ಸರ್ದಾರ್ ಪಟೇಲರು ದ್ವೇಷದ ಶಕ್ತಿಗಳನ್ನು ಎದುರಿಸಿ ಆರೆಸ್ಸೆಸ್ ನಿಷೇಧಿಸಿದಾಗ
ಗಾಂಧೀಜಿಯವರ ಹತ್ಯೆಯ ಮೊದಲು ಸರ್ದಾರ್ ಪಟೇಲರಿಗೆ ಆರೆಸ್ಸೆಸ್ ಬಗ್ಗೆ ಮೃದುಧೋರಣೆ ಇದ್ದಿರಬಹುದಾದರೂ ಹತ್ಯೆಯ ಬಳಿಕ ಅವರು ಸಂಘದ ಚಟುವಟಿಕೆಗಳ ವಿರುದ್ಧ ಖಾರವಾಗಿಯೇ ಬರೆದರು. 1948ರ ಜುಲೈ 18ರಂದು ಅವರು ಹಿಂದೂ ಮಹಾಸಭಾದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಪತ್ರ ಬರೆದು ಆರೆಸ್ಸೆಸ್ ನಿಷೇಧಿಸಿದ ಬಳಿಕ ಕೂಡ ಅದು ತನ್ನ ಚಟುವಟಿಕೆಗಳನ್ನು ಮುಂದುವರಿಸುವುದನ್ನು ಖಂಡಿಸಿದರು.
ಸಂಘ ಪರಿವಾರ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್)ವೂ ಸೇರಿದಂತೆ ಅದರ ಸಹ ಸಂಸ್ಥೆಗಳು, ಸಂಘಟನೆಗಳು ಸರ್ದಾರ್ ಪಟೇಲರನ್ನು ತಮ್ಮವರೆಂದು ಹೇಳಿಕೊಳ್ಳುತ್ತ ಅವರನ್ನು ತಮ್ಮೆಳಗೆ ಎಳೆದುಕೊಳ್ಳುತ್ತಿರುವಾಗ ಉಕ್ಕಿನ ಮನುಷ್ಯ ಪಟೇಲರು ಆರೆಸ್ಸೆಸ್‌ನ ಪ್ರಬಲ ಟೀಕಾಕಾರರಾಗಿದ್ದರು ಮತ್ತು ಮಹಾತ್ಮಾಗಾಂಧಿಯವರ ಕೊಲೆಯಾದ ಬಳಿಕ ಅದನ್ನು ನಿಷೇಧಿಸಿದ್ದರೆಂಬುದನ್ನು ಆರೆಸ್ಸೆಸ್ ಮರೆತಿರುವಂತೆ ಕಾಣುತ್ತದೆ. ನಿಜ ಹೇಳಬೇಕೆಂದರೆ ಆಗ ಗೃಹ ಸಚಿವರಾಗಿದ್ದ ಪಟೇಲರು 1945ರಲ್ಲಿ ಸರಕಾರ ಯಾಕೆ ಆರೆಸ್ಸೆಸನ್ನು ನಿಷೇಧಿಸುವ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ ಎಂದು ವಿವರಿಸಿ ಆರೆಸ್ಸೆಸ್ ನಾಯಕರಿಗೆ ಪತ್ರ ಬರೆದಿದ್ದರು.
1948ರ ಫೆಬ್ರವರಿ 4ರಂದು ಹೊರಡಿಸಲಾದ ಒಂದು ಪ್ರಕಟನೆಯಲ್ಲಿ ದ್ವೇಷ ಹಾಗೂ ಹಿಂಸೆಯ ಶಕ್ತಿಗಳನ್ನು ನಿರ್ಮೂಲನ ಮಾಡಲು ಸರಕಾರ ಆರೆಸ್ಸೆಸನ್ನು ನಿಷೇಧಿಸುತ್ತಿದ್ದೇವೆ ಎಂದು ಬರೆಯಲಾಗಿತ್ತು. ಈ ಶಕ್ತಿಗಳು ನಮ್ಮ ದೇಶದಲ್ಲಿ ಕಾರ್ಯಾಚರಿಸುತ್ತ ರಾಷ್ಟ್ರದ ಸ್ವಾತಂತ್ರಕ್ಕೆ ಗಂಡಾಂತರ ಒಡ್ಡಿ ದೇಶದ ಹೆಸರಿಗೆ ಮಸಿ ಬಳಿಯುತ್ತಿವೆ ಎಂದು ಸರಕಾರ ಹೇಳಿತ್ತು.
ಗೃಹ ಸಚಿವಾಲಯದ ಪತ್ರಾಗಾರದಲ್ಲಿ ಲಭ್ಯವಿರುವ ಆ ಪತ್ರದ ಪೂರ್ಣಪಾಠ ಇಲ್ಲಿದೆ:
1948 ಫೆಬ್ರವರಿ 2ರ ತನ್ನ ನಿಲುವಳಿಯಲ್ಲಿ ಭಾರತ ಸರಕಾರವು ನಮ್ಮ ದೇಶದಲ್ಲಿ ಕಾರ್ಯವೆಸಗುತ್ತಿರುವ ಹಾಗೂ ದೇಶದ ಸ್ವಾತಂತ್ರಕ್ಕೆ ಅಪಾಯ ತರುತ್ತಿರುವ ದ್ವೇಷ ಹಾಗೂ ಹಿಂಸೆಯ ಶಕ್ತಿಗಳನ್ನು ನಿರ್ಮೂಲನಗೊಳಿಸುವ ತನ್ನ ನಿರ್ಧಾರವನ್ನು ಘೋಷಿಸಿದೆ. ಈ ಶಕ್ತಿಗಳು ದೇಶದ ಹೆಸರು ಕೆಡಿಸುತ್ತಿದೆ. ಸರಕಾರದ ಈ ನೀತಿಗೆ, ನಿರ್ಧಾರಕ್ಕೆ ಅನುಗುಣವಾಗಿ ಭಾರತ ಸರಕಾರವು ಮುಖ್ಯ ಕಮಿಶನರ್‌ಗಳ ಪ್ರಾಂತಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಅಕ್ರಮವೆಂದು ಘೋಷಿಸಲು ನಿರ್ಧರಿಸಿದೆ. ರಾಜ್ಯಪಾಲರ ಪ್ರಾಂತಗಳಲ್ಲಿ ಕೂಡ ಇದೇ ರೀತಿಯ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ.
ಸಾಚಾ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಚಟುವಟಿಕೆಗಳಿಗೆ ಎಲ್ಲ ಪಕ್ಷಗಳಿಗೆ ಹಾಗೂ ಸಂಘಟನೆಗಳಿಗೆ ಅವಕಾಶ ನೀಡಲು ಪ್ರಜಾಸತ್ತಾತ್ಮಕ ಸರಕಾರಗಳಾದ ಭಾರತ ಸರಕಾರ ಹಾಗೂ ಪ್ರಾಂತೀಯ ಸರಕಾರಗಳು ಯಾವಾಗಲೂ ಉತ್ಸುಕವಾಗಿಯೇ ಇದೆ. ಸರಕಾರದ ನೀತಿಗಳು ಹಾಗೂ ಧೋರಣೆಗಳಿಗಿಂತ ಭಿನ್ನವಾದ ಅಥವಾ ಅವುಗಳಿಗೆ ವಿರೋಧವಾಗಿರುವ ಸಂಘಟನೆಗಳಿಗೆ ಕೂಡ, ಅವುಗಳ ಚಟುವಟಿಕೆಗಳು ಔಚಿತ್ಯ ಅಥವಾ ಕಾನೂನಿನ ಕೆಲವು ನಿರ್ದಿಷ್ಟ ನಿಯಮಗಳನ್ನು ಮೀರದೇ ಇದ್ದಲ್ಲಿ, ಈ ಅವಕಾಶ ನೀಡಲಾಗುತ್ತದೆ. ಹಿಂದೂಗಳ ದೈಹಿಕ, ಬೌದ್ಧಿಕ ಹಾಗೂ ನೈತಿಕ ಕಲ್ಯಾಣವನ್ನು ಪ್ರವರ್ತಿಸುವುದು ಮತ್ತು ಅವರಲ್ಲಿ ಸಹೋದರತೆ, ಪ್ರೀತಿ ಹಾಗೂ ಸೇವಾ ಮನೋಭಾವವನ್ನು ಬೆಳೆಸುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷಿತ ಉದ್ದೇಶಗಳು ಹಾಗೂ ಗುರಿಗಳಾಗಿವೆ. ಸ್ವತಃ ಸರಕಾರ ಕೂಡ ಜನರ ಎಲ್ಲ ವರ್ಗಗಳಲ್ಲಿ ಬೌದ್ಧಿಕ ಹಾಗೂ ಐಹಿಕ ಕಲ್ಯಾಣ ಸಾಧಿಸಲು ಅತ್ಯಂತ ಉತ್ಸುಕವಾಗಿದೆ. ಈ ಗುರಿಗಳನ್ನು ಸಾಧಿಸಲು ಸರಕಾರ ಕೆಲವು ಕ್ರಿಯಾ ಯೋಜನೆಗಳನ್ನು ಕೂಡ ಹೊಂದಿದೆ. ನಿರ್ದಿಷ್ಟವಾಗಿ ದೇಶದ ಯುವಜನತೆಗೆ ದೈಹಿಕ ತರಬೇತಿ ಹಾಗೂ ಮಿಲಿಟರಿ ವಿಷಯಗಳಲ್ಲಿ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸರಕಾರ ಯೋಜನೆಗಳನ್ನು ರೂಪಿಸಿದೆ. ಆದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ತಾವು ಹೇಳಿಕೊಂಡಿರುವ ಆದರ್ಶಗಳಿಗೆ ಬದ್ಧರಾಗಿಲ್ಲ. ಅವರು ಅದಕ್ಕೆ ವಿರುದ್ಧವಾದ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎನ್ನುವುದನ್ನು ಭಾರತ ಸರಕಾರ ವಿಷಾದದಿಂದ ಗಮನಿಸಿದೆ.
ಸಂಘದ ಸದಸ್ಯರು ಅನಪೇಕ್ಷಿತ ಹಾಗೂ ಅಪಾಯಕಾರಿಯಾದ ಚಟುವಟಿಕೆಗಳನ್ನು ನಡೆಸಿದ್ದಾರೆ. ದೇಶದ ಹಲವು ಭಾಗಗಳಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸದಸ್ಯರು ಲೂಟಿ, ದರೋಡೆ, ವಿಧ್ವಂಸಕ ಕೃತ್ಯ ಮತ್ತು ಕೊಲೆಯೂ ಸೇರಿದಂತೆ ಹಿಂಸಾ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಹಾಗೂ ಅಕ್ರಮ ಶಸ್ತ್ರಾಸ್ತ್ರಗಳನ್ನು ಹಾಗೂ ಕೋವಿಗಳನ್ನು ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ. ಜನರಿಗೆ ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಲು, ಅಸ್ತ್ರಗಳನ್ನು (ಕೋವಿಗಳನ್ನು) ಸಂಗ್ರಹಿಸಲು ಮತ್ತು ಸರಕಾರದ ವಿರುದ್ಧ ದ್ವೇಷ ಸೃಷ್ಟಿಸಲು ಹೇಳಿದ್ದಾರೆ. ಪೊಲೀಸ್ ಹಾಗೂ ಮಿಲಿಟರಿಯ ವಿರುದ್ಧ ದ್ವೇಷ ಭಾವನೆಯನ್ನು ಪ್ರೇರೇಪಿಸುವಂತೆ ಜನರಿಗೆ ಹೇಳುವ ಕರಪತ್ರಗಳನ್ನು ಅವರು ಹಂಚಿರುವುದು ಸರಕಾರದ ಗಮನಕ್ಕೆ ಬಂದಿದೆ. ಈ ಚಟುವಟಿಕೆಗಳನ್ನು ಗೌಪ್ಯವಾಗಿ ನಡೆಸಲಾಗಿದೆ ಮತ್ತು ಸಂಘದ ವಿರುದ್ಧ ಕ್ರಮ ತೆಗೆದುಕೊಳ್ಳಲು ಈ ಚಟುವಟಿಕೆಗಳು ಎಷ್ಟರ ಮಟ್ಟಿಗೆ ಕಾರಣವಾಗಬಹುದೆಂಬುದನ್ನು ಸರಕಾರವು ಆಗಾಗ್ಗೆ ಪರಿಗಣಿಸುತ್ತ ಬಂದಿದೆ. ನವೆಂಬರ್ ತಿಂಗಳ ಅಂತ್ಯದಲ್ಲಿ ದಿಲ್ಲಿಯಲ್ಲಿ ನಡೆದ ಸರಕಾರದ ವರಿಷ್ಠರು ಮತ್ತು ಪ್ರಾಂತಗಳ ಗೃಹ ಸಚಿವರು ಭಾಗವಹಿಸಿದ್ದ ಅಧಿವೇಶನದಲ್ಲಿ ಸರಕಾರವು ಈ ಕುರಿತಾದ ತನ್ನ ನಿಲುವನ್ನು ವ್ಯಾಖ್ಯಾನಿಸಿತ್ತು.
ಸಂಘವನ್ನು (ಆರೆಸ್ಸೆಸ್) ಒಂದು ಸಂಘಟನೆಯಾಗಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಹಂತ ಇನ್ನೂ ಬಂದಿಲ್ಲ ಮತ್ತು ಇದುವರೆಗಿನಂತೆ ಅದರಲ್ಲಿರುವ ವ್ಯಕ್ತಿಗಳನ್ನು ಮಾತ್ರ ಕಟ್ಟುನಿಟ್ಟಾಗಿ ನಿಭಾಯಿಸತಕ್ಕದ್ದೆಂದು ಆ ಅಧಿವೇಶನದಲ್ಲಿ ಒಮ್ಮತಕ್ಕೆ ಬರಲಾಯಿತು. ಅದೇನಿದ್ದರೂ, ಸಂಘದ ಆಕ್ಷೇಪಾರ್ಹ ಹಾಗೂ ಅಪಾಯಕಾರಿ ಚಟುವಟಿಕೆಗಳು ಯಾವುದೇ ರೀತಿಯಲ್ಲಿ ಕಡಿಮೆಯಾಗದೆ ಯಥಾಪ್ರಕಾರ ಮುಂದುವರಿದಿವೆ ಮತ್ತು ಸಂಘದಿಂದ ಪ್ರೇರಿತವಾದ ಹಾಗೂ ಪ್ರಾಯೋಜಿತವಾದ ಹಿಂಸೆಯು ಅನೇಕರನ್ನು ಬಲಿ ತೆಗೆದುಕೊಂಡಿದೆ. ಈ ಸಾಲಿನಲ್ಲಿ ತೀರ ಇತ್ತೀಚಿನ ಹಾಗೂ ಅತ್ಯಂತ ಅಮೂಲ್ಯವಾದ ಬಲಿ ಎಂದರೆ ಸ್ವತಃ ಗಾಂಧೀಜಿಯವರೇ ಆಗಿದ್ದಾರೆ.
ಈ ಪರಿಸ್ಥಿತಿಯಲ್ಲಿ, ಹಿಂಸೆ ಉಗ್ರರೂಪದಲ್ಲಿ ಪುನಃಮರುಕಳಿಸದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವುದು ಸರಕಾರದ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಸಂಘವನ್ನು ಒಂದು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲು ಸರಕಾರ ನಿರ್ಧರಿಸಿದೆ. ಸರಕಾರ ತೆಗೆದುಕೊಳ್ಳುವ ಈ ಕ್ರಮಕ್ಕೆ ಕಾನೂನನ್ನು ಪಾಲಿಸುವ ಹಾಗೂ ತಮ್ಮ ಹೃದಯದಲ್ಲಿ ದೇಶದ ಕಲ್ಯಾಣವನ್ನು ಬಯಸುವ ಎಲ್ಲ ನಾಗರಿಕರ ಬೆಂಬಲವಿದೆ ಎನ್ನುವ ಕುರಿತು ಸರಕಾರಕ್ಕೆ ಯಾವುದೇ ಅನುಮಾನವಿಲ್ಲ.
ಗಾಂಧೀಜಿಯವರ ಹತ್ಯೆಯ ಮೊದಲು ಸರ್ದಾರ್ ಪಟೇಲರಿಗೆ ಆರೆಸ್ಸೆಸ್ ಬಗ್ಗೆ ಮೃದುಧೋರಣೆ ಇದ್ದಿರಬಹುದಾದರೂ ಹತ್ಯೆಯ ಬಳಿಕ ಅವರು ಸಂಘದ ಚಟುವಟಿಕೆಗಳ ವಿರುದ್ಧ ಖಾರವಾಗಿಯೇ ಬರೆದರು. 1948ರ ಜುಲೈ 18ರಂದು ಅವರು ಹಿಂದೂ ಮಹಾಸಭಾದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರಿಗೆ ಪತ್ರ ಬರೆದು ಆರೆಸ್ಸೆಸ್ ನಿಷೇಧಿಸಿದ ಬಳಿಕ ಕೂಡ ಅದು ತನ್ನ ಚಟುವಟಿಕೆಗಳನ್ನು ಮುಂದುವರಿಸುವುದನ್ನು ಖಂಡಿಸಿದರು:
‘‘ಹಿಂದೂ ಮಹಾಸಭಾದ ತೀವ್ರಗಾಮಿ ವರ್ಗವು ಗಾಂಧಿಯನ್ನು ಕೊಲ್ಲುವ ಒಳ ಸಂಚಿನಲ್ಲಿ ಭಾಗಿಯಾಗಿತ್ತೆಂಬ ಬಗ್ಗೆ ನನ್ನ ಮನಸ್ಸಿನಲ್ಲಿ ಯಾವ ಅನುಮಾನವೂ ಇಲ್ಲ. ಆರೆಸ್ಸೆಸ್‌ನ ಚಟುವಟಿಕೆಗಳು ಸರಕಾರದ ಹಾಗೂ ದೇಶದ ಅಸ್ತಿತ್ವಕ್ಕೆ ಒಂದು ಬೆದರಿಕೆಯಾದವು. ನಿಷೇಧದ ಹೊರತಾಗಿಯೂ ಈ ಚಟುವಟಿಕೆಗಳು ಕೊನೆಗೊಂಡಿಲ್ಲವೆಂದು ನಮ್ಮ ವರದಿಗಳು ತೋರಿಸುತ್ತಿವೆ. ನಿಜವಾಗಿಯೂ ಸಮಯ ಕಳೆದಂತೆ ಆರೆಸ್ಸೆಸ್ ವಲಯಗಳು ಸರಕಾರದ ವಿರುದ್ಧ ಇನ್ನಷ್ಟು ಹೆಚ್ಚು ಅವಿಧೇಯತೆ ತೋರುತ್ತಿದೆ ಮತ್ತು ಬುಡಮೇಲು ಕೃತ್ಯಗಳಲ್ಲಿ ಹೆಚ್ಚು ಹೆಚ್ಚಾಗಿ ತೊಡಗಿಕೊಳ್ಳುತ್ತಿವೆ.’’
1948ರ ಸೆಪ್ಟಂಬರ್‌ನಲ್ಲಿ ಆರೆಸ್ಸೆಸ್‌ನ್ನು ನಿಷೇಧಿಸುವ ನಿರ್ಧಾರ ವನ್ನು ವಿವರಿಸುತ್ತಾ ಪಟೇಲರು ಎಂ.ಎಸ್. ಗೋಳ್ವಾಲ್ಕರ್ ಅವರಿಗೆ ಕೂಡ ಒಂದು ಪತ್ರ ಬರೆದರು:
‘‘ಹಿಂದೂಗಳನ್ನು ಸಂಘಟಿಸುವುದು ಮತ್ತು ಅವರಿಗೆ ನೆರವಾಗುವುದು ಬೇರೆ, ಆದರೆ ತನ್ನ ತೊಂದರೆಗಳಿಗಾಗಿ, ತಾನು ಅನುಭವಿಸಿದ್ದಕ್ಕಾಗಿ ಮುಗ್ಧರ ಹಾಗೂ ಅಸಹಾಯಕ ಪುರುಷರು, ಮಹಿಳೆಯರು ಹಾಗೂ ಮಕ್ಕಳ ಮೇಲೆ ಪ್ರತೀಕಾರ ಮಾಡುವುದು ಬೇರೆ... ಇದಲ್ಲದೆ ಕಾಂಗ್ರೆಸ್‌ಗೆ ಅವರ ವಿರೋಧ, ಅದು ಕೂಡ ಅಂತಹ ಹಿಂಸೆಯ ಒಂದು ಮಟ್ಟಕ್ಕೆ ಹೋಗುವುದು... ಜನರಲ್ಲಿ ಒಂದು ರೀತಿಯ ಅಶಾಂತಿಯನ್ನು ಸೃಷ್ಟಿಸಿತು. (ಆರೆಸ್ಸೆಸ್‌ನವರ) ಎಲ್ಲಾ ಭಾಷಣಗಳು ಕೋಮು ವಿಷದಿಂದ ತುಂಬಿ ತುಳುಕುತ್ತಿದ್ದವು. ಹಿಂದೂಗಳನ್ನು ಹುರಿದುಂಬಿಸಲು, ಅವರಲ್ಲಿ ಸ್ಫೂರ್ತಿಯುಂಟು ಮಾಡಿ ಅವರ ರಕ್ಷಣೆಗಾಗಿ ಅವರನ್ನು ಸಂಘಟಿಸಲು ವಿಷ ಹರಡುವ ಅಗತ್ಯವಿರಲಿಲ್ಲ. ವಿಷದ ಅಂತಿಮ ಪರಿಣಾಮವಾಗಿ ದೇಶವು ಗಾಂಧೀಜಿಯವರ ಅಮೂಲ್ಯ ಪ್ರಾಣವನ್ನು ಕಳೆದುಕೊಳ್ಳಬೇಕಾಯಿತು. ಈಗ ಆರೆಸ್ಸೆಸ್‌ಗೆ ಸರಕಾರದ ಅಥವಾ ಜನರ ಅನುಕಂಪದ ಲವಲೇಶ ಕೂಡ ಉಳಿದಿಲ್ಲ. ಆರೆಸ್ಸೆಸ್‌ಗೆ ವಿರೋಧ ಹೆಚ್ಚಾಗುತ್ತಾ ಹೋಯಿತು. ಗಾಂಧೀಜಿ ಅವರ ಸಾವಿನ ಬಳಿಕ ಆರೆಸ್ಸೆಸ್‌ನವರು ಸಂತೋಷ ವ್ಯಕ್ತಪಡಿಸಿ ಸಿಹಿ ಹಂಚಿದಾಗ ವಿರೋಧ ಮತ್ತಷ್ಟು ತೀವ್ರವಾಯಿತು. ಇಂತಹ ಸನ್ನಿವೇಶಗಳಲ್ಲಿ ಆರೆಸ್ಸೆಸ್ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಸರಕಾರಕ್ಕೆ ಅನಿವಾರ್ಯವಾಯಿತು....’’
1948ರ ನವೆಂಬರ್‌ನಲ್ಲಿ ಎಂ. ಎಸ್. ಗೋಳ್ವಾಲ್ಕರ್ ಅವರ ವಿನಂತಿಯ ಮೇರೆಗೆ ಪಟೇಲರು ಅವರನ್ನು ಭೇಟಿಯಾದರು. ಅವರು ಎರಡು ಬಾರಿ ಪರಸ್ಪರ ಭೇಟಿಯಾದರು. ಮೊದಲ ಭೇಟಿಯಲ್ಲಿ ಗೋಳ್ವಾಲ್ಕರ್ ತನ್ನ ಬೆಂಬಲಿಗರೊಡನೆ ಮಾತನಾಡಿ ಅವರನ್ನು ‘‘ಸರಿಯಾದ ದಿಕ್ಕಿನಲ್ಲಿ’’ ಸಾಗುವಂತೆ ಮಾಡಲು ತನಗೆ ಸ್ವಲ್ಪಸಮಯ ಬೇಕು ಎಂದರು. ಎರಡನೇ ಭೇಟಿಯಲ್ಲಿ ಅದೇನಿದ್ದರೂ (ಆರೆಸ್ಸೆಸ್ ವಿರುದ್ಧ ಹಾಕಿರುವ) ನಿಷೇಧವನ್ನು ತೆರವುಗೊಳಿಸುವವರೆಗೆ ತಾನು ಯಾವುದೇ ಬದಲಾವಣೆಗೆ ತನ್ನನ್ನು ತಾನು ಕಟ್ಟಿಹಾಕಿಕೊಳ್ಳಲಾರೆ ಎಂದು ಹೇಳಿದರೆನ್ನಲಾಗಿದೆ. ಆಗ ಅಂದಿನ ಕೇಂದ್ರ ಸರಕಾರ ಪ್ರಾಂತೀಯ ಸರಕಾರಗಳನ್ನು ಸಂಪರ್ಕಿಸಿತು. ಆಗ ಅವುಗಳು ಹೀಗೆ ಹೇಳಿದರೆಂದು ಸರಕಾರದ ದಾಖಲೆ ಹೇಳುತ್ತದೆ: ‘‘ಆರೆಸ್ಸೆಸ್ ಜೊತೆ ಸಂಬಂಧವಿರುವ ಜನರು ಹಲವು ರೂಪಗಳಲ್ಲಿ ಹಾಗೂ ಹಲವು ರೀತಿಗಳಲ್ಲಿ ಮುಂದುವರಿಸುತ್ತಿರುವ ಚಟುವಟಿಕೆಗಳು ರಾಷ್ಟ್ರ ವಿರೋಧಿಯಾಗಿವೆೆ ಮತ್ತು ಹಲವು ವೇಳೆ ವಿಧ್ವಂಸಕಾರಿ ಹಾಗೂ ಹಿಂಸಾತ್ಮಕವಾಗಿದೆ ಮತ್ತು ಈ ಹಿಂದೆ ಗಂಡಾಂತರಕಾರಿ ಪರಿಣಾಮಗಳನ್ನುಂಟು ಮಾಡಿದ ವಾತಾವರಣವನ್ನು ಮತ್ತೆ ಪುನಃ ಸೃಷ್ಟಿಸುವಂತಹ ಸತತ ಪ್ರಯತ್ನಗಳನ್ನು ಈ ಜನರು ಮಾಡುತ್ತಿದ್ದಾರೆ. ಈ ಕಾರಣಗಳಿಗಾಗಿ ಪ್ರಾಂತೀಯ ಸರಕಾರಗಳು ನಿಷೇಧವನ್ನು ಹಿಂದಕ್ಕೆ ಪಡೆಯುವುದನ್ನು ವಿರೋಧಿಸುತ್ತದೆ ಮತ್ತು ಪ್ರಾಂತೀಯ ಸರಕಾರಗಳ ಅಭಿಪ್ರಾಯವನ್ನು ಭಾರತ ಸರಕಾರ ಒಪ್ಪಿಕೊಂಡಿದೆ.
ಈ ನಿರ್ಧಾರದ ಬಗ್ಗೆ ಗೋಳ್ವಾಲ್ಕರ್‌ಗೆ ಹೇಳಿದ ಬಳಿಕ ಅವರು ಪುನಃ ಜವಾಹರ ಲಾಲ್ ನೆಹರೂ ಹಾಗೂ ಪಟೇಲರನ್ನು ತಾನು ಭೇಟಿಯಾಗಲು ಬಯಸುವುದಾಗಿ ಹೇಳಿದರು. ಆದರೆ ಪಟೇಲರು ಅವರನ್ನು ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದರು.
ಆಗ ಆರೆಸ್ಸೆಸ್ ಮುಖ್ಯಸ್ಥರು ಪ್ರಧಾನಿಯವರಿಗೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಹೀಗೆ ವಿವರಿಸಿದರು: ‘‘ಆರೆಸ್ಸೆಸ್ ಭಾರತದ ಜಾತ್ಯತೀತ ಕಲ್ಪನೆಯನ್ನು ಸಂಪೂರ್ಣವಾಗಿ ಒಪ್ಪುತ್ತದೆ ಮತ್ತು ದೇಶದ ರಾಷ್ಟ್ರಧ್ವಜವನ್ನು ಒಪ್ಪಿಕೊಳ್ಳುತ್ತದೆ. ಆದ್ದರಿಂದ ಫೆಬ್ರವರಿಯಲ್ಲಿ (ಆರೆಸ್ಸೆಸ್) ಸಂಘಟನೆಯ ಮೇಲೆ ಹೇರಿದ್ದ ನಿಷೇಧವನ್ನು ಈಗ ರದ್ದುಪಡಿಸಬೇಕು.’’
ಅವರು ಹೇಳುವ ಮಾತುಗಳಿಗೂ ಅವರ ಅನುಯಾಯಿಗಳು ನಡೆಸುತ್ತಿರುವ ಚಟುವಟಿಕೆಗಳಿಗೂ ಹೊಂದಾಣಿಕೆ ಇಲ್ಲ ಮತ್ತು ಈಗಾಗಲೇ ಮೇಲೆ ವಿವರಿಸಿರುವ ಕಾರಣಗಳಿಗಾಗಿ ನಿಷೇಧವನ್ನು ರದ್ದುಪಡಿಸುವಂತೆ ಪ್ರಾಂತೀಯ ಸರಕಾರಗಳಿಗೆ ಸಲಹೆ ನೀಡಲು ಭಾರತ ಸರಕಾರ ಅಸಮರ್ಥವಾಗಿದೆ ಎನ್ನುತ್ತದೆ ಪತ್ರಾಗಾರದಲ್ಲಿರುವ ಸರಕಾರದ ದಾಖಲೆ. ಅದೇನಿದ್ದರೂ ನಿಷೇಧವನ್ನು ರದ್ದುಪಡಿಸಲು ಸರಕಾರ ವಿಧಿಸಿದ್ದ ಷರತ್ತುಗಳನ್ನು ಒಪ್ಪುವುದಾಗಿ ಗೋಳ್ವಾಲ್ಕರ್ ಕೆಲವು ಆಶ್ವಾಸನೆಗಳನ್ನು ನೀಡಿದ್ದರಿಂದ ಆರೆಸ್ಸೆಸ್ ಮೇಲೆ ಹೇರಿದ್ದ ನಿಷೇಧವನ್ನು 1949ರ ಜುಲೈ 11ರಂದು ರದ್ದುಪಡಿಸಲಾಯಿತು. ರದ್ದುಪಡಿಸಿರುವುದನ್ನು ಘೋಷಿಸುವ ತನ್ನ ಪತ್ರದಲ್ಲಿ ಆರೆಸ್ಸೆಸ್ ಮತ್ತು ಅದರ ನಾಯಕ ದೇಶದ ಸಂವಿಧಾನ ಹಾಗೂ ರಾಷ್ಟ್ರಧ್ವಜಕ್ಕೆ ನಿಷ್ಠರಾಗಿರುವುದಾಗಿ ಆಶ್ವಾಸನೆ ನೀಡಿದ್ದಾರೆಂದು ಸರಕಾರದ ಪತ್ರ ಹೇಳುತ್ತದೆ.
‘‘....ಆರೆಸ್ಸೆಸ್ ನಾಯಕರು ನೀಡಿರುವ ಸ್ಪಷ್ಟೀಕರಣದ ನೆಲೆಯಲ್ಲಿ, ಆರೆಸ್ಸೆಸ್ ಸಂಘಟನೆಗೆ ಪ್ರಜಾಸತ್ತಾತ್ಮಕ ಸಾಂಸ್ಕೃತಿಕ ಸಂಘಟನೆಯಾಗಿ ಕಾರ್ಯ ನಿರ್ವಹಿಸುವ ಒಂದು ಅವಕಾಶ ನೀಡಬೇಕೆಂಬ ನಿರ್ಧಾರಕ್ಕೆ ಭಾರತ ಸರಕಾರ ಬಂದಿರುತ್ತದೆ. ಈ ತತ್ವಗಳನ್ನು ಅಳವಡಿಸಿಕೊಂಡಿರುವ ಸಂವಿಧಾನದ ಅಡಿಯಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಕಾರ್ಯವೆಸಗಿದಲ್ಲಿ ಅಂತಹ ಕಾರ್ಯವೆಸಗಲು ಯಾವುದೇ ತಾರ್ಕಿಕ ವಿರೋಧ ಬರಲಾರದೆಂದು ಸರಕಾರ ಭಾವಿಸಿದೆ.’’