×
Ad

ಗೋಲ್ಡನ್ ಗರ್ಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್ :ಆರು ಚಿನ್ನ ಬಾಚಿಕೊಂಡ ಭಾರತದ ಬಾಕ್ಸರ್‌ಗಳು

Update: 2020-02-03 23:28 IST

ಹೊಸದಿಲ್ಲಿ, ಫೆ.3: ಸ್ವೀಡನ್‌ನ ಬೊರಾಸ್‌ನಲ್ಲಿ ನಡೆದ ಗೋಲ್ಡನ್ ಗರ್ಲ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಜೂನಿಯರ್ ಹಾಗೂ ಯೂತ್ ಬಾಕ್ಸರ್‌ಗಳು ಪ್ರಾಬಲ್ಯ ಸಾಧಿಸಿದ್ದು, ಆರು ಚಿನ್ನ ಸಹಿತ ಒಟ್ಟು 14 ಪದಕಗಳನ್ನು ಬಾಚಿಕೊಂಡರು. ಸಮಗ್ರ ಚಾಂಪಿಯನ್‌ಶಿಪ್ ಟ್ರೋಫಿ ಹಾಗೂ ‘ಬೆಸ್ಟ್ ಬಾಕ್ಸರ್‌‘ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ರವಿವಾರ ಕೊನೆಗೊಂಡಿರುವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಜೂನಿಯರ್ ಮಹಿಳಾ ತಂಡ ಐದು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕಗಳನ್ನು ಜಯಿಸಿತು. ಯೂತ್ ಟೀಮ್ ಒಂದು ಚಿನ್ನ ಹಾಗೂ ನಾಲ್ಕು ಕಂಚಿನ ಪದಕಗಳನ್ನು ಗೆದ್ದುಕೊಂಡಿತು ಎಂದು ಭಾರತದ ಬಾಕ್ಸಿಂಗ್ ಒಕ್ಕೂಟ ಪತ್ರಿಕಾಪ್ರಕಟನೆಯೊಂದರಲ್ಲಿ ತಿಳಿಸಿದೆ.

ಜೂನಿಯರ್ ವಿಭಾಗದಲ್ಲಿ ಸ್ಪರ್ಧಿಸಿರುವ ಹರ್ಯಾಣದ ಪ್ರಾಚಿ ಧಂಕರ್(50ಕೆಜಿ)‘ಬೆಸ್ಟ್ ಬಾಕ್ಸರ್’ ಪ್ರಶಸ್ತಿ ಜಯಿಸಿದರು. ಪ್ರಾಚಿಯವರಲ್ಲದೆ, ಎಥೊಬಿ ಚಾನು ವಾಂಗ್‌ಜಾಮ್(54ಕೆಜಿ), ಲಾಶು ಯಾದವ್(66ಕೆಜಿ) ಹಾಗೂ ಮಾಹಿ ರಾಘವ್(80 ಕೆಜಿ) ಕೂಡ ಚಿನ್ನದ ಪದಕ ಜಯಿಸಿದರು.

ಯೂತ್ ವಿಭಾಗದಲ್ಲಿ ಮುಸ್ಕಾನ್(54ಕೆಜಿ) ಏಕೈಕ ಚಿನ್ನದ ಪದಕ ತನ್ನದಾಗಿಸಿಕೊಂಡರು. ಸಾನ್ಯಾ ನೇಗಿ(57 ಕೆಜಿ), ದೀಪಿಕಾ(64 ಕೆಜಿ), ಮುಸ್ಕಾನ್(69ಕೆಜಿ) ಹಾಗೂ ಸಾಕ್ಷಿ ಜದಾಲೆ(75ಕೆಜಿ)ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಜೂನಿಯರ್ ವಿಭಾಗದಲ್ಲಿನ ಮೂರು ಬೆಳ್ಳಿ ಪದಕಗಳನ್ನು ಜಾಹ್ನವಿ ಚೂರಿ(46ಕೆಜಿ), ರೂಡಿ ಲಾಲ್‌ಮಿಂಗ್‌ಮುಯಾನಿ(66ಕೆಜಿ) ಹಾಗೂ ತನಿಷ್ಕಾ ಪಾಟೀಲ್(80 ಕೆಜಿ)ಗೆದ್ದುಕೊಂಡರು. ದಿವ್ಯಾ ನೇಗಿ 60 ಕೆಜಿ ವಿಭಾಗದಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡರು. ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 75 ತಂಡಗಳು ಭಾಗವಹಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News