ಪ್ರಜಾತಂತ್ರದ 70 ವರ್ಷಗಳು: ವಾಗಾಡಂಬರ ಮತ್ತು ವಾಸ್ತವ

Update: 2020-01-25 18:31 GMT

ಮುಳಿಹುಲ್ಲಿನ ಮಾಡಿನ ಮನೆಯಲ್ಲಿ ಜೀವಿಸಿ, ರೇಶನ್ ಅಂಗಡಿಯಲ್ಲಿ ಸಿಗುತ್ತಿದ್ದ ದುರ್ವಾಸನೆಯ ಅಕ್ಕಿಯ ಊಟಮಾಡಿ, ಕಲ್ಲು, ಮಣ್ಣು, ಕೆಸರು ತುಂಬಿದ ಕಾಲುದಾರಿಯಲ್ಲಿ ದಿನಾ 8 ಕಿ.ಮೀ. ನಡೆದು ಶಾಲೆಗೆ ಹೋಗುತ್ತಿದ್ದ, ಮಠ-ದೇವಸ್ಥಾನಗಳಲ್ಲಿ ದಿನಾ ಉಂಡು ಓದಿದ ನನಗೆ, ನನ್ನ ಮಕ್ಕಳು ಆ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರಲಿಲ್ಲವೆಂಬ ಹೆಮ್ಮೆ ಇದೆ. ಹುಟ್ಟೂರು ಕಾಸರಗೋಡು ಮತ್ತು ಉದ್ಯೋಗಕ್ಕೋಸ್ಕರ ನೆಲೆಸಿದ ಮಂಗಳೂರಿನಲ್ಲಿ ಅಲ್ಲಲ್ಲಿ ಶಾಲೆಗಳು, ಕಾಲೇಜುಗಳು, ಸಾರ್ವಕಾಲಿಕ ರಸ್ತೆಗಳು ಮತ್ತು ವಾಹನ ಸೌಕರ್ಯಗಳು, ರೈಲುಗಳು, ಯಥೇಚ್ಛವಾಗಿ ಹಾಲು, ಸುಸಜ್ಜಿತ ಆಸ್ಪತ್ರೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. 70 ವರ್ಷಗಳ ಪರಿವರ್ತನೆೆಯ ಈ ಸಂಕೇತಗಳನ್ನು ನೋಡಿದಾಗಲೆಲ್ಲ ಹಿಂದಿನದು ನೆನಪಾಗುತ್ತದೆ, ಹಾಗೆಯೇ ಅಭಿಮಾನವೂ ಆಗುತ್ತದೆ.

ವಾಗಾಡಂಬರಕ್ಕೆ ಪ್ರಾಶಸ್ತ್ಯ ಸಿಗುವ ಇಂದು, ವಾಸ್ತವವು ನೇಪಥ್ಯಕ್ಕೆ ಸೇರಿದೆ. ಅಂಕೆಸಂಖ್ಯೆಗಳು ತಮ್ಮ ಮೂಲಭೂತಮೌಲ್ಯವನ್ನು ಕಳೆದುಕೊಂಡಿವೆ. ಭಾರತವು ಸ್ವತಂತ್ರ ಗಣರಾಜ್ಯವಾದ 70 ವರ್ಷಗಳಲ್ಲಿ ಅದರ ಸಾಧನೆ ಶೂನ್ಯ ಎಂದೇ ಪ್ರತಿಪಾದಿಸಲಾಗುತ್ತಿದೆ. ಈ ರೀತಿಯ ಸನ್ನಿವೇಶದಲ್ಲಿ ವೈಯಕ್ತಿಕ ಅನುಭವಗಳು ನಂಬಲರ್ಹವಾಗುತ್ತವೆ. ಈ ಕಾರಣಕ್ಕಾಗಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರದ, ಒಬ್ಬ ಸಾಮಾನ್ಯ ಪ್ರಜೆಯಾಗಿ ಕಳೆದ ಏಳು ದಶಕಗಳ ಅವಧಿಯಲ್ಲಿ ಕಂಡ ಮತ್ತು ಅನುಭವಿಸಿದ ಪರಿವರ್ತನೆಗಳ ಬಗ್ಗೆ ಉಲ್ಲೇಖಿಸಬಯಸುತ್ತೇನೆ.

ಹೊಸ ಬೆಳಕು, ಆದರೂ ಕತ್ತಲಿನ ದಾರಿ:

ವಸಾಹತುಶಾಹಿ ಅಂತ್ಯವಾಗಿ, ಹೊಸ ಸಂವಿಧಾನವನ್ನು ಜನತೆ ಸ್ವೀಕರಿಸಿಕೊಂಡ ದಿನವೇ (ನವೆಂಬರ 26, 1949) ನಾನು ಹುಟ್ಟಿದವನು. ನನ್ನ ಅಣ್ಣ, ಅಮ್ಮ ಹೇಳುತ್ತಿದ್ದಂತೆ, ಸ್ವಾತಂತ್ರ್ಯ ಸಿಕ್ಕ ಸಂತೋಷದಲ್ಲಿ ಊರಿನವರು ಕೊಟ್ಟ ಲಡ್ಡು ತಿಂದ ಬಳಿಕ ಹುಟ್ಟಿದವನು. ಅಪ್ಪ ಅಮ್ಮ ಇಬ್ಬರೂ ಐದನೇ ಕ್ಲಾಸಿನಿಂದ ಮುಂದೆ ಓದಲೇ ಇಲ್ಲ-ಅವರಿಗೆ ಹತ್ತಿರವೆಲ್ಲೂ ಶಾಲೆ ಇರಲಿಲ್ಲ. ಆಗಿನ ಮದ್ರಾಸು ಸಂಸ್ಥಾನದ ಕಾಸರಗೋಡಿನಿಂದ 30 ಕಿಲೋಮೀಟರು ದೂರದ ಹಳ್ಳಿಯ ದೊಡ್ಡ ಅವಿಭಕ್ತ ಕುಟುಂಬ ನಮ್ಮದು. ಕುಟುಂಬದ ಒಳಜಗಳಕ್ಕೆ ರೋಸಿ ಅಪ್ಪ ಅಮ್ಮ ಉಟ್ಟಬಟ್ಟೆಯಲ್ಲಿ ಮನೆ ಬಿಟ್ಟರು, ಇಬ್ಬರು ಪುಟಾಣಿಗಳೊಂದಿಗೆ.

ಹತ್ತಿರದ ಊರಿನ ಓರ್ವ ಜಮೀನುದಾರರು ತಮ್ಮ ಒಂದು ಸಣ್ಣ ಹಿಡುವಳಿಯನ್ನು ಅಪ್ಪನಿಗೆ ಬಾಯ್ದೆರೆ ಗೇಣಿಗೆ ಕೊಟ್ಟರು. ಮಣ್ಣಿನ ನಾಲ್ಕು ಗೋಡೆ, ಮುಳಿಹುಲ್ಲಿನ ಮಾಡು ಮುಂದಿನ 15 ವರ್ಷ ನಮ್ಮ ‘ಅರಮನೆ’ಯಾಯಿತು. ಅಡಿಕೆ ಕೃಷಿ ಮಾಡಿ ಧನಿಗೆ ಗೇಣಿ ಕೊಟ್ಟು ಉಳಿಕೆಯಾಗುತ್ತಿದ್ದ ಉತ್ಪತ್ತಿಯಲ್ಲಿ ಜೀವನವನ್ನು ಸಾಗಿಸಬೇಕಿತ್ತು. ಕುಟುಂಬ ದೊಡ್ಡದಾಯಿತು, ಆಗಿನ್ನೂ ಮಕ್ಕಳೆಂದರೆ ದೇವರು ಕೊಟ್ಟಿದ್ದು ಎಂಬ ಭಾವನೆ ಬಲವಾಗಿತ್ತು. ನಾಲ್ಕು ಮಂದಿ ಇದ್ದವರು 10 ಆದೆವು. ನಮ್ಮ ಬೇಕುಗಳು ಮತ್ತು ಆದಾಯಗಳ ಸಮತೋಲನ ಕಷ್ಟವಾಗುತ್ತಿತ್ತು. ಊಟಕ್ಕೆ ತತ್ತ್ವಾರವಾದಾಗ ಅಮ್ಮ ತೋಟದಲ್ಲಿದ್ದ ಬಾಳೆಗೊನೆಯನ್ನು ತಂದು ಬೇಯಿಸಿ ಒತ್ತು ಶ್ಯಾವಿಗೆ ಮಾಡಿಯೋ ಅಥವಾ ಹಲಸಿನ ಕಾಯಿಯ ಪಲ್ಯ ಮಾಡಿ ನಮ್ಮ ಹೊಟ್ಟೆ ತಣ್ಣಗಾಗಿಸುತ್ತಿದ್ದಳು.

ಆ ದಿನಗಳಲ್ಲಿ ಆಹಾರಧಾನ್ಯದ ಪೂರೈಕೆ ಸಾಕಷ್ಟಿರಲಿಲ್ಲ; ಅದೇ ಸಂದರ್ಭದಲ್ಲಿ ಚೀನಾ ಭಾರತ ಯುದ್ಧ ಆರಂಭವಾದಾಗ ‘ರೇಶನ್’ ಕಡ್ಡಾಯವಾಯಿತು. ಸೇರದಿದ್ದರೂ ಗೋಧಿಯನ್ನು ತಿನ್ನಬೇಕಿತ್ತು. ಹಾಲು ಮೊಸರು ಕಾಣುತ್ತಿದ್ದುದು ನೆಂಟರ ಮನೆಗೆ ಹೋದಾಗ ಮಾತ್ರ.

ಊರಿನಲ್ಲಿ ಆರೋಗ್ಯ ಕೇಂದ್ರವಾಗಲೀ ಡಾಕ್ಟರರ ಕ್ಲಿನಿಕ್ಕಾಗಲೀ ಇರಲಿಲ್ಲ. ಒಂದು ದಿನ ಸಂಜೆ ಶಾಲೆಯಿಂದ ಬಂದಾಗ ಅಮ್ಮ ಉದ್ವಿಗ್ನಳಾಗಿದ್ದಳು. ವಿಚಾರಿಸಿದರೆ, ಎರಡು ವರ್ಷದ ತಂಗಿ ಸಾವಿತ್ರಿಗೆ ಏರು ಜ್ವರ. ಮನೆಮದ್ದಿನಿಂದ ತಾಪ ಇಳಿದಿರಲಿಲ್ಲ. ಹತ್ತಿರದ ಡಾಕ್ಟರರು 10 ಕಿಲೋಮೀಟರು ದೂರದ ಪೆರಡಾಲದಲ್ಲಿದ್ದರು. ಅಲ್ಲಿಗೆ ಹೋಗಲು ದಿನಕ್ಕೆ ಒಂದೋ ಎರಡೋ ಬಸ್ಸು ಸರ್ವಿಸು ಇರುತ್ತಿತ್ತು. ಖಾಸಗಿ ವಾಹನಗಳು ಇರಲೇ ಇಲ್ಲ. ಅಪ್ಪ ತಲೆಗೆ ಕೈ ಇಟ್ಟು ಕುಳಿತಿದ್ದರು. ಚಿಕ್ಕವರಾದ ನನಗೂ ಅಣ್ಣನಿಗೂ ಏನೂ ಹೊಳೆಯಲಿಲ್ಲ. ಬೆಳಗಾದಾಗ ಸಾವಿತ್ರಿ ಬಾರದ ಲೋಕ ಸೇರಿದ್ದಳು. ಅವಳನ್ನು ಕರೆದೊಯ್ಯಲು ವಾಹನ ಸೌಕರ್ಯ ಅಥವಾ ಸಮೀಪದಲ್ಲಿ ಚಿಕಿತ್ಸಾ ಕೇಂದ್ರವಿದ್ದಿದ್ದರೆ ಅವಳು ಇಂದಿಗೂ ನಮ್ಮಾಂದಿಗೆ ಇರುತ್ತಿದ್ದಳೇನೋ ಎಂದು ಈ ವಯಸ್ಸಿನಲ್ಲಿಯೂ ಕೆಲವೊಮ್ಮೆ ಅನ್ನಿಸುವುದಿದೆ.

ಅಮ್ಮನಿಗೆ ಮಕ್ಕಳನ್ನು ಓದಿಸಬೇಕೆಂದು ಆಸೆ. ಅತ್ಯಂತ ಹತ್ತಿರದ ಶಾಲೆ ಆಗ 4 ಕಿ.ಮೀ.ದೂರದ ಅಗಲ್ಪಾಡಿಯಲ್ಲಿತ್ತು. ಅನೇಕ ಹಳ್ಳಿಗಳಿಗೆ ಅದೊಂದೇ ಹೈಸ್ಕೂಲ್ ಆಗಿದ್ದರಿಂದ ಬಹಳ ದೂರದಿಂದ ಮಕ್ಕಳು ಬರುತ್ತಿದ್ದರು-ನನ್ನ ಇಬ್ಬರು ಸಹಪಾಠಿಗಳು 8 ಕಿ.ಮೀ. ದೂರದ ಬೆಳ್ಳೂರಿನವರು. ಕೆಲವು ಹೆತ್ತವರು ಶಾಲೆ ದೂರವಿದೆಯೆಂದು ತಮ್ಮ ಮಕ್ಕಳನ್ನು ಓದಲು ಕಳುಹಿಸುತ್ತಲೇ ಇರಲಿಲ್ಲ. ಎಸೆಸೆಲ್ಸಿ ಪರೀಕ್ಷೆ ಬರೆಯಲು ಪೆರಡಾಲದ ನವಜೀವನ ಹೈಸ್ಕೂಲಿಗೆ ಹೋಗಬೇಕಿತ್ತು. ಬೇಕಾದಷ್ಟು ಬಸ್ಸುಗಳಿಲ್ಲದುದರಿಂದ ನಾವು ನಡೆದೇ ಹೋಗಿ ಕೆಲವೊಮ್ಮೆ ಬಂಧುಗಳ ಮನೆಯಲ್ಲಿ ತಂಗಿ ಪರೀಕ್ಷೆ ಬರೆಯುತ್ತಿದ್ದೆವು.

ಶಾಲೆಯ ಓದು ಮುಗಿದ ಮೇಲೆ ಕಾಲೇಜು ಶಿಕ್ಷಣ ಕನಸಿನ ಬುತ್ತಿಯೇ; ಹತ್ತಿರವೆಲ್ಲೂ ಕಾಲೇಜುಗಳೇ ಇರಲಿಲ್ಲ. ಕಾಸರಗೋಡು ಸರಕಾರಿ ಕಾಲೇಜಿಗೆ 35 ಕಿ.ಮೀ. ಬಸ್ಸಿನಲ್ಲಿ ಹೋಗಬೇಕು. ಮಂಗಳೂರು, 85ಕಿ.ಮೀ. ದೂರದಲ್ಲಿತ್ತು. ಅಲ್ಲಿ ಹೋದರೆ ಉಳಕೊಳ್ಳಲು ವ್ಯವಸ್ಥೆ ಮಾಡಲು ಹಣವಿಲ್ಲ. ಉಡುಪಿ ಮಠ/ದೇವಸ್ಥಾನಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವಸತಿ ಮತ್ತು ಊಟದ ವ್ಯವಸ್ಥೆ ಇತ್ತು. ಅಲ್ಲಿಗೆ ಹೋಗಿ ಕಾಲೇಜು ವಿದ್ಯಾಭ್ಯಾಸ ಮುಂದುವರಿಸಿದೆ.

 ಬಿಎ ಮುಗಿದಾಗ ಎಂಎಗೆ ಎಲ್ಲಿ ಓದಲಿ ಎಂಬ ಪ್ರಶ್ನೆ. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಹಾಗೂ ಉತ್ತರ ಕೇರಳದ ಎಲ್ಲಿಯೂ ಆಗ ಸ್ನಾತಕೋತ್ತರ ಶಿಕ್ಷಣಕ್ಕೆ ವ್ಯವಸ್ಥೆ ಇರಲಿಲ್ಲ. ಓದಬೇಕಿದ್ದರೆ 10 ಗಂಟೆ ಬಸ್ಸು ಪ್ರಯಾಣ ಮಾಡಿ ಮೈಸೂರಿಗೆ ಹೋಗಬೇಕಿತ್ತು. ಅಲ್ಲಿಯೂ ಪೇಜಾವರ ಮಠದ ವಿದ್ಯಾರ್ಥಿ ನಿಲಯ ಆಸರೆ ನೀಡಿತು.

60 ಕಿಲೋ ಮೀಟರಿಗೆ 3 ಗಂಟೆ ಪ್ರಯಾಣ!

ಊರಿನಲ್ಲಿದ್ದ ಕೆಲವೇ ಮಣ್ಣಿನ ರಸ್ತೆಗಳಲ್ಲಿ ಮಳೆಗಾಲದಲ್ಲಿ ದೊಡ್ಡ ದೊಡ್ಡ ಹೊಂಡಗಳು; ದಿನಕ್ಕೆ ಒಂದೋ ಎರಡೋ ಬಸ್ಸುಗಳು ಅಲ್ಲಿ ಓಡುತ್ತಿದ್ದವು. ಹೆಚ್ಚಿನ ಕಡೆ ಗುಡ್ಡೆ ಹತ್ತಿ ಇಳಿದು, ಗದ್ದೆಯ ‘ಕಟ್ಟಪ್ಪುಣಿ’ ಯಲ್ಲಿ ಸರ್ಕಸ್ ಮಾಡಿ, ತೋಡುಗಳನ್ನು ‘ಒತ್ತೆಪ್ಪಾಲ’ದ (ಒಂದು ಮರದ ದಿಮ್ಮಿ) ಮೂಲಕ ದಾಟಿ ಹೋಗಬೇಕಿತ್ತು. ಸರಿಯಾದ ರಸ್ತೆ ಇಲ್ಲದೆ ಒಂದೂರಿನಿಂದ ಇನ್ನೊಂದೂರಿಗೆ ಹೋಗಲು ಗಂಟೆಗಟ್ಟಲೆ ಪ್ರಯಾಣ ಮಾಡಬೇಕಿತ್ತು. ಈ ಪರಿಸ್ಥಿತಿ ನಾನು 1964-68ರಲ್ಲಿ ಉಡುಪಿಯಲ್ಲಿ ಕಾಲೇಜಿಗೆ ಹೋಗುತ್ತಿದ್ದಾಗಲೂ ಮುಂದುವರಿಯಿತು. ಮಂಗಳೂರಿನಿಂದ ಉಡುಪಿಯ 60 ಕಿ.ಮೀ.ದೂರ ಪ್ರಯಾಣಿಸಲು ಬಸ್ಸಿಗೆ ಮೂರು ಗಂಟೆ ಬೇಕಿತ್ತು. ಆಗಿನ್ನೂ ರಾಷ್ಟ್ರೀಯ ಹೆದ್ದಾರಿ ಆಗಿರಲಿಲ್ಲ, ನೇತ್ರಾವತಿಗೆ ಸೇತುವೆ ಇರಲಿಲ್ಲ.

ಉಚ್ಚಶಿಕ್ಷಣಕ್ಕೆ ಬ್ಯಾಂಕುಗಳು ಸಾಲ ನೀಡಲು ಹಿಂದೇಟು ಹಾಕುತ್ತಿದ್ದ ಕಾಲ ಅದು. ಎಂಎ ಎರಡನೇ ವರ್ಷ ಹಣಕ್ಕೆ ತೀವ್ರ ಅಡಚಣೆ ಉಂಟಾಗಿ ಪೆರಡಾಲದ ಸಿಂಡಿಕೇಟ್ ಬ್ಯಾಂಕಿನ ಮ್ಯಾನೇಜರರನ್ನು ಕಂಡು ಸಾಲ ಸಿಗಬಹುದೇ ಎಂದು ವಿಚಾರಿಸಿದೆ. ನನ್ನ ಉತ್ತಮ ಮಾರ್ಕುಗಳು. ಕೆಲಸ ಸಿಕ್ಕುವ ಭರವಸೆ ಮತ್ತು ಸಾಲ ಮರುಪಾವತಿ ಮಾಡುವ ಸಾಮರ್ಥ್ಯ ಇದು ಯಾವುದೂ ಅವರನ್ನು ಒಪ್ಪಿಸುವಲ್ಲಿ ಫಲಕಾರಿಯಾಗಲಿಲ್ಲ.

ಆಗ ನಮ್ಮ ಪ್ರೊಫೆಸರ್ ಒಬ್ಬರು ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರ ಕೊಡುವ ಸಾಲಕ್ಕೆ ಅರ್ಜಿ ಸಲ್ಲಿಸುವ ಸಲಹೆ ನೀಡಿದರು. ನನ್ನಂಥಹ ಅನೇಕರಿಗೆ ಆ ಸಾಲಗಳು ಉಚ್ಚಶಿಕ್ಷಣವನ್ನು ಮುಂದುವರಿಸಲು ಸಹಕಾರಿಯಾಗಿದ್ದವು.

ಬದಲಾವಣೆಗಳ ಆರಂಭ:

1970ರಲ್ಲಿ ಎಂಎ ಓದು ಮುಗಿಯುವ ಮೊದಲೇ ನಮ್ಮನ್ನು ಧನಿ ಒಕ್ಕಲೆಬ್ಬಿಸಿದ್ದರು; ಅಪ್ಪಒಬ್ಬ ಶ್ರೀಮಂತರ ಮನೆಯಲ್ಲಿ ಅಡಿಗೆ ಮಾಡಿ ಸ್ವಲ್ಪಹಣ ಸಂಪಾದಿಸುತ್ತಿದ್ದರು. ಉದ್ಯೋಗ ಹುಡುಕುವ ಅನಿವಾರ್ಯತೆಯಿಂದ ನಾನು ಕೆಲಸಕ್ಕೆ ಸೇರಿದೆ. 1976ರ ತನಕ ಮೈಸೂರು, ಬೆಂಗಳೂರು ಹಾಗೂ ಮುಂಬೈಯಲ್ಲಿ ಕೆಲಸದಲ್ಲಿದ್ದು ಆ ವರ್ಷ ಮಂಗಳೂರಿಗೆ ಬಂದು ಕಾರ್ಪೊರೇಶನ್ ಬ್ಯಾಂಕಿಗೆ ಸೇರಿದೆ. ಅಷ್ಟರಲ್ಲಿಯೇ ಪರಿವರ್ತನೆಯ ಗಾಳಿ ಬೀಸುತ್ತಾ ಇತ್ತು. ನನ್ನ ಆರಂಭದ 20 ವರ್ಷಗಳಿಗಿಂತ ಭಿನ್ನವಾದ ಜಗತ್ತು ರೂಪಗೊಳ್ಳುತ್ತಿತ್ತು.

ಕಡ್ಡಾಯ ಪಡಿತರ ಹೋಗಿ ಅಂಗಡಿಗಳಲ್ಲಿ ಬೇಕಾದಷ್ಟು ಆಹಾರ ಪದಾರ್ಥಗಳು ಸಿಗಲಾರಂಭವಾಗಿತ್ತು. ಕೃಷಿಯಲ್ಲಿ ಆದ ಹಸಿರು ಕ್ರಾಂತಿಯ ಮೂಲಕ ಭಾರತ ಆಹಾರ ಪೂರೈಕೆಯಲ್ಲಿ ಸ್ವಾವಲಂಬನೆ ಸಾಧಿಸಿತ್ತು. ಕೇರಳ ಮೂಲದವರಾಗಿ ಗುಜರಾತ್‌ನಲ್ಲಿ ಉದ್ಯೋಗ ಆರಂಭಿಸಿದ್ದ ವರ್ಗೀಸ್ ಕುರಿಯನ್ ಸಹಕಾರಿ ಪದ್ಧತಿಯ ಮೂಲಕ ದೇಶದಲ್ಲಿ ಕ್ಷೀರಕ್ರಾಂತಿಯಾಗುವಂತೆ ಮಾಡಿದ್ದರು. ಕ್ರಮೇಣ ಮಂಗಳೂರಿನ ಬೀದಿಬೀದಿಗಳಲ್ಲಿಯೂ ಹಾಲು ಸಿಗಲು ಆರಂಭವಾಯಿತು.

 ನಗರಗಳ ನಡುವೆ ದೂರ ಕಡಿಮೆಯಾಗುತ್ತಾ ಬಂತು: ಮಂಗಳೂರಿ ನಿಂದ ಉಡುಪಿಗೆ ಒಂದೇ ಗಂಟೆಯಲ್ಲಿ ಪ್ರಯಾಣಿಸಲು ಸಾಧ್ಯವಾಯಿತು. ಸರಕಾರಿ ಬಸ್ಸುಗಳು ಹಳ್ಳಿಗಳಿಗೆ ಬರುತ್ತಿದ್ದಂತೆ ವಿದ್ಯಾರ್ಥಿಗಳು ಉಚ್ಚ ಶಿಕ್ಷಣಕ್ಕೆ ಮನೆಯಿಂದಲೇ ಪ್ರಯಾಣಿಸಲು ಸಾಧ್ಯವಾಯಿತು. ಸುಧಾರಿತ ಸಾರಿಗೆ ಸಂಪರ್ಕದಿಂದಾಗಿ ಅನಾರೋಗ್ಯ ಪೀಡಿತರನ್ನು ಹತ್ತಿರದ ಆರೋಗ್ಯಕೇಂದ್ರಗಳಿಗೆ, ದೊಡ್ಡ ಆಸ್ಪತ್ರೆಗಳಿಗೆ ತುರ್ತಾಗಿ ಕರೆದೊಯ್ಯಲು ಸಾಧ್ಯವಾಯಿತು. ಜೊತೆಗೇ ಮಂಗಳೂರಿನಿಂದ ಹಾಸನಕ್ಕಾಗಿ ಬೆಂಗಳೂರಿಗೆ, ಕೊಂಕಣ ಮಾರ್ಗವಾಗಿ ಮುಂಬೈಗೆ ರೈಲು ಸಂಪರ್ಕ ಬೆಳೆಯಿತು.

ಹೊಸ ಯುಗ:

2017ರಲ್ಲಿ ಬಂಧುವೊಬ್ಬರ ಮಗಳ ಮದುವೆಯ ನಿಶ್ಚಿತಾರ್ಥಕ್ಕೆ ಹೋಗಿದ್ದೆ. ವರ ಗೋಪಾಲ ಬೆಳ್ಳೂರಿನವನು. ಮಾತನಾಡುತ್ತಾ ಕೇಳಿದೆ: ‘‘ನೀನು ಎಲ್ಲಿ ಶಾಲೆಗೆ ಹೋಗಿದ್ದೆ?’’ ‘‘ಬೆಳ್ಳೂರಿನಲ್ಲಿ,; ಯಾಕೆ ಸರ್,’’ ಎಂದು ಉತ್ತರಿಸಿದ. ‘‘ಅಲ್ಲಿ ಹೈಸ್ಕೂಲ್ ಯಾವಾಗ ಆಯಿತು, ಗೋಪಾಲ?’’ ‘‘ತುಂಬಾ ವರ್ಷ ಆಯಿತು, ಆಗಿ!’’ಎಂದ. ಅವನ ಕುತೂಹಲ ತಣಿಸಲು ಹೇಳಿದೆ, ‘‘1960ರಲ್ಲಿ ನಿಮ್ಮ ನೆರೆಕರೆಯ ಹುಡುಗರು 8 ಕಿ.ಮೀ. ನಡೆದು ನಮ್ಮ ಅಗಲ್ಪಾಡಿ ಶಾಲೆಗೆ ಬರುತ್ತಿದ್ದರು. ಆಗ ನಿಮ್ಮ ಬೆಳ್ಳೂರಿನಲ್ಲಿ ಶಾಲೆಯೇ ಇರಲಿಲ್ಲ!’’

ಉಚ್ಚ ಶಿಕ್ಷಣದ ಸೌಲಭ್ಯವೂ ಹೊಸಪೀಳಿಗೆಯವರ ಸನಿಹಕ್ಕೇ ಬರಲು ಆರಂಭವಾಯಿತು. ಉಜಿರೆ, ಮಡಂತ್ಯಾರು, ಬಂಟವಾಳ, ಸುಬ್ರಹ್ಮಣ್ಯ, ಮಂಜೇಶ್ವರ, ಮುಂತಾದ ಸಣ್ಣ ಊರುಗಳಲ್ಲಿ ಡಿಗ್ರಿ ಕಾಲೇಜುಗಳು, ಸ್ನಾತಕೋತ್ತರ ಅಧ್ಯಯನ ಕೇಂದ್ರಗಳು ಆರಂಭವಾದವು. ಮಂಗಳೂರು ವಿಶ್ವವಿದ್ಯಾನಿಲಯ ಬೆಳೆಯಿತು. ಸುರತ್ಕಲ್‌ನಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭವಾಗಿತ್ತು; ಹೊಸ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ಹುಟ್ಟಿಕೊಂಡವು. ನಾನು ಹೈಸ್ಕೂಲು ವಿದ್ಯಾಭ್ಯಾಸ ಮುಗಿಸಿದ 30 ವರ್ಷಗಳಲ್ಲಿ ಹೊಸ ಪೀಳಿಗೆಯ ಯುವಜನರಿಗೆ ಆಧುನಿಕ ವಿದ್ಯಾಭ್ಯಾಸ ಸುಲಭಸಾಧ್ಯವಾಯಿತು.

ಬ್ಯಾಂಕುಗಳ ರಾಷ್ಟ್ರೀಕರಣ ಅವುಗಳ ನೀತಿಗಳಿಗೆ ಹೊಸ ತಿರುವನ್ನು ನೀಡಿತ್ತು. 2008ರಲ್ಲಿ ಪತ್ರಿಕೋದ್ಯಮ ಅಧ್ಯಯನ ಮಾಡಲು ಹೊರಟ ನನ್ನ ಮಗಳಿಗೆ ಕಾರ್ಪೊರೇಶನ್ ಬ್ಯಾಂಕು, 2011ರಲ್ಲಿ ಎಂಬಿಎ ಮಾಡಲು ಹೊರಟ ಮಗನಿಗೆ ಯೂನಿಯನ್ ಬ್ಯಾಂಕ್ ಸುಲಭದಲ್ಲಿ ಸಾಲ ನೀಡಿದವು.

ಮುಳಿಹುಲ್ಲಿನ ಮಾಡಿನ ಮನೆಯಲ್ಲಿ ಜೀವಿಸಿ, ರೇಶನ್ ಅಂಗಡಿಯಲ್ಲಿ ಸಿಗುತ್ತಿದ್ದ ದುರ್ವಾಸನೆಯ ಅಕ್ಕಿಯ ಊಟಮಾಡಿ, ಕಲ್ಲು, ಮಣ್ಣು, ಕೆಸರು ತುಂಬಿದ ಕಾಲುದಾರಿಯಲ್ಲಿ ದಿನಾ 8 ಕಿ.ಮೀ. ನಡೆದು ಶಾಲೆಗೆ ಹೋಗುತ್ತಿದ್ದ, ಮಠ-ದೇವಸ್ಥಾನಗಳಲ್ಲಿ ದಿನಾ ಉಂಡು ಓದಿದ ನನಗೆ, ನನ್ನ ಮಕ್ಕಳು ಆ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರಲಿಲ್ಲವೆಂಬ ಹೆಮ್ಮೆ ಇದೆ. ಹುಟ್ಟೂರು ಕಾಸರಗೋಡು ಮತ್ತು ಉದ್ಯೋಗಕ್ಕೋಸ್ಕರ ನೆಲೆಸಿದ ಮಂಗಳೂರಿನಲ್ಲಿ ಅಲ್ಲಲ್ಲಿ ಶಾಲೆಗಳು, ಕಾಲೇಜುಗಳು, ಸರ್ವಕಾಲಿಕ ರಸ್ತೆಗಳು ಮತ್ತು ವಾಹನ ಸೌಕರ್ಯಗಳು, ರೈಲುಗಳು, ಯಥೇಚ್ಛವಾಗಿ ಹಾಲು, ಸುಸಜ್ಜಿತ ಆಸ್ಪತ್ರೆಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ. 70 ವರ್ಷಗಳ ಪರಿವರ್ತನೆೆಯ ಈ ಸಂಕೇತಗಳನ್ನು ನೋಡಿದಾಗಲೆಲ್ಲ ಹಿಂದಿನದು ನೆನಪಾಗುತ್ತದೆ, ಹಾಗೆಯೇ ಅಭಿಮಾನವೂ ಆಗುತ್ತದೆ.

ದೇಶದ ಎಲ್ಲೆಡೆಗಳಲ್ಲಿಯೂ ಈ ಬದಲಾವಣೆಗಳು ಆಗಿಲ್ಲ: ಲಕ್ಷಾಂತರ ಮಂದಿ ಹಸಿವು, ನಿರುದ್ಯೋಗ, ನಿರಕ್ಷರತೆ, ಅನಾರೋಗ್ಯದಿಂದ ಪೀಡಿತರಾಗಿರುವ ಬಗ್ಗೆ ನಿರಂತರ ವರದಿಗಳು ಬರುತ್ತಲೇ ಇವೆ. ದೇಶದ ಪ್ರಗತಿ ಏಕಪ್ರಕಾರವಾಗಿಲ್ಲವೆಂಬುದಕ್ಕೆ ಈ ವರದಿಗಳು ಸಾಕ್ಷಿ. ಆದರೆ, ಹೋದ 70 ವರ್ಷಗಳಲ್ಲಿ ಭಾರತದಲ್ಲಿ ಏನೂ ಪ್ರಗತಿಯಾಗಿಲ್ಲ ಎಂದರೆ ಅದು ವಸ್ತುಸ್ಥಿತಿಗೆ ಭಿನ್ನವಾದ ಹೇಳಿಕೆ. 1949 ಮತ್ತು ಆ ಮೇಲೆ ಹುಟ್ಟಿದ ನನ್ನಂಥಹ ಸಾಮಾನ್ಯ ನಾಗರಿಕನೊಬ್ಬ ಪ್ರಗತಿಯ ಸಾಕ್ಷಿಯಾದರೆ, ನಮ್ಮ ನಂತರದ ಪೀಳಿಗೆಯವರು ಆ ಪ್ರಗತಿಯ ಫಲಾನುಭವಿಗಳು.

Writer - ಟಿ. ಆರ್. ಭಟ್

contributor

Editor - ಟಿ. ಆರ್. ಭಟ್

contributor

Similar News

ಜಗದಗಲ
ಜಗ ದಗಲ