×
Ad

​22 ಒತ್ತೆಯಾಳು ಮಕ್ಕಳ ರಕ್ಷಣೆ, ಅಪಹರಣಕಾರನನ್ನು ಗುಂಡಿಕ್ಕಿ ಹತ್ಯೆಗೈದ ಪೊಲೀಸರು

Update: 2020-01-31 09:31 IST

ಲಕ್ನೋ, ಜ.31: ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯೊಬ್ಬ 23 ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ಪ್ರಕರಣವನ್ನು ಮಿಂಚಿನ ಕಾರ್ಯಾಚರಣೆ ಮೂಲಕ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ವ್ಯಕ್ತಿಯನ್ನು ಪೊಲೀಸರು ಗುಂಡಿಟ್ಟು ಸಾಯಿಸಿದ್ದಾರೆ.

ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯಲ್ಲಿ ಒಂಬತ್ತು ಗಂಟೆಗಳ ಕಾರ್ಯಾಚರಣೆ ಬಳಿಕ ಪೊಲೀಸರು ಅಂತಿಮವಾಗಿ ಆರೋಪಿ ಸುಭಾಷ್ ಬಾಥಂಗೆ ಗುಂಡು ಹೊಡೆದರು. 23 ಮಕ್ಕಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ ವ್ಯಕ್ತಿ ಬಾಲಕಿಯೊಬ್ಬಳನ್ನು ಕಾರ್ಯಾಚರಣೆಗೆ ಮುನ್ನ ಬಿಡುಗಡೆ ಮಾಡಿದ್ದ.

ಆರೋಪಿಯ ಮನೆಗೆ ದಿಢೀರ್ ದಾಳಿ ನಡೆಸಿದ ಪೊಲೀಸರು, ಮನೆಯ ಗೋದಾಮಿನಿಂದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಕಾನ್ಪುರ ವಲಯದ ಐಜಿಪಿ ಮೋಹಿತ್ ಅಗರ್‌ವಾಲ್ ನೇತೃತ್ವದಲ್ಲಿ ನಡೆದ ದಾಳಿಗೆ ಕ್ಷಿಪ್ರ ಸ್ಪಂದನೆ ಪಡೆ, ವಿಶೇಷ ಕಾರ್ಯಾಚರಣೆ ಗುಂಪು ಮತ್ತು ಭಯೋತ್ಪಾದಕ ನಿಗ್ರಹ ಪಡೆ ಸಹಕರಿಸಿತ್ತು.

ದಾಳಿಯ ವೇಳೆ ಆರೋಪಿ ಸಾರ್ವಜನಿಕರು ಹಾಗೂ ಪೊಲೀಸರತ್ತ ಕಚ್ಚಾ ಬಾಂಬ್ ಎಸೆದು ಪಿಸ್ತೂಲಿನಿಂದ ದಾಳಿ ಮಾಡಿದಾಗ ಮೂವರು ಗಾಯಗೊಂಡಿದ್ದಾರೆ. ಈ ವೇಳೆ ತನ್ನ ಆಗ್ರಹದ ಪತ್ರವನ್ನು ಎಸೆದ ಆರೋಪಿ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ತನಗೆ ಮನೆ ನೀಡಿಲ್ಲ ಹಾಗೂ ಸ್ವಚ್ಛ ಮಿಷನ್‌ನಡಿ ಶೌಚಾಲಯವನ್ನೂ ನೀಡಿಲ್ಲ ಎಂದು ಆಪಾದಿಸಿದ್ದ.

ಕಠಾರಿಯಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸುಭಾಷ್ ಎಲ್ಲ ಮಕ್ಕಳನ್ನು ತನ್ನ ಮನೆಗೆ ಔತಣಕ್ಕಾಗಿ ಕರೆದು ಕೂಡಿಹಾಕಿ, ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News