ಪ್ರೇಕ್ಷಕರೊಂದಿಗೆ ಅನುಚಿತ ವರ್ತನೆ: ಸ್ಟೋಕ್ಸ್‌ಗೆ ಐಸಿಸಿ ದಂಡ

Update: 2020-01-25 18:21 GMT

ಜೋಹಾನ್ಸ್‌ಬರ್ಗ್, ಜ.25: ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ಆರಂಭವಾದ ನಾಲ್ಕನೇ ಟೆಸ್ಟ್ ಪಂದ್ಯದ ವೇಳೆ ಪ್ರೇಕ್ಷಕರೊಂದಿಗೆ ಅನುಚಿತವಾಗಿ ವರ್ತಿಸಿರುವ ಇಂಗ್ಲೆಂಡ್‌ನ ಆಲ್‌ರೌಂಡರ್ ಬೆನ್ ಸ್ಟೋಕ್ಸ್‌ಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ದಂಡ ವಿಧಿಸುವ ಜೊತೆಗೆ ಡಿಮೆರಿಟ್ ಪಾಯಿಂಟ್ ನೀಡಿದೆ.

ಇಲ್ಲಿನ ವಾಂಡರರ್ಸ್ ಸ್ಟೇಡಿಯಂನಲ್ಲಿ ಶುಕ್ರವಾರ ದಕ್ಷಿಣ ಆಫ್ರಿಕಾ ವಿರುದ್ಧ 4ನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಕೇವಲ 2 ರನ್ ಗಳಿಸಿ ಪೆವಿಲಿಯನ್‌ಗೆ ವಾಪಸಾಗುತ್ತಿದ್ದ ಸ್ಟೋಕ್ಸ್ ಪ್ರೇಕ್ಷಕರನ್ನು ಅವಮಾನಿಸುತ್ತಿರುವ ದೃಶ್ಯ ಟಿವಿಯಲ್ಲಿ ಕಂಡುಬಂದಿದೆ. ಪ್ರೇಕ್ಷಕರನ್ನು ಅವಮಾನಿಸಿರುವ ಸ್ಟೋಕ್ಸ್‌ಗೆ ಪಂದ್ಯ ಶುಲ್ಕದಲ್ಲಿ ಶೇ.15ರಷ್ಟು ದಂಡ ಹಾಗೂ ಡಿಮೆರಿಟ್ ಪಾಯಿಂಟ್ ನೀಡಲಾಗಿದೆ. ಸ್ಟೋಕ್ಸ್ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಶಿಕ್ಷೆಯನ್ನು ಸ್ವೀಕರಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಸ್ಟೋಕ್ಸ್ ಘಟನೆ ನಡೆದು ಹಲವು ಗಂಟೆಗಳ ಬಳಿಕ ತನ್ನ ವರ್ತನೆಗೆ ಕ್ಷಮೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News