×
Ad

ಮೃತರ ಸಂಖ್ಯೆ 360ಕ್ಕೆ: ಸಾರ್ಸ್ ಬಲಿಪಶುಗಳ ಸಂಖ್ಯೆಯನ್ನೂ ಮೀರಿಸಿದ ಕೊರೊನಾ ವೈರಸ್

Update: 2020-02-03 22:35 IST

ಬೀಜಿಂಗ್, ಫೆ. 3: ಭೀಕರ ಕೊರೊನಾ ವೈರಸ್ ಸೋಂಕಿನಿಂದಾಗಿ ಚೀನಾದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 360ಕ್ಕೇರಿದೆ. ರೋಗದ ಕೇಂದ್ರ ಬಿಂದು ಹುಬೈಯಲ್ಲಿ ಒಂದು ದಿನದ ಅವಧಿಯಲ್ಲಿ ಹೊಸದಾಗಿ 56 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಸೋಂಕಿಗೊಳಗಾದವರ ಸಂಖ್ಯೆ 16,400ಕ್ಕೇರಿದೆ.

ಕೊರೊನಾ ವೈರಸ್ ಸಂಬಂಧಿ ಸಾವಿನ ಸಂಖ್ಯೆಯು, 2002-03ರಲ್ಲಿ ಕಾಣಿಸಿಕೊಂಡ ಸಾರ್ಸ್ ಮಹಾಮಾರಿಯಲ್ಲಿ ಚೀನಾ ಪ್ರಧಾನ ನೆಲದಲ್ಲಿ ಮೃತಪಟ್ಟವರ ಸಂಖ್ಯೆಯನ್ನೂ ದಾಟಿದೆ. ಸಾರ್ಸ್‌ನಿಂದಾಗಿ ಚೀನಾ ಪ್ರಧಾನ ನೆಲದಲ್ಲಿ 349 ಮಂದಿ ಮೃತಪಟ್ಟಿದ್ದರು.

ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಪರದಾಡುತ್ತಿರುವ ಅಧಿಕಾರಿಗಳು, ರವಿವಾರ ಇನ್ನೊಂದು ನಗರವನ್ನು ಬೀಗಮುದ್ರೆಯಲ್ಲಿಟ್ಟಿದ್ದಾರೆ. ಪೂರ್ವದ ವೆನ್‌ಝೂ ನಗರದ ಎಲ್ಲ ರಸ್ತೆಗಳನ್ನು ಮುಚ್ಚಲಾಗಿದೆ ಹಾಗೂ ಜನರಿಗೆ ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ.

ವೆನ್‌ಝೂ ನಗರವು ರೋಗದ ಕೇಂದ್ರ ಬಿಂದು ವುಹಾನ್ ನಗರದಿಂದ ಸುಮಾರು 800 ಕಿ.ಮೀ. ದೂರದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News