ಬ್ರೆಝಿಲ್ ಅಧ್ಯಕ್ಷರಿಗೆ ಆಹ್ವಾನಕ್ಕೆ ವಿರೋಧ : ಗಣರಾಜ್ಯೋತ್ಸವ ಕಾರ್ಯಕ್ರಮ ಬಹಿಷ್ಕರಿಸಿದ ಕೇರಳ ಸಂಸದ

Update: 2020-01-25 19:56 GMT

ತಿರುವನಂತಪುರಂ, ಜ.25: ಹೊಸದಿಲ್ಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಮುಖ್ಯ ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಳ್ಳಲು ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊಗೆ ಆಹ್ವಾನ ನೀಡಿರುವುದನ್ನು ವಿರೋಧಿಸಿ ಕಾರ್ಯಕ್ರಮ ಬಹಿಷ್ಕರಿಸಲು ನಿರ್ಧರಿಸಿರುವುದಾಗಿ ಕೇರಳದ ರಾಜ್ಯಸಭಾ ಸದಸ್ಯ, ಹಿರಿಯ ಸಿಪಿಐ ಮುಖಂಡ ಬಿನೊಯ್ ವಿಶ್ವಂ ತಿಳಿಸಿದ್ದಾರೆ.

  ಬೊಲ್ಸೊನಾರೊ ಅವರ ಸಿದ್ಧಾಂತ ಮತ್ತು ನೀತಿಗಳು ಧರ್ಮಾಂಧತೆ, ಸ್ತ್ರೀದ್ವೇಷ ಮತ್ತು ಪಕ್ಷಪಾತದ ಧೋರಣೆಯಿಂದ ಕಳಂಕಿತವಾಗಿದೆ ಎಂಬುದರ ಅರಿವಿದ್ದೂ ಸರಕಾರ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿದೆ. ಬ್ರೆಝಿಲ್‌ನಲ್ಲಿ ಹಾಗೂ ಜಾಗತಿಕ ವೇದಿಕೆಯಲ್ಲಿ ಅವರು ಪ್ರತಿಪಾದಿಸುವ ನೀತಿ ನಾವು ಗಣರಾಜ್ಯೋತ್ಸವದಂದು ಆಚರಿಸುವ ಭಾರತದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ . ಅಮೆಝಾನ್‌ನ ಮಳೆಕಾಡು ಹೊತ್ತಿ ಉರಿಯುತ್ತಿದ್ದಾಗ ಬೊಲ್ಸೊನಾರೊ ತೋರಿದ್ದ ನಿರಾಸಕ್ತಿ ಮತ್ತು ನಿಷ್ಕ್ರಿಯತೆ ತುಂಬಲಾಗದ ನಷ್ಟಕ್ಕೆ ಕಾರಣವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಬಿನೊಯ್ ವಿಶ್ವಂ ಹೇಳಿದ್ದಾರೆ.

ಹವಾಮಾನ ಬದಲಾವಣೆಯತ್ತ ಗಮನ ನೀಡುವ ಬದ್ಧತೆಯನ್ನು ಹೊಂದಿರುವ ದೇಶವಾಗಿರುವ ಭಾರತ ಬ್ರೆಝಿಲ್‌ನ ಅಧ್ಯಕ್ಷರ ವರ್ತನೆಯನ್ನು ಖಂಡಿಸಬೇಕು. ಭಾರತದಲ್ಲಿ ಕಬ್ಬು ಬೆಳೆಯುವ ರೈತರಿಗೆ ಸಹಾಯಧನ ಒದಗಿಸಿದ್ದಕ್ಕಾಗಿ ವಿಶ್ವ ವ್ಯಾಪಾರ ಸಂಘಟನೆ(ಡಬ್ಲ್ಯುಟಿಒ) ಸಭೆಯಲ್ಲಿ ಭಾರತದ ವಿರುದ್ಧ ಕ್ರಮಕ್ಕೆ ಆಗ್ರಹಿಸಿದವರು . ಅವರ ನಿರ್ಧಾರಗಳು ಕಬ್ಬು ಬೆಳೆಯುವ ಭಾರತದ 5 ಕೋಟಿಗೂ ಹೆಚ್ಚು ಕುಟುಂಬಗಳ ಜೀವನದ ಮೇಲೆ ನೇರ ಪರಿಣಾಮ ಬೀರಿದೆ. ಅವರನ್ನು ನೀವು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿರುವುದು ದೇಶದ ಪ್ರಜೆಗಳ ಹಾಗೂ ಅವರ ಹೋರಾಟದ ಕುರಿತ ನಿಮ್ಮ ತಾತ್ಸಾರವನ್ನು ಬಿಂಬಿಸುತ್ತದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News