ಭಾತ್ ಮತ್ತು ದೋಸೆಯ ದೊರೆ: ಮೂರನೇ ಮಂಗರಸ

Update: 2020-01-27 18:25 GMT

 ಅಡುಗೆಯ ಕುರಿತಾದ ಎರಡು ಮುಖ್ಯ ಕೃತಿಗಳೆಂದು ನಳ ಮತ್ತು ಭೀಮಸೇನನ ಕೃತಿ ಮತ್ತು ಹೆಸರುಗಳನ್ನೇ ನಾವು ಇವತ್ತಿಗೂ ಎಲ್ಲ ಕಡೆಗೂ ಮಾತಾಡುತ್ತೇವೆ. ಆದರೆ ಕನ್ನಡನಾಡಿನಲ್ಲಿ ಅವರನ್ನು ಮೀರಿಸಿದ ಕೃತಿಗಳು ರಚನೆಯಾಗಿವೆ ಮತ್ತು ಅಷ್ಟೇ ಪ್ರಾಚೀನವಾಗಿವೆ. ಭಾರತೀಯ ನುಡಿಗಳಲ್ಲಿ ಇಷ್ಟು ಹೆಚ್ಚಿನ ಕೃತಿಗಳು ಅಡುಗೆಯ ಬಗ್ಗೆ ಬಂದಿರುವುದು ಕನ್ನಡದಲ್ಲಿ ಮಾತ್ರವೇ! ಇದನ್ನು ಹಲವಾರು ಜನ ಅವರ ಲೇಖನಗಳಲ್ಲಿ ದಾಖಲಿಸಿದ್ದಾರೆ. ಆದರೆ ಇವುಗಳ ಬಗ್ಗೆ ನಾವು ಅಷ್ಟು ಚರ್ಚೆ ಮಾಡಿದ್ದು ಅಪರೂಪ. ಈಚೆಗಿನ ಕೆಲವು ಸಂಶೋಧನಾರ್ಥಿಗಳು ಪಿಎಚ್‌ಡಿ ಸಲುವಾಗಿ ಈ ಕೃತಿಗಳನ್ನು ಒಳಗೊಂಡಂತೆ ಕನ್ನಡ ನಾಡಿನ ಪಾಕ ಪಾನೀಯಗಳ ಕುರಿತ ಸಂಶೋಧನೆಗಳನ್ನು ಮಾಡಿದ ಕುರಿತು ಕೇಳ್ಪಟ್ಟಿದ್ದೇನೆ. ಒಮ್ಮೆ ಅವನ್ನು ಓದಬೇಕು. ವಿಷಯದ ಕುರಿತು ಆಸಕ್ತಿ ಆದರಗಳು ಇಲ್ಲವಾದರೆ ಬರಹವು ಒಣ ಉಪದೇಶದಂತೆ ಆಗಿಬಿಡುತ್ತದೆ. ಈ ಬರಹವು ಕನ್ನಡ ನಾಡಿನ ಸೂಪಶಾಸ್ತ್ರಜ್ಞರಲ್ಲಿ ಹೆಚ್ಚು ಜನಪ್ರಿಯ ಹಾಗೂ ಹೆಚ್ಚು ಹೆಚ್ಚು ಪ್ರಯೋಗಗಳನ್ನು ಮಾಡಿ ಅವನ್ನು ದಾಖಲಿಸಿದ ಮೂರನೇ ಮಂಗರಸನ ಕೃತಿ ‘ಸೂಪಶಾಸ್ತ್ರ’ ಕುರಿತು ಒಂದಷ್ಟು ವಿವರಗಳಿವೆ. ಈತನೇ ನಮಗೆಲ್ಲಾ ಪ್ರಿಯವಾದ ‘ದೋಸೆ’ಯನ್ನು ಹಲವು ವಿಧಗಳಲ್ಲಿ ಮಾಡುವ ಬಗೆಯನ್ನು ಮೊದಲಿಗೆ ಪರಿಚಯಿಸಿದ ಬಾಣಸಿಗ. ಇದಕ್ಕೂ ಮೊದಲು ಇಡ್ಲಿಯು ‘ಇಡ್ಡಲಿಗೆ’ ಎಂದ ಹೆಸರಿನಲ್ಲಿ ಕನ್ನಡದ ಹಲವು ಪ್ರಾಚೀನ ಗ್ರಂಥಗಳಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ತಮಿಳಿನ ಸಂಘಂ ಸಾಹಿತ್ಯ ಪಠ್ಯಗಳಲ್ಲೂ ಉಲ್ಲೇಖಿತವಾಗಿದೆ. ಆದರೆ ದೋಸೆಯು ಮೊದಲು ಉಲ್ಲೇಖವಾಗಿದ್ದು ಹಲವು ದೋಸೆಯ ವಿಧಗಳು ಮಂಗರಸನ ಸೂಪಶಾಸ್ತ್ರ ಕೃತಿಯಲ್ಲಿವೆ.

ಮೂರನೇ ಮಂಗರಸ:

 ಈತ ಮೈಸೂರು ಬಳಿಯ ಹುಣಸೂರಿನ ಕಲ್ಲಹಳ್ಳಿಯ ಸಣ್ಣ ಪ್ರಾಂತಕ್ಕೆ ದೊರೆಯಾಗಿದ್ದ. ಈತನ ಪೂರ್ವಜರು ದ್ವಾರಾವತೀ (ದ್ವಾರಸಮುದ್ರ) ಆಳುತ್ತಿದ್ದ ಚೆಂಗಾಳ್ವ ಭೂಪತಿಗಳ ಆಸ್ಥಾನದಲ್ಲಿ ಅಮಾತ್ಯರಾಗಿದ್ದರು. ಈತನ ಕಾಲ ಕ್ರಿ.ಶ.1405 ಇರಬಹುದು. ಈತನ ಮತವು ಜೈನವಾಗಿದ್ದರೆ ಸೋದರ ಸಂಬಂಧಿಗಳು ಮಾತ್ರ ಶೈವ ಮತಕ್ಕೆ ಒಕ್ಕಲಾಗಿದ್ದರು. ‘ಕುಮಾರರಾಮನ ಸಾಂಗತ್ಯ’ ಬರೆದ ‘ನಂಜುಂಡ ಕವಿ’ಯು ಮಂಗರಸನ ಸೋದರನ ಮಗನಾಗಿದ್ದ ಮತ್ತು ಶೈವನಾಗಿದ್ದ.

ಸವಿವಡೆದ ಷಡ್ರಸವಿಪಾಕಭೇದಮನೆನ್ನ

ಬಲ್ಲಂದದಿಂ ಪೇಳ್ವೆನು..

ಸೂಪ ಎಂದರೆ ದ್ರವರೂಪದ ಗಟ್ಟಿಯಾದ ಮೇಲೋಗರ. ಇಂಗ್ಲಿಷ್‌ನ ‘ಸೂಪ್’ಗೆ ಬಹಳ ಹತ್ತಿರವಾದ್ದು. ಆದರೆ ಇದು ಸಂಸ್ಕೃತ ಮೂಲದ ಪದ. ಇದು ಮಂಗರಸನ ಪೂರ್ಣ ಸ್ವಂತವಾದ ಕೃತಿಯಲ್ಲ. ಸಂಸ್ಕೃತದ ಹಲವು ಅಡುಗೆಯ ಪಠ್ಯಕೃತಿಗಳನ್ನು ಅನುಸರಿಸಿ ಅವನ್ನು ಕನ್ನಡದಲ್ಲಿ ಹೊಸತಾಗಿ ಪ್ರಯೋಗಿಸಿದ್ದಾನೆ. ಆದರೆ ಈತನೆಲ್ಲೂ ಮಾಂಸಾಹಾರದ ಪ್ರಸ್ತಾಪ ಮಾಡಿಲ್ಲ. ಸಂಸ್ಕೃತ ಮೂಲದಲ್ಲಿರುವ ಮಾಂಸದ ಖಾದ್ಯಗಳನ್ನು ತನ್ನ ಕೃತಿಯಲ್ಲಿ ಪರಿಗಣಿಸಿಲ್ಲ. ತಾನು ಸ್ವತಃ ಜೈನ ಮತಾನುಯಾಯಿಯಾದ ಕಾರಣದಿಂದಲೋ ಏನೋ ಇಡೀ ಕೃತಿಯನ್ನು ‘ಶಾಕಾಹಾರ’ಕ್ಕೆ ಸೀಮಿತಗೊಳಿಸಿಬಿಟ್ಟಿದ್ದಾನೆ. ಇದರ ಚೂರು ರಸಭಂಗವನ್ನು ನಾವು ಅನುಭವಿಸಲೇ ಬೇಕು. ನಳ ಮತ್ತು ಭೀಮಸೇನರಷ್ಟು ಪದಾರ್ಥ ವೈವಿಧ್ಯ ಇಲ್ಲ ಸಿಗುವುದಿಲ್ಲ. ವಿಷಯ ವೈವಿಧ್ಯತೆಗಷ್ಟೇ ಸಮಾಧಾನಪಟ್ಟುಕೊಳ್ಳಬೇಕು.

ಸದ್ಯಕ್ಕೆ ಲಭ್ಯವಿರುವಂತೆ ಈ ಕೃತಿಯು ಆರು ಅಧ್ಯಾಯಗಳನ್ನು ಮತ್ತು 358 ಪದ್ಯಗಳನ್ನು ಒಳಗೊಂಡಿದೆ. ಆ ಕಾಲಕ್ಕೆ ಪ್ರಸಿದ್ಧವಾದ ‘ವಾರ್ಧಕ ಷಟ್ಪದಿ’ಯಲ್ಲಿ ರಚಿತವಾಗಿದೆ. ಆದರೆ ನಮಗೆ ಸಿಕ್ಕಿರುವುದು ಪೂರ್ಣಪಠ್ಯವಲ್ಲ. ಕೊನೆಯ ರಚನೆಯು ವಿಧ್ಯುಕ್ತವಾಗಿ ಸಮಾಪ್ತಿಯಾಗಿಲ್ಲ. ಅರ್ಧಕ್ಕೆ ನಿಂತಂತೆ ತೋರುತ್ತದೆ.

ಪೀಠಿಕೆಯಲ್ಲಿ ತನ್ನ ಪೂರ್ವಜರು, ಗುರು, ರಾಜ್ಯಗಳನ್ನು ನೆನೆದುಕೊಂಡು ಕವಿಗಳ ನವರಸಗಳ ಇಟ್ಟು ಜೊತೆಗೆ ಪರಿಣತೆ, ಪ್ರೇಕ್ಷಗಳ ಪರಿಕರಗಳ ಬಳಸಿ ನಾಲಗೆ ಎಂಬ ಸೌಟನ್ನು ಹಿಡಿದು ಪಾಕಮಾಡಿ, ರಸಿಕರ ಕವಿಗೆ ಕೇಳಿಸುವ ಭಾರತಿಯನ್ನು ನೆನೆದು ಆರು ವಿಧದ ರಸಗಳ ಪಾಕಭೇದವನ್ನು ಹೇಳುತ್ತೇನೆಂದು ಶುರು ಮಾಡುತ್ತಾನೆ. ಮುಂದುವರಿದು

 ‘‘ರಸದಾಳಿಯಂತೆ ರಮಣಿಯರ ಚೆಂದುಟಿಯಂತೆ

ಪೊಸಜೇನಕೊಡದಂತೆ ಪೊಣ್ಮುವೆಳಜವ್ವನೆಯ

ರೊಸೆದೀವ ತಾಂಬೂಲದಂತೆ ಕಾದಿಳಿಪಿಯಾರಿದ ಬಟ್ಟವಾಲಿನಂತೆ॥

ಅಸಿಯಳೊಡನಾಟದಂತರಮಾವಿನಿನಿವಣ್ಣ

ರಸದಂತೆಯಮೃತದಂತತಿರುಚಿಯ ಪಡೆದುದತಿ

ರಸಿಕನತಿನಿಪುಣಸತ್ಬ್ರಭುರಾಜನೊರೆದ ಪಾಕದ ಕವಿತೆಯೆಸೆವ ಮಾತು- 7 -1

ಎಂದು ತನ್ನ ಕೃತಿಯನ್ನು ಚೆಲುವೆಯರ ಚೆಂದುಟಿಗೂ, ಹೊಸದಾಗಿ ತೆಗೆದ ಜೇನಿಗೆ, ಕಾಯಿಸಿ ಆರಿಸಿದ ಹಾಲಿಗೂ, ಅಮೃತ ರುಚಿಯಿರುವ ಮಾವಿನ ಹಣ್ಣಿಗೂ ಹೋಲಿಸುತ್ತಾ ಈ ರಸಿಕನು ಅತಿನಿಪುಣವೂ ಆದ ರಾಜನು ಹೇಳಿದ ಪಾಕದ ಕಾವ್ಯ ಎಂದು ಸ್ವಪ್ರಶಂಸೆ ಮಾಡಿಕೊಳ್ಳುತ್ತಾನೆ.

ಮುಂದೆ ನಾಲ್ಕು ಹೆಸರಿನ ಆರು ಅಧ್ಯಾಯಗಳಲ್ಲಿ ಒಂದೊಂದು ವಾರ್ಧಕ ಷಟ್ಪದಿಯ ಪದ್ಯದಲ್ಲೂ ಒಂದೊಂದು ಅಡುಗೆಯನ್ನು ಹೇಳುತ್ತಾ ಹೋಗುತ್ತಾನೆ.

ಪಿಷ್ಟಪಾಕಾಧ್ಯಾಯವು ಗೋಧಿ, ಅಕ್ಕಿ, ಕಡಲೆ, ಮೊದಲಾದ ಹಿಟ್ಟಿನೊಂದಿಗೆ ಸಕ್ಕರೆ, ಬೆಲ್ಲ ಹಾಲು, ತುಪ್ಪ, ಒಣ ಹಣ್ಣುಗಳು, ತೆಂಗಿನ ಕಾಯಿ, ಹಣ್ಣಿನ ರಸಗಳನ್ನು ಸೇರಿಸಿ ಸಜ್ಜಿಗೆ, ಕಜ್ಜಾಯ, ರೊಟ್ಟಿ, ಕಡುಬು, ಮಂಡಗೆ-ಹೂರಿಗೆಗಳನ್ನು ತಯಾರಿಸುವುದನ್ನ ಕಾವ್ಯ-ಪಾಕರಸಗಳ ಜೊತೆ ಸಮನಾಗಿ ಹೇಳಲಾಗಿದೆ.

ಹುರಿದ ತೆಂಗಾಯ ನಸು ಬೆಂದ ಬೇಳೆಯ ಹೆಸರು

ಹುರಿದು ಬೇಯಿಸಿದ ಸೊಜ್ಜಿಗೆಯಿವನು ಕೂಡಿ ಸ

ಕ್ಕರೆಯಿಕ್ಕಿ ಕರ್ಪೂರವನು ತಳಿದು ಪಿಂಡಮಂ ಮಾಡಿಯೇ ಸಣ್ಣನಾಗಿ॥

ಅರೆದಕ್ಕಿಯೊಳಗದ್ದಿ ಹೊಚ್ಚಹೊಸ ತುಪ್ಪದೊಳು

ಹಿರಿದು ಹಸನಾಗಿ ಬೇಯಿಸಿ ತೆಗೆದು ತುಪ್ಪದೊಳು

 ಪುರಿವಿಳಂಗಾಯೆಂದು ಪೆಸರ್ವಡೆದು ನಾಲಗೆಯ ಕೊನೆಗೆ ಪೀಯೂಷವಾಯ್ತು ॥

 ಈ ಅಧ್ಯಾಯದಲ್ಲೇ ಮಂಗರಸನು ಕಾಳು, ತೆಂಗಿನಕಾಯಿ, ಜೀರಿಗೆ, ತುಪ್ಪ, ಈರುಳ್ಳಿಗಳ ಜೊತೆಗೆ ಕುಸುಬಲಕ್ಕಿಯ ಹಿಟ್ಟಿನೊಂದಿಗೆ ಬೆರೆಸಿ ಸಂಪಳೆಯನ್ನು ಉದುಗು ಬರಿಸಿ ಇಡ್ಲಿ, ದೋಸೆಗಳನ್ನು ಮಾಡುವ ವಿಧಾನ ವಿವರಿಸಿದ್ದಾನೆ.

ಹಿರಿದು ಹಸನಾದಿಡ್ಡಲಿಗೆಯ ಪಾಕಕ್ಕೆಂದು

ಬೆರಸಿದಾ ಸಂಪಳೆಯನೊಲೆಯೊಳಗೆ ಕಾವಲಿಯ

ನಿರಿಸಿ ತಿಳಿದುಪ್ಪಮಂ ತಡಹಿ ಚೊಟ್ಟೆಯೊಳದಂ ಗೇಣುಗೇಣಗಲ ಮಾಡಿ ॥

ಬೆರದಪ್ಪದೋಳೆರಿದು ಬೆಂದ ಬಳಿಕಂತದಂ

ತಿರಿಹಿ ದೋಸೆಯ ಬೇಯಿಸುವುದು ಮತ್ತೀ ತೆರದಿ

 ಹುರಳಿ ಕಡಲೆ ತಡಗುಣಿ ಹೆಸರಿನಿಂದಂ ದೋಸೆಯನು ಪಾಕಮಂ ಮಾಳ್ಪದು ॥

 ಪಾನಕಾಧ್ಯಾಯವು ವಿವಿಧ ರೀತಿಯ 24 ಪಾನಕಗಳನ್ನು, 25 ರಸಾಯನಗಳನ್ನು ಮಾಡುವ ವಿಧಾನಗಳನ್ನು ರಸವತ್ತಾಗಿ ವಿವರಿಸಲಾಗಿದೆ. ಮಾಗಿಯ ಮಧ್ಯಾಹ್ನ ಇದನ್ನು ಓದಿದರೂ ಗಂಟಲು ಒಣಗಿ ದಾಹವಾಗುವುದು ಖಂಡಿತ! ಎಮ್ಮೆ, ಹಸುವಿನ ಹಾಲು, ಮೊಸರು, ಮಜ್ಜಿಗೆ, ನೀರಿಗೆ ಹಲವು ರೀತಿಯ ಹಣ್ಣುಗಳ ರಸ, ಗಿಡದ ಬೇರುಗಳು, ಹೂವು-ಪತ್ರೆಗಳನ್ನು ಒಂದಷ್ಟು ಪೂರ್ವೋಪಚಾರ ನಡೆಸಿ ಅವುಗಳ ಪರಸ್ಪರ ನೆನೆಸಿ, ಕಲಿಸಿ, ಕೊಳೆಸಿ, ಕಾಯಿಸಿ, ಬೇಯಿಸಿ, ಆರಿಸಿ ಮಾಡಬಹುದಾದ ಪಾನಕಗಳಿವು.

ರಸಾಯನಗಳು ಚೂರು ಗಟ್ಟಿ ದ್ರವರೂಪದ ಪಾನಕಗಳು. ಹೆಚ್ಚು ಘನ ಪದಾರ್ಥಗಳನ್ನು ದ್ರವಗಳೊಡನೆ ಬೆರೆಸಿ ಮಾಡಿದವು

ಎಳೆಯ ಕರಿಬೇವು ಕೊತ್ತುಂಬರಿಯ ಹಾಕಿ ಹ

ಪ್ಪಳಮಿಕ್ಕಿ ಹುರಿದ ಸೊಜ್ಜಿಗೆಯುಮಂ ಬೆರಸಿ ಕಂ

ಗೊಳಿಸಿ ಶೈತ್ಯಂ ಮಾಡಿಕೊಂಡು ಸೋದಿಸಿ ಹಂಜಿಯೊಳಗೆ ಯೂಡಿದ ಸೊನೆಯನು ॥

ಇಳಿಯ ಬಿಟ್ಟಾ ಕಾಯ ಚೂರ್ಣಮಂ ಹಾಕಿ ಕಂ

ಗೊಳಿಸುವಂದದಿ ಸೋದಣಿಯ ಮಾಡಿ ಮಾವಿನೆಳೆ

ದಳಿರ ಮುರಿದಿಕ್ಕಿ ಕೊಡಲು ತಾನಕಾಲಮಾವಿನಕಾಯ ರಸಮಾದುದು 2/40

ಮುಂದಿನ ಅಧ್ಯಾಯ ಕಳಮಾನ್ನದಿ ಪಾಕಾಧ್ಯಾಯವು ಅನ್ನದಿಂದ ಮಾಡಿದ ಪಾಕಕ್ಕೆ ಸೀಮಿತವಾದುದು. ಕಳವೆ ಅಂದರೆ ಭತ್ತವೆಂದು ಅರ್ಥ. ಕಳವೆಯನ್ನ, ಕಳಮಾನ್ನವೆಂದರೆ ಭತ್ತದ ಅಕ್ಕಿಯಿಂದ ಮಾಡಿದ ಅನ್ನವೆಂದಾಗುವುದು. ಇಲ್ಲಿ ಗಂಧಸಾಲೆ ಅಕ್ಕಿಯ ಪ್ರಸ್ತಾವಿದೆ. ಅಧ್ಯಾಯದಲ್ಲಿ 41 ಬಗೆಯ ಅನ್ನದ ಬಗೆಗಳನ್ನು ವಿವರಿಸಲಾಗಿದೆ. ಅದರಲ್ಲಿ ಹುರಿದ, ಬೇಯಿಸಿದ ಅನ್ನ ಮತ್ತು ಪಾಯಸಗಳ ವಿವರಣೆ ಇದೆ. ಸಿಹಿ, ಹುಳಿ, ಖಾರದ ಹಲವು ಅನ್ನಗಳನ್ನು ಬೇಳೆ, ಸುಗಂಧಬಾಳೆ, ತುಪ್ಪ, ಈರುಳ್ಳಿ, ಬೆಳ್ಳುಳ್ಳಿ, ಬೆಲ್ಲ, ಹುಣಸೆ ರಸ, ಶುಂಠಿ, ಜೀರಿಗೆ, ಸೊಪ್ಪು ಮೊದಲಾದುವುಗಳನ್ನು ಸೇರಿಸಿ ಮಾಡುವ ಭಾತ್‌ಗಳನ್ನು ರುಚಿಗಟ್ಟಾಗಿ ವಿವರಿಸಿದ್ದಾನೆ. ಓಗರ, ಕಟ್ಟೋಗರ, ಕಲಸೋಗರ ಹೆಸರುಗಳ ಜೊತೆಗೆ ‘ಭಾತ್’ ಪದವನ್ನು ಬಳಸಿದ್ದಾನೆ. ಉದಾ: ಕಾಂಚಿಕಭಾತ್, ಪಾಣಿಭಾತ್

 ಒಂದು ಮಡಕೆಯ ನೀರ ನಾಲ್ಕೈದು ಬಗೆ ಮಾಡಿ

ಒಂದಕೊಂದೊಂದು ಹೂವಿನ ಪರಿಮಳಂಗಳಂ

ತಂದಿಕ್ಕಿಯವಕೆಯುಪ್ಪಿಟ್ಟು ಒಂದಕ್ಕೆ ಹುಳಿಯುಳ್ಳಿ ಶುಂಠಿಗಳನಿಕ್ಕಿ॥

ಒಂದಕ್ಕೆ ಕರ್ಪೂರ ಒಂದಕ್ಕೆ ಕಸ್ತೂರಿ

ಒಂದಕ್ಕೆ ಲಾವಂಚ, ಒಂದಕ್ಕೆ ಮಾಂಗಾಯಿ

 ಒಂದಕ್ಕೆ ಯಾಲಕ್ಕಿಯಿಕ್ಕಿ ನೀರಶನಮಂ ಹಾಕಲವು ಪಾಣಿಭಾತ್‌ 3/35

 ಇನ್ನು ಕಡೆಯ ಎರಡು ಭಾಗಗಳಲ್ಲಿ ವಿವರಿಸಿರುವ ಶಾಕಪಾಕಾಧ್ಯಾಯವು ಕಾಯಿಪಲ್ಲೆಗಳಲ್ಲಿ ಮಾಡುವ ಅಡುಗೆಗಳನ್ನು ಕುರಿತದ್ದಾಗಿದೆ. ತರಕಾರಿಗಳಿಗೆ ಪೂರ್ವೋಪಚಾರ ನಡೆಸಿ ಉಪ್ಪು, ಹುಳಿಗಳಲ್ಲಿ ನೆನೆಸಿ, ಒಣಗಿಸಿ ಬಳಸುವುದು, ಮಸಾಲೆಗಳನ್ನು ತರಕಾರಿಗಳ ಒಳಗೆ ತುಂಬಿ ನೀರಲ್ಲಿ ಬೇಯಿಸುವುದು, ತುಪ್ಪದಲ್ಲಿ ಕರಿಯುವುದು ಮೊದಲಾದ ಕ್ರಮಗಳಿವೆ. ಇದರಲ್ಲಿ ಬದನೆಕಾಯಿಯ ಅಡುಗೆ ಮಾಡುವುದನ್ನೇ 30ಕ್ಕೂ ಹೆಚ್ಚು ಪದ್ಯಗಳಲ್ಲಿ ವಿವರಿಸಿದ್ದಾನೆ. ನೆಲ್ಲಿಬದನೆಕಾಯಿ, ಬದನೆ ಹುಳಿಗಾಯಿ, ಪೂಡೆ, ಹೂರಣಬದನೆಕಾಯಿ, ತುಳುವ ಬದನೆಕಾಯಿ, ಪುಳಿಚ್ಚುತಬದನೆಕಾಯಿ ಮೊದಲಾದುವು. ಮುಂದುವರಿದು ಹೀರೇ, ಕುಂಬಳ, ಮೂಲಂಗಿ, ಬಾಳೇಕಾಯಿ, ವಿವಿಧ ಸೊಪ್ಪುಗಳು, ಬಿದಿರಿನ ಎಳೆ ಕಳಲೆ ಮುಂತಾದವುಗಳನ್ನು ಸಂಬಾರ ಪದಾರ್ಥಗಳ ಜೊತೆ ಬೇಯಿಸಿ ಮಾಡುವ ಕ್ರಮಗಳನ್ನು ಕೂಡ ವಿವರಿಸಿತ್ತಾನೆ. ಇಲ್ಲಿ ಕೊನೆಯ ಭಾಗದಲ್ಲಿ ಸಂಪ್ರದಾಯ ಬದ್ಧವಾದ ಕೊನೆಯಾಗಿಲ್ಲ. ಹಾಗಾಗಿ ಸದ್ಯಕ್ಕೆ ಲಭ್ಯ ವಿರುವ ಕೃತಿಯು ಅಪೂರ್ಣವಾದುದು. ಇದರಲ್ಲಿ ಇನ್ನಷ್ಟು ಆಕರ್ಷಕ ಅಧ್ಯಾಯಗಳು ಇದ್ದಿರಬಹುದೆಂದು ತೋರುತ್ತದೆ. ಆಮೇಲೆ ಅಲ್ಲಲ್ಲಿ ಕನ್ನಡಿಗ, ತಿಗಳ, ತುಳುವ, ಆರ್ಯ ಮುಂತಾದ ಜನಾಂಗೀಯ ಪದಪ್ರಯೋಗಗಳನ್ನು ಗಮನಿಸಿದರೆ ಮಂಗರಸನು ಸೂಪಶಾಸ್ತ್ರವನ್ನು ರಚಿಸುವಾಗ ಬರೀಯ ಸಂಸ್ಕೃತ ಪಠ್ಯಗಳನ್ನು ಮಾತ್ರಲ್ಲದೆ ದಕ್ಷಿಣದ ದೇಸೀಯ ಅಡುಗೆಗಳ ಕ್ರಮಗಳನ್ನು ಕೂಡ ಗಮನಿಸಿದ್ದಾನೆಂದು ತಿಳಿಯುತ್ತದೆ.

ಇವುಗಳಲ್ಲಿ ಒಂದೆರಡನ್ನು ಮಾತ್ರ ಪ್ರಯೋಗಕ್ಕೆ ಒಡ್ಡಿ ಯಶಸ್ವಿಯಾಗಿದ್ದೇನೆ. ಉಳಿದವನ್ನು ಪ್ರಯೋಗಕ್ಕೆ ಒಡ್ಡಲು ಧೈರ್ಯ ವಷ್ಟೇ ಅಲ್ಲ ಯಥೇಚ್ಛ ಹಣ ಬೇಕು. ಮಂಗರಸ ಅಡುಗೆಯ ಎಣ್ಣೆಯ ಮಾತು ಆಡುವುದೇ ಅಪರೂಪ. ಮಾತೆತ್ತಿದರೆ ಬಾಣಲೆ ತುಂಬ ಹೊಸ ತುಪ್ಪಮತ್ತು ಬೆಣ್ಣೆಯನ್ನು ಹಾಕಿ ಕರಿಯುವ ಘಮವನ್ನು, ರುಚಿಯನ್ನು ವಿವರಿಸುತ್ತಾನೆ. ಓದಲು ಬಲು ಅಪ್ಯಾಯಮಾನಕಾರಿಯಾಗಿರುವ ಸೂಪಶಾಸ್ತ್ರವನ್ನು ಒಮ್ಮೆಯಾ ದರೂ ಪ್ರಯೋಗಕ್ಕೆ ಒಡ್ಡಿ ರುಚಿಯ ನಿಷ್ಕರ್ಶೆ ಮಾಡಬೇಕಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಜಗದಗಲ
ಜಗ ದಗಲ