100ನೇ ಜನ್ಮದಿನ ಆಚರಿಸಿದ ಮಾಜಿ ಕ್ರಿಕೆಟಿಗ ವಸಂತ್ ರೈಜಿ

Update: 2020-01-27 04:24 GMT

ಮುಂಬೈ, ಜ.26: ರವಿವಾರ 100ನೇ ವಯಸ್ಸಿಗೆ ಕಾಲಿಟ್ಟಿರುವ ಮಾಜಿ ಕ್ರಿಕೆಟಿಗ ವಸಂತ ರೈಜಿ ನಿಜ ಜೀವನದಲ್ಲಿ ಶತಕ ಪೂರೈಸಿದರು. ರೈಜಿ ಈಗ ಬದುಕಿರುವ ಭಾರತದ ಪ್ರಥಮ ದರ್ಜೆ ಕ್ರಿಕೆಟಿಗರಲ್ಲಿ ಅತ್ಯಂತ ಹಿರಿಯರಾಗಿದ್ದಾರೆ.

ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ರೈಜಿ 1940ರ ದಶಕದಲ್ಲಿ 9 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದಾರೆ. ಒಟ್ಟು 277 ರನ್ ಗಳಿಸಿರುವ ಅವರ ಗರಿಷ್ಠ ವೈಯಕ್ತಿಕ ಸ್ಕೋರ್ 68. ದಕ್ಷಿಣ ಮುಂಬೈನ ಬಾಂಬೆ ಜಿಮ್ಖಾನಾದಲ್ಲಿ ಭಾರತ ಮೊದಲ ಟೆಸ್ಟ್ ಪಂದ್ಯ ಆಡಿದಾಗ ಇತಿಹಾಸ ತಜ್ಞರೂ ಆಗಿರುವ ರೈಜಿಗೆ ಆಗ 13 ವರ್ಷವಾಗಿತ್ತು. ಹೀಗಾಗಿ ಅವರು ಭಾರತೀಯ ಕ್ರಿಕೆಟ್‌ನ ಸಂಪೂರ್ಣ ಪಯಣವನ್ನು ನೋಡಿದ್ದಾರೆ. ರೈಜಿ, ಬಾಂಬೆ(ಈಗಿನ ಮುಂಬೈ)ಹಾಗೂ ಬರೋಡಾದ ಪರ ಆಡಿದ್ದರು.

ಇತ್ತೀಚೆಗೆ ಆಸ್ಟ್ರೇಲಿಯದ ಮಾಜಿ ನಾಯಕ ಸ್ಟೀವಾರೊಂದಿಗೆ ರೈಜಿ ಅವರನ್ನು ಭೇಟಿಯಾಗಿದ್ದ ಕ್ರಿಕೆಟ್ ಐಕಾನ್ ಸಚಿನ್ ತೆಂಡುಲ್ಕರ್ ಟ್ವಿಟರ್‌ನ ಮೂಲಕ ರೈಜಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

‘‘ವಸಂತ ರೈಜಿಗೆ ಅತ್ಯಂತ ವಿಶೇಷವಾಗಿ 100ನೇ ಹುಟ್ಟುಹಬ್ಬದ ಶುಭಾಶಯ ಕೋರುವೆ. ಸ್ಟೀವ್ ಹಾಗೂ ನನಗೆ ಕ್ರಿಕೆಟ್‌ನಕೆಲವು ಅದ್ಭುತ ಕಥೆಗಳನ್ನು ಕೇಳುವ ಅಮೋಘ ಸಮಯ ಲಭಿಸಿತ್ತು. ಕ್ರಿಕೆಟ್‌ನ ಸ್ಮರಣೀಯ ನೆನಪುಗಳನ್ನು ನಮ್ಮಿಂದಿಗೆ ಹಂಚಿಕೊಂಡಿರುವ ನಿಮಗೆ ಧನ್ಯವಾದ’’ ಎಂದು ಸಚಿನ್ ತೆಂಡುಲ್ಕರ್ ಟ್ವೀಟ್ ಮಾಡಿದ್ದಾರೆ.

ರೈಜಿ ಅವರು ಲಾಲಾ ಅಮರನಾಥ್, ವಿಜಯ ಮರ್ಚೆಂಟ್, ಸಿ.ಕೆ. ನಾಯ್ಡು, ವಿಜಯ ಹಝಾರೆ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದಾರೆ. ದಕ್ಷಿಣ ಮುಂಬೈನ ವಾಲ್ಕೇಶ್ವರದಲ್ಲಿ ನೆಲೆಸಿದ್ದ ರೈಜಿ ಹಲವು ಪುಸ್ತಕಗಳನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News