ಮೊದಲು ನಮಸ್ಕರಿಸಿ, ಆಮೇಲೆ ಗುಂಡು

Update: 2020-01-27 18:25 GMT

ಜನಪ್ರತಿನಿಧಿಗಳು ಅಂದರೆ ಎಂಪಿ, ಎಂಎಲ್‌ಎ ಇಂಥವರು ಹೇಗೆ ಆಯ್ಕೆ ಆಗ್ತಾರೆ ಅಂತ ಎಲ್ಲರಿಗೂ ಗೊತ್ತು. ಮತದಾರರು ಅಂದರೆ ನಾವು ನೀವು ಜನಪ್ರತಿನಿಧಿಗಳನ್ನು ಆಯ್ಕೆ ಮಾಡ್ತೇವೆ. ಅದನ್ನೇನು ವಿವರಿಸಿ ಹೇಳಬೇಕಾಗಿಲ್ಲ. ಜನಪ್ರತಿನಿಧಿಗಳನ್ನೇ ಆಯ್ಕೆ ಮಾಡುವ ನಮ್ಮ ನಿಮ್ಮ ಕತೆ ಏನಾಗಿದೆ ನೋಡಿ. ನಾವು ನೀವು ಆಯ್ಕೆ ಮಾಡಿದ ಜನಪ್ರತಿನಿಧಿಯೇ ಇಂದು ಅವನನ್ನು ಆಯ್ಕೆ ಮಾಡಿದ ಮತದಾರರನ್ನೇ ನೀನು ಈ ದೇಶದವನು ಅಂತ ಸಾಬೀತು ಪಡಿಸು ಅಂತ ಕೇಳ್ತಾ ಇದ್ದಾನೆ. ಇಂದು ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್ ಜಾರಿಗೆ ತಂದು ನಮ್ಮ ಪ್ರಧಾನಿಯವರು ನಿನ್ನ ಪೌರತ್ವ ಸಾಬೀತು ಪಡಿಸು ಎಂದು ಅಪ್ಪಣೆ ಮಾಡಿದ್ದಾರೆ. ಇಡೀ ಭಾರತದ ಜನ ಒಕ್ಕೊರಲಿನಿಂದ ಪ್ರಧಾನಿಯವರನ್ನು ಕೇಳಬೇಕಾಗಿದೆ- ಅಲ್ಲಪ್ಪಾ, ನಾವು ನಿಮಗೆ ಓಟು ಕೊಡದಿದ್ದರೆ, ವೋಟು ಕೊಟ್ಟು ನಿಮ್ಮನ್ನು ಆಯ್ಕೆ ಮಾಡದಿದ್ದರೆ ನೀವು ಎಲ್ಲಪ್ಪ ಪ್ರಧಾನಿ ಆಗ್ತಾ ಇದ್ದಿರಿ? ಹಾಗೇನೆ ಕೇಳಬೇಕಾಗಿದೆ- ನಾವೇ ಆಯ್ಕೆ ಮಾಡಿದ ನೀವು, ನಿಮ್ಮನ್ನು ಆಯ್ಕೆ ಮಾಡಿದ ನಮ್ಮನ್ನೇ ಈಗ ನೀವು ಈ ದೇಶಕ್ಕೆ ಸೇರಿದವನು ಅಂತ ಸಾಬೀತು ಪಡಿಸು ಪ್ರೂವ್ ಮಾಡು ಅಂತ ಕೇಳ್ತಾ ಇದ್ದೀರಲ್ಲ? ಇದು ಸರೀನಾ? ನ್ಯಾಯನಾ?

ಮತ್ತೂ ಕೇಳಬೇಕಾ ಗಿದೆ-ನೀವು ನಮ್ಮ ಮತ ಪಡೆಯಲು ಮತದಾರರಿಗೆ ಏನೇನು ಕನಸುಗಳನ್ನು ಮುಂದಿಟ್ಟಿರಿ! ಬಣ್ಣ ಬಣ್ಣದ ಕನಸುಗಳನ್ನು ಮುಂದಿಟ್ಟರಿ. ವರ್ಷಕ್ಕೆ ಕೋಟಿಗಟ್ಟಲೆ ಉದ್ಯೋಗ ಸೃಷ್ಟಿಸ್ತೀನಿ ಅಂದಿರಿ! ಮಾಡಿದ್ದೇನು? ಇರೋ ಬರೋ ಉದ್ಯೋಗಗಳನ್ನೇ ಮುಳುಗಿಸಿದ್ದೀರಿ. ರೈತರಿಗೆ ಸ್ವಾಮಿನಾಥನ್ ಆಯೋಗದ ಶಿಫಾರಸು ಜಾರಿ ಮಾಡ್ತೀನಿ ಅಂದಿರಿ. ಅದರ ಸುಳಿವೇ ಇಲ್ಲ. ರೈತರು ಮತ್ತು ಗ್ರಾಮೀಣ ಜನತೆ ಮಾತ್ರವಲ್ಲ ಎಲ್ಲರ ಬದುಕು ಬೆಂಕಿಗೆ ಬಿದ್ದಂತೆ ಆಗಿದೆ. ನೆರೆ ಬರದಿಂದ ನಾಡು ಕೊಚ್ಚಿ ಹೋಗುತ್ತಿದ್ದಾಗ ತಾವು ಪರಿಹಾರ ನೀಡದೆ ಕಠೋರವಾಗಿ ನಡೆದುಕೊಂಡಿರಿ. ಇದು ಜನ ನಾಯಕನಿಗೆ ಯೋಗ್ಯ ನಡೆಯೇ? ಅಷ್ಟೇಕೆ ನಿಮಗೆ ನೆನಪಿದೆಯೋ ನೆನಪಿಲ್ಲವೊ ನಮಗೆ ಗೊತ್ತಿಲ್ಲ. ಆದರೆ ನಮಗೆ ನೆನಪಿದೆ. ಕಪ್ಪುಹಣ ತಂದು ಎಲ್ಲರ ಅಕೌಂಟ್‌ಗೆ 15 ಲಕ್ಷ ರೂ. ಹಾಕುತ್ತೇನೆ ಎಂದು ನೋಟ್ ಬ್ಯಾನ್ ಮಾಡಿ ಜನರು ತಾವು ಇಟ್ಟಿದ್ದ ಹಣಕ್ಕಾಗಿ ಕ್ಯೂನಲ್ಲಿ ನಿಂತು ಎಷ್ಟೊ ಜನ ಸತ್ತರು. ಸಾಲದು ಎಂಬಂತೆ ಈಗ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಜಾರಿಗೆ ಬಂದರೆ ಆಗ ಜನರು ತಮ್ಮ ಪೌರತ್ವ ಸಾಬೀತು ಪಡಿಸಲು ವರ್ಷಾನುಗಟ್ಟಲೆ ಅಲೆಯುವಂತಹ ಧಾರುಣ ವಾತಾವರಣ ದೇಶದ ತುಂಬ ಉಂಟಾಗುತ್ತದೆ. ಇದು ಭಾರತಕ್ಕೆ ಬೇಕಾಗಿದೆಯೇ? ಸರಕಾರಕ್ಕೆ ತನ್ನ ವಿಫಲತೆ ಮುಚ್ಚಿಕೊಳ್ಳಲು ಬೇಕಾಗಿರಬಹುದು. ಜನರು ಪೌರತ್ವ ರುಜುವಾತು ಪಡಿಸಲು ಅಲೆಯುತ್ತಿರಲಿ, ಬೆಲೆ ಏರಿಕೆ, ನಿರುದ್ಯೋಗ, ಆರ್ಥಿಕ ಕುಸಿತಕ್ಕೆ ತಲೆ ಕೆಡಿಸಿಕೊಳ್ಳದಿರಲಿ ಎಂದು ಸರಕಾರವೇ ಪೌರತ್ವದ ಬೆಂಕಿ ಹಚ್ಚಿದೆ ಎಂದು ಕಾಣುತ್ತದೆ. ಇದೆಲ್ಲಾ ಜನಸಮುದಾಯಕ್ಕೆ ಬೇಕಾಗಿದೆಯೇ? ಮೋದಿಯವರು ಜನರ ಮನಸ್ಸಿಗೆ ಕೊಟ್ಟಿದ್ದು ಕನಸು. ಆದರೆ ಜನರ ಬದುಕಿಗೆ ನೀಡಿದ್ದು ದುಃಸ್ವಪ್ನ.

ಒಂದು ಜಾನಪದ ಗೀತೆ ಇದೆ- ‘‘ಜವರಾಯ ಬಂದರೆ ಬರಿಗೈಲಿ ಬರಲಿಲ್ಲ, ಕುಡುಗೋಲು ಕೈಲಿ ಹಿಡಿದು ಬಂದ, ಒಳ್ಳೊಳ್ಳೆ ಮರವ ಕಡಿತಾ ತಾ ಬಂದ.’’ ಈ ರೀತಿ ನಡೀತಾ ಇದೆ ಮೋದಿ, ಶಾ ಆಳ್ವಿಕೆ. ಸ್ವಾತಂತ್ರ್ಯ ಪಡೆದ ನಂತರ ಕಟ್ಟಿದ್ದ ಒಳ್ಳೊಳ್ಳೆ ಸಂಸ್ಥೆಗಳು, ಸಾರ್ವಜನಿಕ ಆಸ್ತಿಪಾಸ್ತಿ, ನೈಸರ್ಗಿಕ ಸಂಪತ್ತು, ಮತಧರ್ಮಗಳ ನಡುವೆ ಇದ್ದ ಸೌಹಾರ್ದಯುತ ಸಂಬಂಧ ಎಲ್ಲವನ್ನೂ ಕೆಡವಲಾಗುತ್ತಿದೆ. ಕಟ್ಟುವ ಬದಲು ಕಟ್ಟಿರುವುದನ್ನೇ ಕೆಡವಲಾಗುತ್ತಿದೆ. ಈಗ ಎನ್‌ಪಿಆರ್, ಎನ್‌ಆರ್‌ಸಿ, ಸಿಎಎ ಜಾರಿಗೆ ತಂದು ಪೌರತ್ವ ನಿರ್ಧಾರಕ್ಕೆ ಧರ್ಮವನ್ನು ಪರಿಗಣಿಸಿ ಸಂವಿಧಾನದ ಧರ್ಮ ನಿರಪೇಕ್ಷ ಆಶಯಕ್ಕೆ ಚ್ಯುತಿ ತರಲಾಗಿದೆ. ಗೋಡ್ಸೆ ಗಾಂಧಿ ಕಾಲಿಗೆ ನಮಸ್ಕರಿಸಿ, ಆಮೇಲೆ ಗಾಂಧಿ ಹೃದಯಕ್ಕೆ ಗುಂಡು ಹೊಡೆಯುತ್ತಾನೆ. ಮೋದಿಯವರೂ ಪ್ರಧಾನಿಯಾದಾಗ ಸಂವಿಧಾನಕ್ಕೆ ವಿನಮ್ರವಾಗಿ ಬಗ್ಗಿ ನಮಸ್ಕರಿಸುತ್ತಾರೆ. ನಮಸ್ಕರಿಸಿ, ಸಂವಿಧಾನದ ಆಶಯಕ್ಕೆ ಗುಂಡು ಹೊಡೆದುಬಿಟ್ಟರು.

ಈಗ ಸಂವಿಧಾನದ ಮೌಲ್ಯವನ್ನು ಉಳಿಸಿಕೊಳ್ಳುವುದಕ್ಕಾಗಿ, ನಾಳೆ ಬದುಕಿ ಬಾಳಬೇಕಾದ ವಿದ್ಯಾರ್ಥಿ ಯುವಜನತೆ ಮುನ್ನೆಲೆಗೆ ಬಂದಿದೆ. We, the People of India ಅಂದರೆ ನಾವು ಭಾರತೀಯರು ಶೇ. 99 V/s ಶೇ. 1 ಕೋಮುವಾದಿಗಳ ನಡುವೆ ಸಂಘರ್ಷ ಎಂದು ಕೂಗಿ ಕೂಗಿ ಹೇಳುತ್ತಿದೆ. ಇಂದು ಜಾತಿ ಜಾತಿಗಳ ನಡುವೆ ಧರ್ಮ ಧರ್ಮಗಳ ನಡುವೆ ಸಾಮರಸ್ಯ, ಸಹನೆ, ಪ್ರೀತಿ ಬೆಳೆಸಬೇಕಾಗಿದೆ. ದೇಶವನ್ನು ಮತ್ತೆ ಕಟ್ಟಬೇಕಾಗಿದೆ. ಇದಕ್ಕಾಗಿ ವಿದ್ಯಾರ್ಥಿ ಯುವಜನತೆ ಪಣ ತೊಟ್ಟಿದ್ದಾರೆ. ನಾವೀಗ ಜೊತೆಗೂಡಬೇಕಾಗಿದೆ.

Writer - ದೇವನೂರ ಮಹಾದೇವ

contributor

Editor - ದೇವನೂರ ಮಹಾದೇವ

contributor

Similar News

ಜಗದಗಲ
ಜಗ ದಗಲ