ವಿವಾಹ ನಿಗದಿಯಾದ ಯುವತಿಯ ಅತ್ಯಾಚಾರ, ಕೊಲೆ
ಭೋಪಾಲ್: ವಿವಾಹ ನಿಗದಿಯಾಗಿದ್ದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ.
ಈ ಘಟನೆ ಬುಧವಾರ ಸಂಜೆ ನಡೆದಿದ್ದು, ಘಟನೆಯಿಂದ ಉದ್ರಿಕ್ತರಾದ ಸಂತ್ರಸ್ತೆ ಕುಟುಂಬದವರು, ಸಂಬಂಧಿಕರು ಮತ್ತು ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಉದ್ರಿಕ್ತರು ಪೊಲೀಸರತ್ತ ಕಲ್ಲು ತೂರಾಟ ನಡೆಸಿದ ಪರಿಣಾಮ ಕೆಲ ಪೊಲೀಸರಿಗೆ ಗಾಯಗಳಾಗಿವೆ.
ಹದಿನೆಂಟು ವರ್ಷದ ಯುವತಿ ಹೊರಗೆ ಹೋಗಿದ್ದಾಗ, ಯುವತಿಯ ವಿವಾಹ ದಿನಾಂಕ ನಿಗದಿಯಾದ ವಿಷಯ ತಿಳಿದ ವ್ಯಕ್ತಿ ಆಕೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದಾಗಿ ಪೊಲೀಸರು ಹೇಳಿದ್ದಾರೆ. ಹಲವು ದಿನಗಳಿಂದ ಆ ವ್ಯಕ್ತಿ ಯುವತಿಯನ್ನು ಹಿಂಬಾಲಿಸುತ್ತಿದ್ದ ಎನ್ನಲಾಗಿದ್ದು, ಆಕೆಯ ವಿವಾಹ ನಿಗದಿಯಾದ ಕಾರಣಕ್ಕೆ ಈ ಕೃತ್ಯ ಎಸಗಿರಬೇಕು ಎಂದು ಶಂಕಿಸಲಾಗಿದೆ.
ಯುವತಿಯ ಮೇಲೆ ಅತ್ಯಾಚಾರ ನಡೆದಿರುವುದು ಮರಣೋತ್ತರ ಪರೀಕ್ಷೆಯಿಂದ ದೃಢಪಟ್ಟಿದೆ. ಆರೋಪಿಯ ಬಂಧನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾಗರ್ ಜಿಲ್ಲೆಯ ಹೆಚ್ಚುವರಿ ಎಸ್ಪಿ ರಾಜೇಶ್ ವ್ಯಾಸ್ ಹೇಳಿದ್ದಾರೆ.