ಪ್ರಧಾನಿ ಹತ್ಯೆಗೆ ಸಂಚು: ನಕಲಿ ಪತ್ರದ ಅಸಲಿ ಮುಖ

Update: 2020-01-27 05:25 GMT

‘ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್’ ಮೈತ್ರಿ ಸರಕಾರದ ಕುರಿತಂತೆ ಹತ್ತು ಹಲವು ಅನುಮಾನಗಳಿದ್ದವು. ಇದು ಅಧಿಕಾರಕ್ಕಾಗಿ ಮಾಡಿಕೊಂಡ ಒಂದು ಅನೈತಿಕ ಮೈತ್ರಿ ಎಂಬ ವ್ಯಾಪಕ ಟೀಕೆಗಳು ಇದರ ಮೇಲಿತ್ತು. ಆದರೆ ದೇಶಕ್ಕೆ ಅತಿ ದೊಡ್ಡ ಸವಾಲಾಗಿ ಪರಿಣಮಿಸಿರುವ ಮೋದಿ ನೇತೃತ್ವದ ಪ್ರಜಾಪ್ರಭುತ್ವ ವೇಷದಲ್ಲಿರುವ ಸರ್ವಾಧಿಕಾರದ ಮುಂದೆ ಈ ಅನೈತಿಕ ಮೈತ್ರಿಯೂ ಅನಿವಾರ್ಯವಾಗಿ ಬಿಟ್ಟಿತು. ಕಟ್ಟರ್ ಹಿಂದುತ್ವವಾದಿಯಾಗಿರುವ ಶಿವಸೇನೆಯೂ ಈ ನಿಟ್ಟಿನಲ್ಲಿ ಕೆಲವು ವಿಷಯಗಳಲ್ಲಿ ಮೃದುವಾಗಿರುವುದು ಸಮಾಧಾನ ತರುವ ವಿಷಯವೇ ಆಗಿದೆ. ಒಂದು ವೇಳೆ ಬಿಜೆಪಿ-ಶಿವಸೇನೆ ಜೊತೆಗೂಡಿ ಸರಕಾರ ರಚಿಸಿದ್ದೇ ಆಗಿದ್ದರೆ, ಕೇಂದ್ರದ ನೀತಿಗಳಿಗೆ ಇನ್ನಷ್ಟು ಮಾನ್ಯತೆ ಸಿಕ್ಕಂತಾಗಿ ಬಿಡುತ್ತಿತ್ತು. ಇಂದು ಮಹಾರಾಷ್ಟ್ರ ಸರಕಾರ ಕೇಂದ್ರದ ಪಾಲಿಗೆ ಹಲವು ವಿಷಯಗಳಲ್ಲಿ ಮಗ್ಗುಲು ಮುಳ್ಳಾಗಿ ಪರಿಣಮಿಸಿದೆ. ಹಿಂದಿನ ಬಿಜೆಪಿ ಆಡಳಿತದಲ್ಲಿ ನಡೆದಿರುವ ಹಲವು ಅಕ್ರಮಗಳು, ದೌರ್ಜನ್ಯಗಳು ಇಂದು ಒಂದೊಂದಾಗಿ ಬಹಿರಂಗವಾಗುವ ಹಂತದಲ್ಲಿವೆ.

ಬಿಜೆಪಿಯ ಆಡಳಿತ ಕಾಲದಲ್ಲಿ ಮುಚ್ಚಿ ಹೋಗಿದ್ದ ಎರಡು ಪ್ರಕರಣಗಳಿಗೆ ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಗರುಡ ಪಾತಾಳವನ್ನು ಹಾಕಿದೆ. ಅದರಲ್ಲಿ ಮುಖ್ಯವಾದದ್ದು ನ್ಯಾಯಮೂರ್ತಿ ಲೋಯಾ ಅಸಹಜ ಸಾವು. ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಕುರಿತಂತೆ ದಿ. ಲೋಯಾ ಅವರು ವಿಚಾರಣೆ ನಡೆಸುತ್ತಿದ್ದರು. ಈ ನಕಲಿ ಎನ್‌ಕೌಂಟರ್‌ನಲ್ಲಿ ಗುಜರಾತ್‌ನ ಮಾಜಿ ಹಾಗೂ ದೇಶದ ಹಾಲಿ ಗೃಹ ಸಚಿವರಾಗಿರುವ ಅಮಿತ್ ಶಾ ಅವರ ಪಾತ್ರವಿದೆ ಎಂದು ಆಗ ಆರೋಪಿಸಲಾಗಿತ್ತು. ವಿಚಾರಣೆ ಮುಕ್ತಾಯ ಹಂತಕ್ಕೆ ಬರಬೇಕು ಎನ್ನುವಷ್ಟರಲ್ಲಿ ಲೋಯಾ ಅವರು ನಿಗೂಢವಾಗಿ ಮೃತಪಟ್ಟರು. ವೈದ್ಯಕೀಯ ದಾಖಲೆಗಳೂ ಈ ಸಾವಿನ ಕುರಿತಂತೆ ಹಲವು ಸಂಶಯಗಳನ್ನು ವ್ಯಕ್ತಪಡಿಸಿತ್ತು. ವಿವಿಧ ವಕೀಲರು, ನಿವೃತ್ತ ನ್ಯಾಯ ಮೂರ್ತಿಗಳೂ ಈ ಸಾವಿನ ತನಿಖೆಯಾಗಬೇಕು ಎಂದು ಸರಕಾರವನ್ನು ಒತ್ತಾಯಿಸಿದ್ದರು. ನಕಲಿ ಎನ್‌ಕೌಂಟರ್ ವಿಚಾರಣೆಯ ಸಂದರ್ಭದಲ್ಲಿ ಲೋಯಾ ಅವರಿಗೆ ಹಣ ಆಮಿಷ ಒಡ್ಡಿರುವುದನ್ನು ಕುಟುಂಬಸ್ಥರು ಮಾಧ್ಯಮಗಳಿಗೆ ತಿಳಿಸಿದ್ದರು. ಆದರೆ ಬಿಜೆಪಿ ನೇತೃತ್ವದ ಸರಕಾರ ಆ ಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ. ಇದೀಗ ಶಿವಸೇನೆ ನೇತ್ವತ್ವದ ಸರಕಾರ ‘ಲೋಯಾ ಅಸಹಜ ಸಾವನ್ನು’ ಪ್ರಸ್ತಾಪಿಸಿದೆ. ಸೂಕ್ತ ದಾಖಲೆಗಳು ಸಿಕ್ಕಿ ಅನಿವಾರ್ಯವೆಂದಾದರೆ ಲೋಯಾ ಸಾವಿನ ತನಿಖೆಯನ್ನು ಮಾಡಲಾಗುತ್ತದೆ ಎಂದು ಸರಕಾರ ತಿಳಿಸಿದೆ. ಇದು ನೇರವಾಗಿ ಗೃಹ ಸಚಿವ ಅಮಿತ್ ಶಾ ಅವರಿಗೆ ನೀಡಿರುವ ಬೆದರಿಕೆಯಾಗಿದೆ.

ಒಂದು ವೇಳೆ ಲೋಯಾ ಪ್ರಕರಣ ಮತ್ತೆ ತೆರೆದುಕೊಂಡರೆ ಅದು ಕೇಂದ್ರ ಸರಕಾರದ ಮೇಲೆ ಭಾರೀ ಪರಿಣಾಮ ಬೀರುವ ಸಾಧ್ಯತೆಗಳು ಇವೆ. ಇನ್ನೊಂದು ಪ್ರಮುಖ ಪ್ರಕರಣ ‘ಪ್ರಧಾನಿ ಹತ್ಯೆ ಸಂಚು’. ಒಂದು ಕೈಬರಹದ ಪತ್ರದ ಆಧಾರದಲ್ಲಿ ಪ್ರಧಾನಿಯವರ ಹತ್ಯೆಯ ಸಂಚು ನಡೆಸಿದ್ದಾರೆ ಎಂದು ಆರೋಪಿಸಿ ಹತ್ತಾರು ಚಿಂತಕರನ್ನು ‘ನಗರ ನಕ್ಸಲ್’ ಎಂದು ಕರೆದು ಬಂಧಿಸಲಾಯಿತು. ಇಂದಿಗೂ ಅವರು ತಾವು ಮಾಡದ ಆರೋಪಕ್ಕಾಗಿ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. ಇವರನ್ನೆಲ್ಲ ಬಂಧಿಸಿದ ಮೂಲ ಕಾರಣವೇ ‘ಕೋರೆಗಾಂವ್ ವಿಜಯ ದಿವಸ’ ಆಚರಣೆ. 500 ಮಂದಿ ದಲಿತರು 20,000ಕ್ಕೂ ಅಧಿಕ ಇದ್ದ ಪೇಶ್ವೆಗಳ ಸೇನೆಯನ್ನು ಸೋಲಿಸಿದ ದಿನವನ್ನು ಮಹಾರಾಷ್ಟ್ರದಲ್ಲಿ ಕೋರೆಗಾಂವ್ ವಿಜಯ ದಿವಸಾಗಿ ಆಚರಿಸುತ್ತಾ ಬರಲಾಗುತ್ತಿದೆ. ಪೇಶ್ವೆಗಳ ಜಾತೀಯತೆಯ ವಿರುದ್ಧ ದಲಿತರಿಗೆ ಸಿಕ್ಕಿದ ಮೊದಲ ವಿಜಯ ಇದು. ಈ ಆಚರಣೆ ಹಲವು ವರ್ಷಗಳಿಂದ ಸಂಘಪರಿವಾರಕ್ಕೆ ಮುಜುಗರ ಸೃಷ್ಟಿಸುತ್ತಾ ಬಂದಿತ್ತು. ಆದರೆ ಸಂಘಟಿತ ದಲಿತರಿಂದಾಗಿ ಅದನ್ನು ಪ್ರಶ್ನಿಸುವ ಶಕ್ತಿ ಅವರಲ್ಲಿ ಇರಲಿಲ್ಲ. ಆದರೆ ಯಾವಾಗ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಗಟ್ಟಿಯಾಗಿ ಬೇರೂರಿತೋ ಆಗ ಕೋರೆಗಾಂವ್ ವಿರುದ್ಧದ ಸಂಘ ಪರಿವಾರದ ಅಸಹನೆ ಹೊರಬಿತ್ತು. ದೇಶಾದ್ಯಂತ ದಲಿತ ದೌರ್ಜನ್ಯಗಳ ವಿರುದ್ಧ ಆಕ್ರೋಶ ಭುಗಿಲೇಳುತ್ತಿರುವ ಸಂದರ್ಭದಲ್ಲಿ ವಿವಿಧ ಚಿಂತಕರು, ಹೋರಾಟಗಾರರ ನೇತೃತ್ವದಲ್ಲಿ ಕೋರೆಗಾಂವ್‌ನಲ್ಲಿ ಬೃಹತ್ ದಲಿತ ಸಮಾವೇಶ ನಡೆಯಿತು. ಈ ಸಮಾವೇಶವನ್ನು ಭಗ್ನಗೊಳಿಸಲೆಂದೇ ಸಂಘಪರಿವಾರ ಬೀದಿಗಿಳಿಯಿತು. ಸಾಂಬಾಜಿಯ ಪಕ್ಕದಲ್ಲಿದ್ದ ದಲಿತ ಮಹಾರ್‌ನ ಗೋರಿಯನ್ನು ನಾಶ ಮಾಡಲಾಯಿತು. ಇದು ವದಂತಿಗಳನ್ನು ಹುಟ್ಟು ಹಾಕಿತು. ಕೋರೆಗಾಂವ್ ವಿಜಯೋತ್ಸವಕ್ಕೆ ಸಾಗುತ್ತಿದ್ದ ದಲಿತರ ಮೇಲೆ ಸಂಘಪರಿವಾರ ಕಾರ್ಯಕರ್ತರಿಂದ ದಾಳಿಗಳು ನಡೆದವು. ವಿಪರ್ಯಾಸವೆಂದರೆ, ದಾಳಿಗಳನ್ನು ಸಂಘಟಿಸಿದ್ದು ಸಂಘಪರಿವಾರವಾದರೂ, ವಿಜಯೋತ್ಸವ ಸಮಾರಂಭದ ಭಾಷಣಗಳೇ ಹಿಂಸಾಚಾರಕ್ಕೆ ಕಾರಣವಾಯಿತು ಎಂದು ಪೊಲೀಸರು ಹಲವು ನಾಯಕರ ಮೇಲೆ ಪ್ರಕರಣ ದಾಖಲಿಸಿದರು.

ಹಿಂಸಾಚಾರದ ಆರೋಪದಲ್ಲಿ ಹಲವು ದಲಿತ ಕಾರ್ಯಕರ್ತರನ್ನೂ ಜೈಲಿಗೆ ತಳ್ಳಲಾಯಿತು. ಈ ಸಂದರ್ಭದಲ್ಲೇ ದಿಲ್ಲಿ ಮೂಲದ ಹೋರಾಟಗಾರ ರೋನಾ ವಿಲ್ಸನ್ ನಿವಾಸದಲ್ಲಿ ಮೋದಿ ಹತ್ಯೆ ಸಂಚಿಗೆ ಸಂಬಂಧಪಟ್ಟ ಪತ್ರವೊಂದನ್ನು ಪೊಲೀಸರು ಪತ್ತೆ ಹಚ್ಚಿದರು ಮತ್ತು ಇದರ ಆಧಾರದಲ್ಲಿ ಸಾಮಾಜಿಕ ಹೋರಾಟಗಳಲ್ಲಿ ಸಕ್ರಿಯರಾಗಿದ್ದ ಹಲವು ನಾಯಕರನ್ನು ‘ಅರ್ಬನ್ ನಕ್ಸಲ್’ ಎಂದು ಕರೆದು ಜೈಲಿಗೆ ತಳ್ಳಿದರು. ಇದು ಪೊಲೀಸರೇ ಸೃಷ್ಟಿಸಿದ ‘ನಕಲಿ ಪತ್ರ’ ಎಂದು ಹಲವು ಮಾಧ್ಯಮಗಳು ಆರೋಪಿಸಿದ್ದವು. ಆದರೆ ವಿಸ್ತರಿಸುತ್ತಿದ್ದ ದಲಿತರ ಪ್ರತಿಭಟನೆಗಳನ್ನು ದಮನಿಸಲು ಈ ನಾಯಕರನ್ನು ಜೈಲಿಗೆ ತಳ್ಳುವುದು ಪೊಲೀಸರಿಗೆ ಅಗತ್ಯವಾಗಿತ್ತು ಮತ್ತು ಅದರಲ್ಲಿ ಯಶಸ್ವಿಯಾದರು. ಮಾನವ ಹಕ್ಕು ಹೋರಾಟಗಾರರ ಬಂಧನದ ಬಗ್ಗೆ ವಿಶ್ವದಾದ್ಯಂತ ಪ್ರತಿಭಟನೆ ವ್ಯಕ್ತವಾಗಿದ್ದವು.

ಇದೀಗ ಮಹಾರಾಷ್ಟ್ರ ಸರಕಾರ ಕೋರೆಗಾಂವ್ ಪ್ರಕರಣದ ಅಸಲಿಯತ್ತು ಏನ್ನು ಎನ್ನುವುದನ್ನು ಬಯಲು ಮಾಡಲು ಹೊರಟಿದೆ. ಈಗಾಗಲೇ ಕೋರೆಗಾಂವ್ ಪ್ರಕರಣದಲ್ಲಿ ಬಂಧಿಯಾಗಿರುವ ಹಲವರ ಬಿಡುಗಡೆಯ ಬಗ್ಗೆ ಸರಕಾರ ಭರವಸೆ ನೀಡಿದೆ. ಇದೇ ಸಂದರ್ಭದಲ್ಲಿ ‘ಪ್ರಧಾನಿ ಹತ್ಯೆ ಸಂಚಿ’ನ ಹಿಂದಿರುವ ಪೊಳ್ಳುತನವನ್ನೂ ಗುರುತಿಸಿದೆ. ಇದಕ್ಕೆ ಸಂಬಂಧಪಟ್ಟಂತೆ ಪೊಲೀಸರಿಂದ ಮಾಹಿತಿಯನ್ನು ಪಡೆದುಕೊಂಡಿದೆ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ‘‘ಪತ್ತೆಯಾಗಿರುವ ಪ್ರಧಾನಿ ಹತ್ಯೆಗೆ ಸಂಬಂಧ ಪಟ್ಟ ಪತ್ರ ನಕಲಿಯಾಗಿರುವ ಸಾಧ್ಯತೆಗಳಿವೆ’’ ಎಂದು ಹೇಳಿರುವುದು ಗಮನಾರ್ಹವಾಗಿದೆ. ತಮಾಷೆಯೆಂದರೆ, ಕೋರೆಗಾಂವ್ ಪ್ರಕರಣದ ಬಗ್ಗೆ ಮಹಾರಾಷ್ಟ್ರ ಸರಕಾರ ಆಸಕ್ತಿ ತೋರುತ್ತಿದ್ದಂತೆಯೇ, ಭೀಮಾ ಕೋರೆಗಾಂವ್ ಹಿಂಸಾಚಾರ ಎನ್‌ಐಎಗೆ ವರ್ಗಾವಣೆಗೊಂಡಿದೆ. ‘ಚಾರ್ಜ್ ಶೀಟ್‌ಗಳಲ್ಲಿನ ಪುರಾವೆಗಳನ್ನು ದೃಢೀಕರಿಸಲು 15 ದಿನಗಳ ಒಳಗೆ ಸಾಧ್ಯವಾಗದೇ ಇದ್ದರೆ ಸರಕಾರ ಮರು ತನಿಖೆಗೆ ಮುಂದಾಗಲಿದೆ’’ ಎಂದು ಅಜಿತ್ ಪವಾರ್ ಹೇಳಿದ್ದು ,ಪ್ರಕರಣವನ್ನು ಹಾದಿ ತಪ್ಪಿಸಿದ ಮಹಾರಾಷ್ಟ್ರ ಪೊಲೀಸರಿಗೆ ಮತ್ತು ಅವರ ಮೇಲೆ ಪ್ರಭಾವ ಬೀರಿರುವ ಕೇಂದ್ರದ ನಾಯಕರಿಗೆ ಬಿಸಿ ಮುಟ್ಟಿಸಿದೆ. ಆದುದರಿಂದಲೇ ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಲು ಸರಕಾರ ಮುಂದಾಗಿದೆ. ಭಯೋತ್ಪಾದನೆಗೆ ಸಂಬಂಧಪಟ್ಟ ಪ್ರಕರಣಗಳನ್ನು ತಿರುಚಿ, ಉಗ್ರವಾದಿಗಳನ್ನು ಬಚಾವ್ ಮಾಡಿದ ಹೆಗ್ಗಳಿಕೆ ಹೊರತು ಪಡಿಸಿ ಇನ್ನಾವ ಇತಿಹಾಸವೂ ಎನ್‌ಐಎಗೆ ಇಲ್ಲ. ಒಟ್ಟಿನಲ್ಲಿ ಕೋರೆಗಾಂವ್ ಮರುತನಿಖೆ ಕೇಂದ್ರ ಸರಕಾರ ಯಾಕೆ ಹೆದರಿದೆ ಎನ್ನುವುದೇ ಕೋರೆಗಾಂವ್ ವಿಜಯೋತ್ಸವದಲ್ಲಿ ನಡೆದದ್ದು ಏನು ಎನ್ನುವುದನ್ನು ಬಹಿರಂಗಪಡಿಸುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News