ಚೀನಾಕ್ಕೆ ಪ್ರಯಾಣಿಸದಂತೆ ತನ್ನ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ
ಬೀಜಿಂಗ್, ಜ.31: ಚೀನಾದಲ್ಲಿ ಮಾರಣಾಂತಿಕ ವೈರಸ್ ಸೋಂಕಿನ ಹಾವಳಿ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಆ ದೇಶಕ್ಕೆ ಪ್ರಯಾಣಿಸದಂತೆ ಅಮೆರಿಕವು ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ.
ಚೀನಾದಲ್ಲಿ ಪ್ರಸಕ್ತ ಇರುವ ಅಮೆರಿಕನ್ನರು ವಾಣಿಜ್ಯ ಸಂಚಾರ ಸೌಲಭ್ಯಗಳನ್ನು ಬಳಸಿಕೊಂಡು ಆ ದೇಶದಿಂದ ನಿರ್ಗಮಿಸುವಂತೆಯೂ ಅಮೆರಿಕ ವಿದೇಶಾಂಗ ಇಲಾಖೆಯು ಜಾರಿಗೊಳಿಸಿರುವ ಪ್ರಯಾಣ ಮುನ್ನೆಚ್ಚರಿಕೆಯಲ್ಲಿ ತಿಳಿಸಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅಮೆರಿಕ ಸರಕಾರದ ಸಿಬ್ಬಂದಿ ಕೂಡಾ ಚೀನಾಗೆ ಅನವಶ್ಯಕ ಪ್ರಯಾಣಗಳನ್ನು ಕೈಗೊಳ್ಳದಂತೆ ಸೂಚನೆ ನೀಡಲಾಗಿದೆ. ಹಾಂಕಾಂಗ್ ಹಾಗೂ ಮಕಾವು ದ್ವೀಪಗಳನ್ನು ಹೊರತುಪಡಿಸಿ, ಚೀನಾಗೆ ಅನಗತ್ಯ ಪ್ರವಾಸಗಳನ್ನು ನಡೆಸದಂತೆ ಜಪಾನ್, ಜರ್ಮನಿ ಹಾಗೂ ಬ್ರಿಟನ್ ದೇಶಗಳು ಎಚ್ಚರಿಕೆ ನೀಡಿವೆ
ಈ ಮಧ್ಯೆ ಚೀನಾದ ವಿದೇಶಾಂಗ ಇಲಾಖೆಯು ಹೇಳಿಕೆಯೊಂದನ್ನು ನೀಡಿ, ಸಾಗರೋತ್ತರ ದೇಶಗಳಿಗೆ ತೆರಳಿರುವ ಹುಬೆಯಿ ಪ್ರಾಂತದ ನಿವಾಸಿಗಳನ್ನು ವಾಪಸ್ ಕರೆತರಲು ವಿಶೇಷ ವಿಮಾನಗಳನ್ನು ಕಳುಹಿಸುವುದಾಗಿ ಚೀನಾ ಸರಕಾರವು ತಿಳಿಸಿದೆ.
ಚೀನಾದ ವಿಶ್ವಸಂಸ್ಥೆ ರಾಯಭಾರಿ ಝಾಂಗ್ ಜುನ್ ಗುರುವಾರ ಸಂಜೆ ಹೇಳಿಕೆಯೊಂದನ್ನು ನೀಡಿ, ‘‘ ಕೊರೋನ ವೈರಸ್ ವಿರುದ್ಧ ಹೋರಾಟದ ಅತ್ಯಂತ ನಿರ್ಣಾಯಕವಾದ ಹಂತದಲ್ಲಿ ನಾವಿದ್ದೇವೆ’’ ಎಂದು ತಿಳಿಸಿದೆ.
ಆದಾಗ್ಯೂ ಈ ಸಾಂಕ್ರಾಮಿಕ ರೋಗವು ಚೀನಾಕ್ಕಷ್ಟೇ ಸೀಮಿತವಾಗಿದ್ದು, ಅದರ ಬಗ್ಗೆ ಅಂತಾರಾಷ್ಟ್ರೀಯವು ‘ಅತಿರೇಕದ ಪ್ರತಿಕ್ರಿಯೆ ’ ನೀಡಬಾರದು ಎಂದು ಕಿವಿ ಮಾತು ಹೇಳಿದೆ.