​ಮಾರ್ಚ್ 17ರಂದು ಪ್ರಧಾನಿ ಮೋದಿ ಬಾಂಗ್ಲಾ ಭೇಟಿ

Update: 2020-01-29 03:43 GMT

ಹೊಸದಿಲ್ಲಿ, ಜ.29: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 17ರಂದು ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲು ನಿರ್ಧರಿಸಿದ್ದಾರೆ. ಬಂಗಬಂಧು ಶೇಖ್ ಮುಜೀಬುರ್ರಹ್ಮಾನ್ ಅವರ ಜನ್ಮಶತಮಾನೋತ್ಸವಕ್ಕೆ ಚಾಲನೆ ನೀಡುವ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಉಭಯ ದೇಶಗಳ ನಡುವಿನ ಆತ್ಮೀಯ ದ್ವಿಪಕ್ಷೀಯ ಸಂಬಂಧವನ್ನು ಬಿಂಬಿಸುವುದು ಇದರ ಉದ್ದೇಶ.

ಕಾರ್ಯಕ್ರಮದ ಹಿಂದಿನ ದಿನವೇ ಢಾಕಾ ತಲುಪಲಿರುವ ಮೋದಿ, ಬಾಂಗ್ಲಾದೇಶದ ಸಂಸ್ಥಾಪಕ ಮುಜೀಬುರ್ರಹ್ಮಾನ್ ಅವರ ಜನ್ಮ ಶತಮಾನೋತ್ಸವದಲ್ಲಿ ಮುಖ್ಯ ಭಾಷಣಕಾರರಾಗಿ ಪಾಲ್ಗೊಳ್ಳಲಿದ್ದಾರೆ. ಮುಜೀಬ್ ಅವರು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಅವರ ತಂದೆ.

ಭಾರತ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಿದ ಬಳಿಕ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಭೇಟಿ ಕುತೂಹಲ ಕೆರಳಿಸಿದೆ. ಸಿಎಎ ಹಾಗೂ ಎನ್‌ಆರ್‌ಸಿಗೆ ಮತ್ತು ಬಾಂಗ್ಲಾದೇಶದಿಂದ ಹಲವು ಈಶಾನ್ಯ ರಾಜ್ಯಗಳಿಗೆ ಅಕ್ರಮ ವಲಸಿಗರು ನುಸುಳುತ್ತಿರುವುದಕ್ಕೆ ನೇರ ಸಂಬಂಧ ಇದೆ.

ಭಾರತದ ಸಂಸತ್ತು 2019ರ ಡಿಸೆಂಬರ್ 11ರಂದು ಸಿಎಎ ಆಂಗೀಕರಿಸಿದ ಬಳಿಕ ಬಾಂಗ್ಲಾದೇಶದ ಮೂವರು ಸಚಿವರು ಭಾರತ ಭೇಟಿ ರದ್ದುಪಡಿಸಿದ್ದಾರೆ. ಆದರೆ ಸಿಎಎ ಭಾರತದ ಆಂತರಿಕ ವಿಚಾರ ಎಂದು ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ ಗಲ್ಫ್‌ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟಪಡಿಸಿದ್ದರು.

ಎನ್‌ಆರ್‌ಸಿ ಮತ್ತು ಸಿಎಎ ಅನುಷ್ಠಾನದ ಹೊರತಾಗಿಯೂ ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗಿದೆ ಎಂದು ಪ್ರದರ್ಶಿಸುವುದು ಮೋದಿ ಭೇಟಿಯ ಉದ್ದೇಶ ಎಂದು ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News