ರಣಜಿ ಟ್ರೋಫಿ: ಕರ್ನಾಟಕಕ್ಕೆ ಅಲ್ಪ ಮುನ್ನಡೆ

Update: 2020-01-29 18:17 GMT

 ಹೊಸದಿಲ್ಲಿ, ಜ.29: ಆರಂಭಿಕ ಬ್ಯಾಟ್ಸ್ ಮನ್ ದೇವದತ್ತ ಪಡಿಕ್ಕಲ್(55, 75 ಎಸೆತ)ಹಾಗೂ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಎಸ್.ಶರತ್(56, 164 ಎಸೆತ)ಅರ್ಧಶತಕಗಳ ಕೊಡುಗೆಯ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದ ಮೂರನೇ ದಿನದಾಟದಂತ್ಯಕ್ಕೆ ರೈಲ್ವೇಸ್ ವಿರುದ್ಧ 9 ವಿಕೆಟ್‌ಗಳ ನಷ್ಟಕ್ಕೆ 199 ರನ್ ಗಳಿಸಿದ್ದು, ಕೇವಲ 17 ರನ್ ಮುನ್ನಡೆ ಸಾಧಿಸಿದೆ.

7 ವಿಕೆಟ್‌ಗಳ ನಷ್ಟಕ್ಕೆ 160 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ರೈಲ್ವೇಸ್ ತಂಡವನ್ನು ಕರ್ನಾಟಕದ ಬೌಲರ್‌ಗಳು 182 ರನ್‌ಗೆ ನಿಯಂತ್ರಿಸುವಲ್ಲಿ ಯಶಸ್ವಿಯಾದರು. ಪ್ರತೀಕ್ ಜೈನ್(5-38) ಐದು ವಿಕೆಟ್ ಗೊಂಚಲು ಕಬಳಿಸಿದರೆ,ಅಭಿಮನ್ಯು ಮಿಥುನ್(4-51)ನಾಲ್ಕು ವಿಕೆಟ್‌ಗಳನ್ನು ಪಡೆದು ಪ್ರತೀಕ್‌ಗೆ ಸಮರ್ಥ ಸಾಥ್ ನೀಡಿದರು. ರೈಲ್ವೇಸ್ ಪರ ಅವಿನಾಶ್ ಯಾದವ್(62, 143 ಎಸೆತ, 10 ಬೌಂಡರಿ)ಹಾಗೂ ನಾಯಕ ಅರಿಂದರ್ ಘೋಷ್(59, 167 ಎಸೆತ, 7 ಬೌಂಡರಿ,1 ಸಿಕ್ಸರ್)ಅರ್ಧಶತಕಗಳ ಕೊಡುಗೆ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಕರಾರುವಾಕ್ ಬೌಲಿಂಗ್‌ಗೆ ನಿರುತ್ತರವಾದರು.

ಮೊದಲೆರಡು ದಿನಗಳ ಆಟಕ್ಕೆ ಮಳೆ ಹಾಗೂ ಮಂದ ಬೆಳಕು ಅಡ್ಡಿಯುಂಟು ಮಾಡಿತ್ತು. ಮೂರನೇ ದಿನ ರೈಲ್ವೇಸ್ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸಿದ ಕರ್ನಾಟಕದ ಮೊದಲ ಇನಿಂಗ್ಸ್‌ನಲ್ಲಿನ ಬ್ಯಾಟಿಂಗ್ ಕೂಡ ನಿರೀಕ್ಷಿತ ಮಟ್ಟದಲ್ಲಿರಲಿಲ್ಲ. ಮೊದಲ ಓವರ್‌ನಲ್ಲೇ ಆರ್.ಸಮರ್ಥ್(0)ವಿಕೆಟ್ ಒಪ್ಪಿಸಿದರು. ರೋಹನ್ ಕದಂ(2)ಬೆನ್ನಿಗೆ ಸಮರ್ಥ್ ಔಟಾದರು. ನಾಯಕ ಕರುಣ್ ನಾಯರ್(17)ದೊಡ್ಡ ಮೊತ್ತ ಗಳಿಸಲು ವಿಫಲರಾದರು.ಕೆ.ವಿ.ಸಿದ್ದಾರ್ಥ್(4) ಹಾಗೂ ಎಸ್.ಗೋಪಾಲ್(12)ವೈಫಲ್ಯ ಅನುಭವಿಸಿದರು. ಒಂದೆಡೆ ವಿಕೆಟ್ ಬೀಳುತ್ತಿದ್ದರೂ ದೃತಿಗೆಡೆದ ದೇವದತ್ತ ಪಡಿಕ್ಕಲ್(55, 75 ಎಸೆತ, 9 ಬೌಂಡರಿ)ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ, ಅವರು 27ನೇ ಓವರ್‌ಗೆ ವಿಕೆಟ್ ಒಪ್ಪಿಸಿದರು. ಆಗ ಕರ್ನಾಟಕದ ಸ್ಕೋರ್ 85ಕ್ಕೆ 5.

ಕೆಳ ಕ್ರಮಾಂಕದಲ್ಲಿ ಕೆ.ಗೌತಮ್(41, 31 ಎಸೆತ, 2 ಬೌಂಡರಿ,2 ಸಿಕ್ಸರ್)ಒಂದಷ್ಟು ಹೋರಾಟ ನೀಡಿದರು. ಪ್ರತೀಕ್ ಜೊತೆ ಕ್ರೀಸ್ ಕಾಯ್ದುಕೊಂಡಿರುವ ವಿಕೆಟ್‌ಕೀಪರ್ ಶರತ್(ಔಟಾಗದೆ 56, 164 ಎಸೆತ, 5 ಬೌಂಡರಿ)ತಾಳ್ಮೆಯ ಬ್ಯಾಟಿಂಗ್‌ನ ಮೂಲಕ ತಂಡದ ಮುನ್ನಡೆಯನ್ನು ಹೆಚ್ಚಿಸುವ ವಿಶ್ವಾಸ ಮೂಡಿಸಿದ್ದಾರೆ. ಐದು ವಿಕೆಟ್ ಗೊಂಚಲು ಪಡೆದ ಅಮಿತ್ ಮಿಶ್ರಾ(5-70)ಕರ್ನಾಟಕ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಹಿಮಾಂಶು ಸಾಂಗ್ವಾನ್(3-47)ಮಿಶ್ರಾಗೆ ಸಾಥ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News