ವಿಧಾನಪರಿಷತ್ತನ್ನೇ ರದ್ದುಗೊಳಿಸುವ ಕರಡು ಮಸೂದೆಗೆ ಆಂಧ್ರ ಸಚಿವ ಸಂಪುಟ ಅನುಮೋದನೆ

Update: 2020-01-27 09:48 GMT

ಅಮರಾವತಿ, ಜ.27: ರಾಜ್ಯ ವಿಧಾನ ಪರಿಷತ್ ನ್ನು  ರದ್ದುಗೊಳಿಸುವ ಕರಡು ಮಸೂದೆಗೆ ಆಂಧ್ರಪ್ರದೇಶದ ಸಚಿವ ಸಂಪುಟ ಸಭೆಯು ಅನುಮೋದನೆ ನೀಡಿದೆ..

ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ನೇತೃತ್ವದಲ್ಲಿ   ಸೋಮವಾರ ಇಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆಂಧ್ರಪ್ರದೇಶದ ವಿಧಾನ ಪರಿಷತ್ತನ್ನು ರದ್ದುಗೊಳಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ.

ವಿಪಕ್ಷ ತೆಲುಗು ದೇಶಂ ಪಕ್ಷದ (ಟಿಡಿಪಿ) ಸದಸ್ಯರ ಪ್ರಾಬಲ್ಯವಿರುವ ವಿಧಾನ ಪರಿಷತ್ತಿನ ಹಿನ್ನೆಲೆಯಲ್ಲಿ ಈ ಕ್ರಮವು ಬಂದಿದ್ದು, ಶಾಸಕಾಂಗ ಸಭೆಯಲ್ಲಿ ಅಂಗೀಕರಿಸಲಾದ ಮಸೂದೆಗಳನ್ನು ತಡೆಯಲು ವಿಪಕ್ಷ  ಟಿಡಿಪಿಯ ಬಹುಮತವನ್ನು  ದುರುಪಯೋಗಪಡಿಸಿಕೊಂಡಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯು ಪರಿಷತ್ತನ್ನು ರದ್ದುಗೊಳಿಸಲು ತೀರ್ಮಾನಿಸಿತು.

ಕರಡು ಮಸೂದೆಯನ್ನು ಈಗ ಆಡಳಿತಾರೂಢ ವೈಎಸ್‌ಆರ್‌ಸಿಪಿ ಬಹುಮತ ಹೊಂದಿರುವ ವಿಧಾನಸಭೆಯಲ್ಲಿ ಮಂಡಿಸಲಾಗುವುದು ಮತ್ತು ಆದ್ದರಿಂದ ಮಸೂದೆಯನ್ನು ಸುಲಭವಾಗಿ  ಅಂಗೀಕರಿಸಲು ಸಾಧ್ಯವಾಗುತ್ತದೆ. ಇದನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಅನುಮೋದನೆಗಾಗಿ ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು. ಈ ಮಸೂದೆಯನ್ನು ಭಾರತದ ರಾಷ್ಟ್ರಪತಿಗೆ ಕಳುಹಿಸುವ ಮೊದಲು ಸಂಸತ್ತಿನ ಉಭಯ ಸದನಗಳ  ಅನುಮೋದನೆ ಪಡೆಯಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News