇ ಒಸಾಕಾರನ್ನು ಮಣಿಸಿ ಡಬ್ಲ್ಯುಟಿಎ ಬ್ರಿಸ್ಬೇನ್ ಪ್ರಶಸ್ತಿ ಜಯಿಸಿದ್ದ ಪ್ಲಿಸ್ಕೋವಾ ಇಂದಿನ ಪಂದ್ಯದಲ್ಲಿ 30ನೇ ಶ್ರೇಯಾಂಕದ ಪಾವ್ಲಚೆಂಕೊವಾ ವಿರುದ್ಧ ಒತ್ತಡದಲ್ಲಿ ಆಡಿದರು.

ರಶ್ಯದ ಆಟಗಾರ್ತಿ ಪಾವ್ಲಚೆಂಕೊವಾ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಮಾಜಿ ಚಾಂಪಿಯನ್ ಆ್ಯಂಜೆಲಿಕ್ ಕೆರ್ಬರ್‌ರನ್ನು ಎದುರಿಸಲಿದ್ದಾರೆ. ಕೆರ್ಬರ್ ಮೂರನೇ ಬಾರಿ ಅಂತಿಮ-8ರ ಘಟ್ಟ ತಲುಪುವ ಪ್ರಯತ್ನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News