ಶಿಕ್ಷಕರ ಸಂಘಟನೆ ಬಲಿಷ್ಠವಾಗಿದ್ದರೆ ಶಿಕ್ಷಕರ ಸಮಸ್ಯೆ ಬಗೆಹರಿದಂತೆ: ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ

Update: 2020-01-30 13:42 GMT

ಬೆಂಗಳೂರು, ಜ.30: ಶಿಕ್ಷಕರ ಸಂಘಟನೆಗಳು ಬಲಿಷ್ಠವಾಗಿದ್ದರೆ ಯಾವುದೇ ಪಕ್ಷದ ಸರಕಾರ ಅಧಿಕಾರದಲ್ಲಿದ್ದರೂ ಶಿಕ್ಷಕರ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಅಭಿಪ್ರಾಯಿಸಿದರು.

ಗುರುವಾರ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ನಗರದ ಶಿಕ್ಷಕರ ಸದನದಲ್ಲಿ ಆಯೋಜಿಸಿದ್ದ ಶೈಕ್ಷಣಿಕ ಕಾರ್ಯಾಗಾರ ಮತ್ತು ರಾಜ್ಯಮಟ್ಟದ ಪದಾಧಿಕಾರಿಗಳ ಶೈಕ್ಷಣಿಕ ಸಮಾವೇಶ ಹಾಗೂ ಸರ್ವೋದಯ ದಿನಾಚರಣೆಯನ್ನು ಉದ್ಘಾಟಸಿ ಅವರು ಮಾತನಾಡಿದರು.

ಶಿಕ್ಷಕ ಸಂಘಟನೆಗಳ ಪದಾಧಿಕಾರಿಗಳು ಶಿಕ್ಷಕರು ಹಾಗೂ ಅಧಿಕಾರಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸಬೇಕು. ಆಗ ಶಿಕ್ಷಕರಿಗೆ ಸಂಘಟನೆಯ ಮೇಲೆ ವಿಶ್ವಾಸ ಮೂಡುತ್ತದೆ. ಆ ಮೂಲಕ ಸಂಘಟನೆ ಬಲಿಷ್ಠವಾಗುತ್ತದೆ. ಶಿಕ್ಷಕರಿಗೆ ಸಂಬಂಧಿಸಿದ ಕೆಲಸಗಳನ್ನು ಅಧಿಕಾರಿಗಳಿಗೆ ಹಣ ಕೊಟ್ಟು ಮಾಡಿಸುವುದಾದರೆ ಸಂಘಟನೆಗಳ ಅಗತ್ಯವೇನಿರುತ್ತದೆ. ಅಧಿಕಾರಿಗಳು ಶಿಕ್ಷಕರ ಕೆಲಸವನ್ನು ಮಾಡಿಸಿಕೊಡದಿದ್ದರೆ ವಿಧಾನಪರಿಷತ್ ಸದಸ್ಯರಿಗೆ ದೂರು ನೀಡಿ, ನಾವು ಅದನ್ನು ಬಗೆ ಹರಿಸುತ್ತೇವೆಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘವು ಭಡ್ತಿ, ವೇತನ ಹೆಚ್ಚಳ, ವರ್ಗಾವಣೆ ಸೇರಿದಂತೆ ಹಲವು ಬೇಡಿಕೆಗಳನ್ನು ನಮ್ಮ ಮುಂದೆ ಇಟ್ಟಿದ್ದಾರೆ. ಇವೆಲ್ಲವುಗಳ ಬಗ್ಗೆ ಈಗಾಗಲೇ ಶಿಕ್ಷಣ ಸಚಿವ ಸುರೇಶ್‌ಕುಮಾರ್ ಗಮನಕ್ಕೆ ತರಲಾಗಿದ್ದು, ಈಡೇರಿಸುವ ನಿಟ್ಟಿನಲ್ಲಿ ಪಕ್ಷಭೇದ ಮರೆತು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಅವರು ತಿಳಿಸಿದರು.

ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಎಚ್.ಕೆ.ಮಂಜುನಾಥ್ ಮಾತನಾಡಿ, ನಮ್ಮ ಸರಕಾರಗಳು ಪ್ರಾಥಮಿಕ ಹಾಗೂ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರಿಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದರೆ, ಇವೆರಡರ ಮಧ್ಯೆಯಿರುವ ಪ್ರೌಢಶಾಲಾ ಶಿಕ್ಷಕರಿಗೆ ಸಂಬಂಧಿಸಿದಂತೆ ಮಲತಾಯಿ ಧೋರಣೆ ಅನುಸರಿಸುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರೌಢಶಾಲಾ ಶಿಕ್ಷಕರಿಗೆ ಎಸೆಸೆಲ್ಸಿಯಲ್ಲಿ ಹೆಚ್ಚು ಫಲಿತಾಂಶಕ್ಕಾಗಿ ಒತ್ತಡ ಹಾಕುತ್ತಾರೆ. ಆದರೆ, ವಿದ್ಯಾರ್ಥಿಗೆ ಪ್ರಾಥಮಿಕ ಹಂತದಿಂದಲೇ ಗುಣಮಟ್ಟದ ಶಿಕ್ಷಣ ಸಿಗದಿದ್ದರೆ ಪ್ರೌಢಶಾಲೆಯಲ್ಲಿ ಆ ವ್ಯಕ್ತಿಯಿಂದ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯವೇ. ಈ ನಿಟ್ಟಿನಲ್ಲಿ ಸರಕಾರ ಗಮನ ವಹಿಸಬೇಕಿದೆ. ಹಾಗೂ ಶಿಕ್ಷಕರಿಗೆ ಪಠ್ಯೇತರ ಚಟುವಟಿಕೆಗಳಿಂದ ಮುಕ್ತಿ ಸಿಕ್ಕರೆ ಉತ್ತಮ ಫಲಿತಾಂಶಕ್ಕಾಗಿ ನಾವು ಶ್ರಮವಹಿಸಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಿಕ್ಷಣ ಸಚಿವ ಬಸವರಾಜ ಹೊರಟ್ಟಿ, ವಿಧಾನಪರಿಷತ್ ಸದಸ್ಯರಾದ ಮರತಿಬ್ಬೇಗೌಡ, ಅರುಣ್ ಶಹಾಪೂರ್, ಎಸ್.ವಿ.ಸಂಕನೂರ, ಪದವೀಧರ ಶಿಕ್ಷಕರ ವೇದಿಕೆಯ ಅಧ್ಯಕ್ಷ ರಾಮೋಜಿಗೌಡ, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬೇಡಿಕೆಗಳು

-2008, ಆಗಸ್ಟ್ ನಂತರ ನೇಮಕಾತಿ ಹೊಂದಿ ಪ್ರೌಢಶಾಲಾ ಸಹ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷರುಗಳಿಗೆ 400ರೂ.ವಿಶೇಷ ಭತ್ಯೆಯನ್ನು ಮಂಜೂರು ಮಾಡಿ, 2017ರಿಂದ ಪೂರ್ವಾನ್ವಯವಾಗಿ ವಿಶೇಷ ವಾರ್ಷಿಕ ಭಡ್ತಿ ನೀಡುವುದು.

-ಪದವಿಪೂರ್ವ ಕಾಲೇಜಿಗೆ ಭಡ್ತಿ ಪಡೆಯದೆಯಿರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಕಾಲಮಿತಿ ಭಡ್ತಿ ಮಂಜೂರು ಮಾಡುವುದು.

-ಅನುದಾನಿತ ಶಾಲಾ ಶಿಕ್ಷಕರಿಗೆ ಕಾಲ್ಪನಿಕ ವೇತನ ಭಡ್ತಿ ಮಂಜೂರು ಮಾಡುವುದು.

-ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿರುವ ನ್ಯೂನತೆಗಳನ್ನು ಸರಿಪಡಿಸುವುದು ಹಾಗೂ ಶಿಕ್ಷಕ ಸ್ನೇಹಿ ವರ್ಗಾವಣೆ ಕಾಯ್ದೆಯನ್ನು ಜಾರಿಗೊಳಿಸುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News