​ವಿದೇಶಿ ಟೈರು, ಪೀಠೋಪಕರಣ ಆಮದಿಗೆ ನಿರ್ಬಂಧ

Update: 2020-01-27 04:31 GMT

ಹೊಸದಿಲ್ಲಿ, ಜ.27: ದೇಶಿ ಕೈಗಾರಿಕೆಗಳಿಗೆ ಉತ್ತೇಜನ ನೀಡುವ ಸಲುವಾಗಿ, ವಿದೇಶಗಳಿಂದ ಪೀಠೋಪಕರಣ ಹಾಗೂ ಕೆಲ ಬಗೆಯ ಟೈರುಗಳ ಆಮದನ್ನು ನಿಷೇಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಅಗ್ಗದ ಸರಕುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಹಿನ್ನೆಲೆಯಲ್ಲಿ ದೇಶೀಯ ಉತ್ಪಾದಕ ಕಂಪೆನಿಗಳನ್ನು ಪ್ರೋತ್ಸಾಹಿಸಲು ರಿಟ್ರೇಡೆಡ್ ಟೈರುಗಳ ಆಮದನ್ನು ನಿಷೇಧಿಸಲು ನಿರ್ಧರಿಸಲಾಗಿದೆ.

ಪೀಠೋಕರಣ ಆಮದು ಮಾಡಿಕೊಳ್ಳುತ್ತಿರುವ ಬಗ್ಗೆ ಈಗಾಗಲೇ ಕೇಂದ್ರ ವಾಣಿಜ್ಯ ಇಲಾಖೆ ಅಂಕಿಅಂಶಗಳನ್ನು ವಿಶ್ಲೇಷಿಸಿದ್ದು, ಮುಂದಿನ ಕೆಲ ದಿನಗಳಲ್ಲಿ ಆಮದು ನಿರ್ಬಂಧಿಸುವ ಬಗ್ಗೆ ಅಧಿಕೃತ ಪ್ರಕಟನೆ ಹೊರಬೀಳಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಕೆಲ ಬಗೆಯ ಹರಳುಗಳ ಆಮದು ನಿಷೇಧಿಸುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ತಿಳಿದುಬಂದಿದೆ.

ಮೇಕ್ ಇನ್ ಇಂಡಿಯಾ ಯೋಜನೆಗೆ ಉತ್ತೇಜನ ನೀಡುವ ಕಾರ್ಯತಂತ್ರದ ಭಾಗವಾಗಿ ಅನಗತ್ಯ ವಸ್ತುಗಳ ಆಮದನ್ನು ನಿಯಂತ್ರಿಸಲು ಸರ್ಕಾರ ನಿರ್ಧರಿಸಿದೆ. ಆರ್ಥಿಕ ಹಿಂಜರಿತದ ಅಪಾಯ ಎದುರಿಸುತ್ತಿರುವ ಕಂಪನಿಗಳಿಗೆ ಉತ್ತೇಜನ ನೀಡುವುದು ಇದರ ಉದ್ದೇಶ.

ನಿರ್ಬಂಧ ವಿಧಿಸಲು ಸರ್ಕಾರ ಈಗಾಗಲೇ 350 ಅನಗತ್ಯ ವಸ್ತುಗಳನ್ನು ಸರ್ಕಾರ ಪಟ್ಟಿ ಮಾಡಿದೆ. ಆಟಿಕೆಗಳು, ಎಲೆಕ್ಟ್ರಾನಿಕ್ಸ್, ಪಾದರಕ್ಷೆ, ಜವಳಿ ಉತ್ಪನ್ನಗಳು ಇದರಲ್ಲಿ ಸೇರಿವೆ. ಗುಣಮಟ್ಟ ಮಾನದಂಡ, ಅಧಿಕ ಸುಂಕ ಮತ್ತು ಲೈಸನ್ಸಿಂಗ್ ಹೀಗೆ ವಿವಿಧ ಆಯಾಮಗಳಲ್ಲಿ ಕಡಿವಾಣ ಹಾಕಲು ಚಿಂತನೆ ನಡೆದಿದೆ ಎಂದು ಮೂಲಗಳು ವಿವರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News