ಬಿಜೆಪಿಗೆ ಪಾಕಿಸ್ತಾನದ ಮೇಲೆ ಪ್ರೀತಿ: ಸ್ವರಭಾಸ್ಕರ್

Update: 2020-02-03 04:07 GMT

ಇಂಧೋರ್: ಪಾಕಿಸ್ತಾನ ಮೂಲದ ಗಾಯಕ ಅದ್ನಾನ್ ಸಮಿಗೆ ಪದ್ಮಶ್ರೀ ಪ್ರಶಸ್ತಿ ನೀಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ನಟಿ ಸ್ವರ ಭಾಸ್ಕರ್ ಕಟುವಾಗಿ ಟೀಕಿಸಿದ್ದು, ಬಿಜೆಪಿಗೆ ಪಾಕಿಸ್ತಾನದ ಮೇಲೆ ಪ್ರೀತಿ ಎಂದು ಹೇಳಿದ್ದಾರೆ.

ಮಧ್ಯಪ್ರದೇಶದ ಇಂಧೋರ್‌ನಲ್ಲಿ "ಸಂವಿಧಾನ ರಕ್ಷಿಸಿ, ದೇಶ ರಕ್ಷಿಸಿ" ರ್ಯಾಲಿಯಲ್ಲಿ ಮಾತನಾಡಿದ ಅವರು, ಹೊಸ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಆಂಗೀಕರಿಸಿರುವುದು ದೇಶದ ಸಂವಿಧಾನಕ್ಕೆ ಎಸಗಿದ ಅಪಚಾರ ಎಂದು ಟೀಕಿಸಿದರು.

"ವಲಸಿಗರಿಗೆ ಪೌರತ್ವ ನೀಡುವ ಮತ್ತು ನುಸುಳುಕೋರರನ್ನು ಬಂಧಿಸುವ ಕಾನೂನು ಪ್ರಕ್ರಿಯೆ ಈಗಾಗಲೇ ಭಾರತದಲ್ಲಿ ಚಾಲ್ತಿಯಲ್ಲಿದೆ. ನೀವು (ಸರ್ಕಾರ) ಅದ್ನನ್ ಸಮಿಗೆ ಭಾರತದ ಪೌರತ್ವ ನೀಡಿದ್ದೀರಿ ಹಾಗೂ ಪದ್ಮಶ್ರೀ ಗೌರವವನ್ನೂ ನೀಡಿದ್ದೀರಿ. ಹಾಗಿದ್ದ ಮೇಲೆ ಪೌರತ್ವ ತಿದ್ದುಪಡಿ ಕಾಯ್ದೆ ಸಮರ್ಥಿಸಿಕೊಳ್ಳುವ ಅಗತ್ಯವೇನು ?" ಎಂದು ಪ್ರಶ್ನಿಸಿದರು.

ಪಾಕಿಸ್ತಾನದ ವಾಯುಪಡೆ ಯೋಧರೊಬ್ಬರ ಮಗನಾಗಿ ಲಂಡನ್‌ನಲ್ಲಿ ಜನಿಸಿದ ಸಮಿ, 2015ರಲ್ಲಿ ಭಾರತೀಯ ಪೌರತ್ವಕ್ಕೆ ಅರ್ಜಿ ಸಲ್ಲಿಸಿದ್ದರು. 2016ರ ಜನವರಿಯಲ್ಲಿ ಭಾರತದ ಪ್ರಜೆಯಾಗಿದ್ದರು. ಕಳೆದ ತಿಂಗಳು ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿದ 118 ಮಂದಿಯ ಪೈಕಿ ಇವರ ಹೆಸರೂ ಸೇರಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News