ದಲಿತರನ್ನು ವಿದೇಶಿ ಮೂಲದವರನ್ನಾಗಿಸುವ ಸಿಎಎ

Update: 2020-01-30 06:29 GMT

ಇತ್ತೀಚೆಗಷ್ಟೇ ಒಂದು ಸಂಶೋಧನೆ ಆರ್ಯರ ಡಿಎನ್‌ಎ ಕುರಿತಂತೆ ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಆರ್ಯರ ಡಿಎನ್‌ಎ ಈ ದೇಶದ ಮೂಲನಿವಾಸಿಗಳ ಡಿಎನ್‌ಎಗಿಂತ ಭಿನ್ನವಾದುದು ಎನ್ನುವುದನ್ನು ಅದು ಬೆಳಕಿಗೆ ತಂದಿತ್ತು. ವಿಪರ್ಯಾಸವೆಂದರೆ, ಈ ಸಂಶೋಧನೆ ಚರ್ಚೆಯಲ್ಲಿರುವ ಹೊತ್ತಿನಲ್ಲೇ ಆರೆಸ್ಸೆಸ್ ಮುಖಂಡ ಸಂತೋಷ್ ಅವರು, ಅಸ್ಸಾಮಿನಲ್ಲಿರುವ ಶೇ. 60ರಷ್ಟು ದಲಿತರನ್ನು ವಿದೇಶಿ ಮೂಲದವರೆಂದೂ, ಅನುಕಂಪದ ಆಧಾರದಲ್ಲಿ ಅವರಿಗೆ ಸರಕಾರ ದೇಶದ ಪೌರತ್ವವನ್ನು ನೀಡಲು ಮುಂದಾಗಿದೆ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಈ ದೇಶ ಈವರೆಗೆ ಯಾರನ್ನ್ನು ಮೂಲನಿವಾಸಿಗಳೆಂದು ನಂಬಿಕೊಂಡು ಬಂದಿತ್ತೋ ಅವರನ್ನೇ ವಿದೇಶಿಯರನ್ನಾಗಿಸುವ ಸಂಚಿನ ಭಾಗ ಸಿಎಎ ಆಗಿದೆ ಎನ್ನುವುದು ಸಂತೋಷ್ ಅವರ ಹೇಳಿಕೆಯಿಂದ ಬಯಲಾಗಿದೆ. ಮುಂದಿನ ದಿನಗಳಲ್ಲ್ಲಿ ಇಡೀ ದೇಶದ ದಲಿತರನ್ನು ಪಾಕಿಸ್ತಾನಿ ಮೂಲದವರನ್ನಾಗಿಸುವ ದೂರಗಾಮಿ ಯೋಜನೆಯನ್ನೂ ಸಿಎಎ ಹೊಂದಿದೆ. ಸಿಎಎ ಕಾಯ್ದೆಯ ಮೂಲಕ ಒಂದೇ ಕಲ್ಲಿನಿಂದ ಹಲವು ಹಣ್ಣುಗಳನ್ನು ಉರುಳಿಸಲು ಬಿಜೆಪಿ ಮತ್ತು ಆರೆಸ್ಸೆಸ್ ಮುಂದಾಗಿವೆ. ಈ ದೇಶದ ಅತಿ ಅಗತ್ಯದ ಬೇಡಿಕೆ ಜಾತಿ ಜನಗಣತಿಯಾಗಿತ್ತು. ಈ ಮೂಲಕ ಹಿಂದುಳಿದ ವರ್ಗ ಮತ್ತು ದಲಿತ ಸಮುದಾಯದ ಆರ್ಥಿಕ, ಸಾಮಾಜಿಕ ಸ್ಥಾನಮಾನಗಳನ್ನು ಗುರುತಿಸಿ ಮೀಸಲಾತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮಹತ್ವದ ಉದ್ದೇಶವನ್ನು ಈ ಗಣತಿ ಹೊಂದಿತ್ತು. ಈ ಜಾತಿ ಗಣತಿಯ ಸದ್ದಡಗಿಸುವುದಕ್ಕಾಗಿಯೇ ಪೌರತ್ವ ನೋಂದಣಿಯನ್ನು ಸರಕಾರ ಮುನ್ನೆಲೆಗೆ ತಂದಿತು. ಇಂದು ಸಿಎಎಯ ಪರವಾಗಿರಬೇಕೋ, ವಿರೋಧಿಸಬೇಕೋ ಎನ್ನುವ ಗೊಂದಲದಲ್ಲಿರುವ ದಲಿತ ಮುಖಂಡರು ಜಾತಿ ಜನಗಣತಿಗೆ ಒದಗಿರುವ ದುರ್ಗತಿಯನ್ನು ಮರೆತೇ ಬಿಟ್ಟಿದ್ದಾರೆ. ಮಂಡಲ್ ವಿರುದ್ಧ ಕಮಂಡಲ್ ತಂದ ಅಡ್ವಾಣಿಯ ತಂತ್ರಗಾರಿಕೆಯ ಮುಂದಿನ ಭಾಗವಿದು. ಎರಡನೆಯದಾಗಿ ದಲಿತರ ಸ್ವದೇಶಿ ಮೂಲವನ್ನೇ ಅನುಮಾನಿಸುವ ಉದ್ದೇಶವೂ ಇದರ ಹಿಂದಿದೆ. ‘ಆರ್ಯರು ಮಧ್ಯ ಪ್ರಾಚ್ಯದಿಂದ ಬಂದಿದ್ದಾರೆ’ ಎಂಬ ವಾದಕ್ಕೆ ಪ್ರತಿವಾದವನ್ನು ಹುಟ್ಟಿಸಿ ಹಾಕುವ ಮೊದಲ ಹಂತ ಸಿಎಎ ಆಗಿದೆ. ಈಗಾಗಲೇ ಅಸ್ಸಾಮಿನಲ್ಲಿ ಅವರು ಅದರಲ್ಲಿ ಯಶಸ್ವಿಯಾಗಿದ್ದಾರೆ. ಪೌರತ್ವ ಕಳೆದುಕೊಂಡವರಲ್ಲಿ ಮುಸ್ಲಿಮರಿಗಿಂತ ಹಿಂದೂಗಳ ಸಂಖ್ಯೆಯೇ ಭಾರೀ ಪ್ರಮಾಣದಲ್ಲಿದೆ ಮತ್ತು ಹಿಂದೂಗಳೆಂದು ಕರೆಯಲ್ಪಡುವವರಲ್ಲಿ ದೊಡ್ಡ ಸಂಖ್ಯೆಯಲ್ಲಿರುವವರು ಆದಿವಾಸಿ, ಬುಡುಕಟ್ಟು ಸಮುದಾಯಕ್ಕೆ ಸೇರಿದವರು. ಅಮಿತ್ ಶಾ ಅವರ ಅಭಿಪ್ರಾಯದಂತೆ ಪೌರತ್ವ ಕಳೆದುಕೊಂಡವರಲ್ಲಿ ಶೇ. 70 ರಷ್ಟು ಜನರು ದಲಿತರು. ಇವರೆಲ್ಲ ಹಿರಿಯ ತಲೆಮಾರಿಗೆ ಸಂಬಂಧಪಟ್ಟ ಸೂಕ್ತ ದಾಖಲೆಗಳಿಲ್ಲದೆ ಪೌರತ್ವವನ್ನು ಕಳೆದುಕೊಂಡವರೇ ಹೊರತು, ಪಾಕಿಸ್ತಾನ, ಅಫ್ಘಾನಿಸ್ತಾನದಿಂದ ಬಂದವರಲ್ಲ. ದಾಖಲೆಗಳಿಲ್ಲ ಎನ್ನುವ ಒಂದೇ ಆಧಾರದ ಮೇಲೆ ಇವರನ್ನು ಆರೆಸ್ಸೆಸ್ ಮತ್ತು ಬಿಜೆಪಿ ಸರಕಾರ ವಿದೇಶಿ ಮೂಲದವರು ಎಂದು ಕರೆಯುತ್ತಿದೆ. ನಾಳೆ ಸಿಎಎ ಮೂಲಕ ಇವರು ಪೌರತ್ವವನ್ನು ಪಡೆದರು ಎಂದೇ ಇಟ್ಟುಕೊಳ್ಳೋಣ. ಆದರೆ ವಿದೇಶಿ ಮೂಲದವರು ಎನ್ನುವ ಶಾಶ್ವತ ಕಳಂಕದ ಜೊತೆಗೇ ಇವರು ಬದುಕಬೇಕಾಗುತ್ತದೆ.

 ಇದು ಕೇವಲ ಅಸ್ಸಾಮಿಗಷ್ಟೇ ಸೀಮಿತವಾಗಬೇಕು ಎಂದೇನು ಇಲ್ಲ. ಪೌರತ್ವ ನೋಂದಣಿಯಲ್ಲಿ ನೇರವಾಗಿ ಬಲಿಪಶುಗಳಾಗುವವರು ದಲಿತರು. ಯಾಕೆಂದರೆ ಭೂಮಿ ಇಲ್ಲದ, ದಾಖಲೆಗಳಿಲ್ಲದ ದೊಡ್ಡ ಸಂಖ್ಯೆಯ ಜನರಿರುವುದು ದಲಿತರಲ್ಲಿ. ಒಂದು ವೇಳೆ ಎನ್‌ಆರ್‌ಸಿ ಜಾರಿಯಾಯಿತು ಎಂದಿಟ್ಟುಕೊಳ್ಳೋಣ. ಶೇ. 50ರಷ್ಟು ದಲಿತರು ದೇಶದಲ್ಲಿ ತಮ್ಮ ಪೌರತ್ವವನ್ನು ಕಳೆದುಕೊಳ್ಳಬೇಕಾಗುತ್ತದೆ. ಆರೆಸ್ಸೆಸ್ ಮುಖಂಡ ಸಂತೋಷ್ ಹೇಳುವಂತೆ ‘‘ಅನುಕಂಪದ ಆಧಾರದಲ್ಲಿ ಅಫ್ಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದಿಂದ ಬಂದವರು’’ ಎಂಬ ಆಧಾರದಲ್ಲಿ ಈ ದಲಿತರಿಗೆ ಸರಕಾರ ಪೌರತ್ವವನ್ನು ನೀಡುತ್ತದೆ ಎಂದಿಟ್ಟುಕೊಳ್ಳೋಣ. ಈವರೆಗೆ ಈ ದೇಶದ ಮೂಲನಿವಾಸಿಗಳು ಎಂದು ಹೆಮ್ಮೆಯಿಂದ ಹೇಳುತ್ತಿದ್ದ ದಲಿತರು ಏಕಾಏಕಿ ವಿದೇಶಿ ಮೂಲದ ದಲಿತರು ಎಂಬ ಕಳಂಕವನ್ನು ಹೊತ್ತುಕೊಂಡು ಬದುಕಬೇಕಾಗುತ್ತದೆ. ಭವಿಷ್ಯದಲ್ಲಿ ಹೊಸ ತಲೆಮಾರಿನ ದಲಿತರು, ತಮ್ಮ ಮೂಲ ಬಾಂಗ್ಲಾ, ಪಾಕಿಸ್ತಾನ ಎಂದು ಸಹಜವಾಗಿಯೇ ನಂಬ ತೊಡಗುತ್ತಾರೆ. ಒಮ್ಮೆ ಪಾಕಿಸ್ತಾನದ ಮೂಲ ಎಂಬ ಅಚ್ಚು ಹಾಕಿಸಿಕೊಂಡ ಮೇಲೆ, ದಲಿತರ ಮೇಲಿನ ದೌರ್ಜನ್ಯ ಇನ್ನಷ್ಟು ಸುಲಭವಾಗುತ್ತದೆ. ಈಗಾಗಲೇ ತನ್ನದೇ ದೇಶದಲ್ಲಿ ಜಾತಿಯ ಕಾರಣಕ್ಕಾಗಿ ತೀವ್ರ ಅಸ್ಪಶ್ಯತೆಯನ್ನು ಅನುಭವಿಸುತ್ತಿರುವ ದಲಿತರು ಸಿಎಎ ಮೂಲಕ ಪೌರತ್ವವನ್ನು ಪಡೆದು, ವಿದೇಶಿ ಮೂಲದ ದಲಿತರು ಎಂಬ ಹೊಸ ಉಪ ಜಾತಿಯೊಂದಿಗೆ ಬದುಕಬೇಕಾಗುತ್ತದೆ. ಈ ಹೊಸ ದಲಿತ ಪೌರರ ಜೊತೆಗೆ ಭವಿಷ್ಯದ ಸರಕಾರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಕುರಿತಂತೆಯೂ ಅನುಮಾನಗಳಿವೆ.

ಒಂದನ್ನು ಈ ದೇಶದ ಜನತೆ ಆರೆಸ್ಸೆಸ್ ನಾಯಕರಿಗೆ ಮತ್ತು ಸರಕಾರಕ್ಕೆ ದೊಡ್ಡ ಧ್ವನಿಯಲ್ಲಿ ಹೇಳಬೇಕಾಗಿದೆ. ಅಸ್ಸಾಮಿನಲ್ಲಿ ಪೌರತ್ವ ಕಳೆದುಕೊಂಡಿರುವ ದಲಿತರಿರಲಿ, ಮುಸ್ಲಿಮರಿರಲಿ ಅಥವಾ ಇನ್ನಾವುದೇ ಜಾತಿಯವರಿರಲಿ ಅವರಾರೂ ವಿದೇಶಿ ಮೂಲದವರಲ್ಲ, ಅವರೆಲ್ಲ ಸರಕಾರ ಕೇಳಿದ ಪುರಾತನ ದಾಖಲೆಗಳನ್ನು ಒದಗಿಸಲು ವಿಫಲರಾದವರು. ಅವರಲ್ಲಿ ವಿದೇಶಿ ಮೂಲದವರಿದ್ದಾರೆ ಎಂದಾದರೆ ಅದನ್ನು ಸಾಬೀತು ಮಾಡಿ ಅವರನ್ನು ಹೊರ ಹಾಕುವ ಕೆಲಸ ಸರಕಾರದ್ದು. ಹಲವು ತಲೆಮಾರುಗಳಿಂದ ಬದುಕಿರುವ ಜನರು ಪೌರತ್ವವನ್ನು ಸಾಬೀತು ಮಾಡುವ ಅಗತ್ಯವೇ ಇಲ್ಲ. ಸಿಎಎ ಮೂಲಕ ಪೌರತ್ವ ನೀಡುವುದಿದ್ದರೂ ಅದಕ್ಕೂ ದಾಖಲೆಗಳು ಬೇಕಾಗುತ್ತವೆ. ಪಾಕಿಸ್ತಾನ, ಬಾಂಗ್ಲಾದಿಂದ ಬಂದ ಯಾವುದೇ ದಾಖಲೆಗಳೂ ಅವರಲ್ಲಿಲ್ಲ ಎನ್ನುವುದೂ ಗಮನಾರ್ಹವಾಗಿದೆ. ಒಂದು ವೇಳೆ ಸಿಎಎ ಮೂಲಕ ಪೌರತ್ವ ನೀಡುವುದಿದ್ದರೂ ಸರಕಾರವೇ ನಕಲಿ ದಾಖಲೆಗಳನ್ನು ತಯಾರಿಸಿ ಅವರನ್ನು ‘ವಿದೇಶಿ ಮೂಲದಿಂದ ಬಂದವರು’ ಎಂದು ಘೋಷಿಸಿ ಪೌರತ್ವವನ್ನು ನೀಡಬೇಕಾಗುತ್ತದೆ ಅಥವಾ ಮುಸ್ಲಿಮೇತರ ಹೆಸರುಗಳಿರುವುದನ್ನೇ ಮಾನದಂಡವಾಗಿಸಿ ಅವರಿಗೆ ಪೌರತ್ವವನ್ನು ಕೊಡುವುದು.

ಇದೇ ಸಂದರ್ಭದಲ್ಲಿ ದಾಖಲೆಗಳಿಲ್ಲದ ಮುಸ್ಲಿಮರನ್ನು ಅವರ ಧರ್ಮದ ಕಾರಣಕ್ಕಾಗಿ ಶಾಶ್ವತವಾಗಿ ಡಿಟೆನ್ಶನ್ ಸೆಂಟರ್‌ನಲ್ಲಿಡುವುದು. ಈ ದೇಶದ ಶೇಕಡ 75ರಷ್ಟು ದಲಿತರನ್ನು ವಿದೇಶಿ ದಲಿತರೆಂದೂ, ಅನುಕಂಪದ ಆಧಾರದಲ್ಲಿ ಅವರಿಗೆ ಪೌರತ್ವ ನೀಡಿದ್ದೇವೆ ಎನ್ನುವ ಋಣದಲ್ಲಿ ಸಿಲುಕಿಸಿ ಅವರ ಪ್ರತಿಭಟನೆಯ ಬಾಯಿಯನ್ನು ಶಾಶ್ವತವಾಗಿ ಹೊಲಿಯುವ ಸಂಚು ಸಿಎಎ ಕಾಯ್ದೆಯ ಹಿಂದೆ ಇದೆ. ಈ ದೇಶದೊಳಗೆ ತಲೆತಲಾಂತರಗಳಿಂದ ಬದುಕುತ್ತಾ ಬಂದ ದಲಿತರು ಮುಂದೊಂದು ದಿನ ಮೇಲ್‌ಜಾತಿಗಳಿಂದ ‘ವಿದೇಶಿ ಮೂಲದವರೆಂದು’ ಬಹಿರಂಗವಾಗಿಯೇ ಕರೆಯಲ್ಪಡುವ ದಿನಗಳು ಬರಲಿವೆ. ಈಗಾಗಲೇ ಆರೆಸ್ಸೆಸ್ ಮುಖಂಡ ಸಂತೋಷ್‌ತಮ್ಮ ಭಾಷಣದಲ್ಲಿ ಇವರನ್ನು ಬಹಿರಂಗವಾಗಿಯೇ ಹಂಗಿಸಿದ್ದಾರೆ. ಆದುದರಿಂದ ಸಿಎಎ ವಿರುದ್ಧದ ಹೋರಾಟದಲ್ಲಿ ದಲಿತರ ಹೊಣೆಗಾರಿಕೆ ಬಹುದೊಡ್ಡದಿದೆ. ಸಿಎಎಯನ್ನು ಸಾರಾಸಗಟಾಗಿ ವಿರೋಧಿಸುವುದು ಮಾತ್ರವಲ್ಲ, ಈಗಾಗಲೇ ಅಸ್ಸಾಮಿನಲ್ಲಿ ಎನ್‌ಆರ್‌ಸಿಯಿಂದಾಗಿ ವಿದೇಶಿಯರೆಂದು ಗುರುತಿಸಲ್ಪಟ್ಟ ದಲಿತರನ್ನು ಆ ಕಳಂಕದಿಂದ ಮುಕ್ತಿಗೊಳಿಸುವ ಅನಿವಾರ್ಯವೂ ಅವರ ಮೇಲಿದೆ. ಪೌರತ್ವ ನೋಂದಣಿಯನ್ನು ತಿರಸ್ಕರಿಸುವ ಜೊತೆಗೇ ಜಾತಿ ಗಣತಿಯನ್ನು ನಡೆಸಲು ದಲಿತರು ಮತ್ತು ಹಿಂದುಳಿದವರ್ಗದ ಜನರು ಒಂದಾಗಿ ಸರಕಾರವನ್ನು ಆಗ್ರಹಿಸುವ ಅನಿವಾರ್ಯ ದಿನಗಳಲ್ಲಿ ಅವರು ಬದುಕುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News