ಕಬ್ಬನ್ ಪಾರ್ಕ್ ಅಭಿವೃದ್ಧಿಗೆ 40 ಕೋಟಿ ರೂ. ವ್ಯಯ: ಮೇಯರ್ ಗೌತಮ್ ಕುಮಾರ್

Update: 2020-02-02 18:50 GMT

ಬೆಂಗಳೂರು, ಫೆ.2: ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನೆಯಡಿ 300 ಎಕರೆ ವಿಸ್ತೀರ್ಣವುಳ್ಳ ಕಬ್ಬನ್ ಉದ್ಯಾನವನ್ನು ಎರಡು ಹಂತಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಅದಕ್ಕಾಗಿ ಒಟ್ಟು 40 ಕೋಟಿ ರೂ. ವ್ಯಯಿಸಲಾಗುತ್ತಿದೆ ಎಂದು ಮೇಯರ್ ಗೌತಮ್ ಕುಮಾರ್ ಹೇಳಿದ್ದಾರೆ.

ರವಿವಾರ ಬಿಬಿಎಂಪಿ, ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ಹಾಗೂ ತೋಟಗಾರಿಕಾ ಇಲಾಖೆ ವತಿಯಿಂದ ಕಬ್ಬನ್ ಉದ್ಯಾನ ಅಭಿವೃದ್ಧಿ ಬಗ್ಗೆ ಅಭಿಪ್ರಾಯ ಸಂಗ್ರಹಿಸುವ ಕುರಿತು ಕಬ್ಬನ್ ಉದ್ಯಾನವನ ವಾದ್ಯರಂಗದಲ್ಲಿ ಸಾರ್ವಜನಿಕರು ಹಾಗೂ ವಾಯುವಿಹಾರಿಗಳ ಜೊತೆ ಸಭೆ ಹಾಗೂ ಸ್ಮಾರ್ಟ್‌ಸಿಟಿ ಅಡಿ ಕೈಗೆತ್ತಿಕೊಳ್ಳುವ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಬ್ಬನ್ ಉದ್ಯಾನವನ್ನು ಮತ್ತಷ್ಟು ಸುಂದರೀಕರಣಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವ ಉದ್ದೇಶದಿಂದ ಸ್ಮಾರ್ಟ್ ಸಿಟಿ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಗೊಳ್ಳಲಾಗುತ್ತಿದೆ. ಜನರ ಭಾವನೆಗಳಿಗೆ ಯಾವುದೇ ತೊಂದರೆಯಾಗದ ರೀತಿ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತದೆ. ಸಾರ್ವಜನಿಕರು ಬಳಸುವ ಉದ್ಯಾನ ಇದಾಗಿದ್ದು, ಅವರಿಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಹೆಚ್ಚಿನ ಅರಿವಿರುತ್ತದೆ. ಈ ನಿಟ್ಟಿನಲ್ಲಿ ಕಬ್ಬನ್ ಉದ್ಯಾನ ವಾರ್ಕಸ್ ಅಸೋಷಿಯೇಷನ್, ಸಾರ್ವಜನಿಕರು ಹಾಗೂ ವಾಯುವಿಹಾರಿಗಳ ಜೊತೆ ಸಭೆ ನಡೆಸಿ ಹಲವು ಸಲಹೆಗಳನ್ನು ಪಡೆಯಲಾಗಿದೆ. ಅವರು ನಿಡಿರುವ ಸಲಹೆಗಳನ್ನು ಯೋಜನೆಯಲ್ಲಿ ಅಳವಡಿಸಿಕೊಂಡು ಉದ್ಯಾನವನ್ನು ಅಭಿವದ್ಧಿಪಡಿಸಲಾಗುವುದು ಎಂದು ತಿಳಿಸಿದರು.

ಬೆಂಗಳೂರು ಸ್ಮಾರ್ಟ್ ಸಿಟಿ ಲಿ.ನ ವ್ಯವಸ್ಥಾಪಕ ನಿರ್ದೇಶಕಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಡಿ ಕಬ್ಬನ್ ಉದ್ಯಾನ ಅಭಿವೃದ್ಧಿಗೊಳಿಸಲು ಎರಡು ಹಂತದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ವಿಸ್ತೃತ ಯೋಜನಾ ವರದಿ ತಯಾರಿಸಿ ವಾಸ್ತುಶಿಲ್ಪಿಗಳ ಮೂಲಕ ನೀಲನಕ್ಷೆ ಸಿದ್ದಪಡಿಸಲಾದೆ. ಪಾದಚಾರಿ ಮಾರ್ಗ, ಸೈಕಲ್ ಟ್ರಾಕ್, ಜಾಗಿಂಗ್ ಟ್ರಾಕ್, ವಾಯುವಿಹಾರ ಪಥ, ನೀರು ಶುದ್ಧೀಕರಣ, ವಿಕಲಚೇತನ ಸ್ನೇಹಿ ಉದ್ಯಾನ, ಹಿರಿಯರು ಹಾಗೂ ಮಕ್ಕಳಿಗಾಗಿ ಮೀಸಲಿರುವ ಪ್ರದೇಶ ಪುನರ್ ನವೀಕರಣಗೊಳಿಸುವುದು ಸೇರಿದಂತೆ ಇನ್ನಿತರ ಅಬಿವೃದ್ಧಿ ಕಾಮಗಾರಿ ನಡೆಸಲಾಗುವುದು ಎಂದು ತಿಳಿಸಿದರು.

ಪರಿಸರ ಸ್ನೇಹಿ ಮಾದರಿಯಲ್ಲಿ ಪ್ರಕತಿಗೆ ಯಾವುದೇ ಹಾನಿಯುಂಟಾಗದ ರೀತಿಯಲ್ಲಿ ಮುಂದಿನ ಮಾರ್ಚ್ ಅಂತ್ಯದೊಳಗಾಗಿ ಮೊದಲನೇ ಹಂತ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 20 ಕೋಟಿ ರೂ. ಮೊದಲನೇ ಹಂತ ಹಾಗೂ 20 ಕೋಟಿ ರೂ. ಎರಡನೇ ಹಂತ ಸೇರಿ ಒಟ್ಟು 40 ಕೋಟಿ ರೂ. ವೆಚ್ಚದಲ್ಲಿ ಕಬ್ಬನ್ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.

ಕಾಮಗಾರಿಗಳ ವಿವರ: ಮೊದಲನೇ ಹಂತ 20 ಕೋಟಿ ರೂ.: ಪಾದಚಾರಿ ಮಾರ್ಗಪಥ ಪುನರ್ ನವೀಕರಣ, ವಾಯುವಿಹಾರ ಪಥ ಅಭಿವೃದ್ಧಿ, ರಸ್ತೆ ಅಭಿವದ್ಧಿ, ನೀರು ಶುದ್ಧೀಕರಣ ಮಾಡುವುದು, ಸೈಕಲ್ ಟ್ರಾಕ್, ಜಾಗಿಂಗ್ ಟ್ರಾಕ್, ಕಮಲದ ಕೊಳ ಅಭಿವೃದ್ಧಿ, ಕಮಲದ ಕೋಳದ ಸುತ್ತಲು ಸಾಂಚಾರಿಮಾರ್ಗ, ನಾಲ ಮತ್ತು ಸೇತುವೆಗಳ ಅಭಿವೃದ್ಧಿ ಹಾಗೂ ಇನ್ನಿತರೆ.

ಎರಡನೇ ಹಂತ 20 ಕೋಟಿ ರೂ.: ಕರಗದ ಕುಂಟೆ ಅಭಿವೃದ್ಧಿ, ಜೌಗು ಪ್ರದೇಶದ ಅಭಿವೃದ್ಧಿ, ಕಾರಂಜಿಗಳು, ಆಸನಗಳ ವ್ಯವಸ್ಥೆ, ಕಲ್ಯಾಣಿ ಅಭಿವೃದ್ಧಿ, ಚಾನಲ್‌ಗಳ ಅಭಿವದ್ಧಿ, ಸಸಿಗಳನ್ನು ನೆಡುವುದು, ವಿಕಲಚೇನರಿಗಾಗಿ ಸಂವೇದನಾ ಅಂಗಳ ಅಭಿವೃದ್ಧಿ, ಆಯುರ್ವೇದ ಉದ್ಯಾನ ನಿರ್ಮಾಣ, ಹಿರಿಯ ನಾಗರೀಕರು ಹಾಗೂ ಮಕ್ಕಳಿಗಾಗಿ ಮೀಸಲಿಟ್ಟಿರುವ ಸ್ಥಳ ಪುನರ್ ನವೀಕರಣ, ಯೋಗ ಪ್ರದೇಶ ಅಭಿವೃದ್ಧಿ, ಕಬ್ಬನ್ ಉದ್ಯಾನ ಇತಿಹಾಸ ಹಾಗೂ ಸಮರ್ಪಕ ಮಾಹಿತಿಗಳ ಫಲಕ ಅಳವಡಿಕೆ, ಬಯೋ ಗ್ಯಾಸ್ ಪಾಯಿಂಟ್ ಸ್ಥಾಪನೆ, ಸೈಕಲ್ ನಿಲ್ದಾಣ, ಪಾರಿವಾಳಗಳ ಆಹಾರ ವಿತರಿಸುವ ಸ್ಥಳ ಅಭಿವೃದ್ಧಿ, ಫೆನ್ಸಿಂಗ್ ಹಾಗೂ ದ್ವಾರಗಳ ಅಳವಡಿಕೆ, ಹಿರಿಯರಿಗಾಗಿ ಪ್ರತ್ಯೇಕ ಆಸನಗಳ ವ್ಯವಸ್ಥೆ, ಬಿದಿರಿನಿಂದ ಹಲವು ವಿನ್ಯಾಸ ತಯಾರಿಕೆ, ಕಸದ ಬಿನ್‌ಗಳು ಹಾಗೂ ಇತ್ಯಾದಿ.

ಸಾರ್ವಜನಿಕರ ಸಲಹೆಗಳು: ಸಿ.ಸಿ.ಕ್ಯಾಮೆರಾ ಅಳವಡಿಕೆ, ಪಾರ್ಕಿಂಗ್ ಸ್ಥಳಗಳ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳ ನಿರ್ಮಾಣ, ತೆರೆದ ವ್ಯಾಯಾಮಗಳು, ಪರಿಸರ ಸ್ನೇಹಿ ಮಾದರಿ ಅಳವಡಿಕೆ, ಬಿದಿರು ಸಸಿಗಳು ನೆಡಬೇಕು.

ಸಭೆಯಲ್ಲಿ ಸಂಸದ ಪಿ.ಸಿ.ಮೋಹನ್, ಶಾಸಕ ರಿಝ್ವಾನ್ ಅರ್ಷದ್, ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ತೋಟಗಾರಿಕಾ ಇಲಾಖೆ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯ, ಕಬ್ಬನ್ ಉದ್ಯಾನ ವಾರ್ಕರ್ಸ್‌ ಅಸೋಷಿಯೇಷನ್ ಅಧ್ಯಕ್ಷ ಉಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News