ದೇಶಾದ್ಯಂತ NRC ಇಲ್ಲ ಎಂಬ ಕೇಂದ್ರ ಸರಕಾರದ ಮಹಾಸುಳ್ಳಿಗೆ ಬಲಿಬೀಳಬೇಡಿ !

Update: 2020-02-04 10:22 GMT

ಇಂದು (ಫೆ.4) ರಂದು ಸಂಸತ್ತಿನಲ್ಲಿ ಸರ್ಕಾರವು ಒಂದು ಅಧಿಕೃತ ಹೇಳಿಕೆಯನ್ನು ಪ್ರಕಟಿಸಿ "ದೇಶಾದ್ಯಂತ  NRC ಮಾಡುವ ಬಗ್ಗೆ ಸರ್ಕಾರ ಸದ್ಯಕ್ಕ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ" ಎಂದು ಹೇಳಿದೆ. ಇದು ಜನರನ್ನು ದಾರಿ ತಪ್ಪಿಸುವ ಮತ್ತೊಂದು ಸುಳ್ಳು ಹಾಗು ವಂಚನೆಯಿಂದ ಕೂಡಿದ ಹೇಳಿಕೆಯಾಗಿದೆ.

1. ಮೊದಲನೆಯದಾಗಿ ಸರ್ಕಾರವು ಇದೆ ಎಪ್ರಿಲ್ ನಿಂದ ದೇಶದೆಲ್ಲೆಡೆ ಎನ್ ಪಿ ಆರ್ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಿದೆ. ಅದಕ್ಕಾಗಿ ಡಿಸೆಂಬರ್ 24ರಂದೇ 5000 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ.

NPR- ನ್ಯಾಷನಲ್ ಪಾಪ್ಯುಲೇಷನ್ ರಿಜಿಸ್ಟ್ರಿ- ಮಾಡುತ್ತಿರುವುದೇ NRC ಮಾಡಲೆಂದು. NRC ಮಾಡುವುದನ್ನು ಬಿಟ್ಟು NPR ಗೆ ಬೇರೆ ಯಾವುದೇ ಅಸ್ತಿತ್ವವಾಗಲಿ ಬಳಕೆಯಾಗಲಿ ಇಲ್ಲ. NPR ಮಾಡಿದ ನಂತರವೇ ಹಾಗು ಅದನ್ನು ಆಧರಿಸಿಯೇ- ಅಂದರೆ NPR ಪ್ರಕ್ರಿಯೆಯಲ್ಲಿ ಅನುಮಾನಾಸ್ಪದರಾದವರನ್ನು ಅಥವಾ ಸರಿಯಾದ ಮಾಹಿತಿ ಹಾಗು ಕಾಗದ ಪತ್ರಗಳನ್ನು ಕೊಡಲಾಗದವರನ್ನು ಅಕ್ರಮ ವಲಸಿಗರೆಂದು ಬೇರ್ಪಡಿಸುವ ಮೂಲಕ ಮಾತ್ರ ಉಳಿದವರನ್ನು ನಾಗರೀಕರೆಂದು ಘೋಷಿಸುವ ರಾಷ್ಟ್ರೀಯ ನಾಗರಿಕರ ಪಟ್ಟಿ ಅರ್ಥಾತ್ NRC ತಯಾರಾಗುತ್ತದೆ.

ಹೀಗಾಗಿ NPR ಇಲ್ಲದೆ NRC ಮಾಡಲು ಆಗುವುದೇ ಇಲ್ಲ. ಆದ್ದರಿಂದ ಈಗ ಎನ್ ಪಿ ಆರ್ ಮಾಡುತ್ತಿರುವುದೇ ಎನ್ ಆರ್ ಸಿ ಯನ್ನು ತಯಾರಿಸಲು. ಆದರೆ  NRC ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎನ್ನುತ್ತಿರುವ ಸರ್ಕಾರ  NRC ಮೊದಲ ಹಂತವಾದ  NPR ಪ್ರಕ್ರಿಯೆಯನ್ನು ತರಾತುರಿಯಿಂದ ಪ್ರಾರಂಭಿಸಿದ್ದು ಏಕೆ?  

ಹೀಗಾಗಿ  "NRC ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ" ಎನ್ನುವ ಸರ್ಕಾರದ ಹೇಳಿಕೆ ಹೋರಾಟ ನಿರತ ಜನರನ್ನು ದಾರಿ ತಪ್ಪಿಸುವ ಯೋಜನೆಯಾಗಿದೆ. ಇದನ್ನು ಖಂಡಿಸಬೇಕು ಮತ್ತು NPR ರದ್ದಿಗಾಗಿ ಹೋರಾಟವನ್ನು ತೀವ್ರಗೊಳಿಸಬೇಕಿದೆ.

2. ಸರ್ಕಾರ ಹೇಳುತ್ತಿರುವ ಮತ್ತೊಂದು ಸುಳ್ಳು " NPR ಹಾಗು NRC ಗು ಸಂಬಂಧವಿಲ್ಲ. NPR ಒಂದು ರೀತಿಯಲ್ಲಿ ಸೆನ್ಸಸ್ ಇದ್ದ ಹಾಗೆ" ಎಂಬುದಾಗಿದೆ. ಇದು ಮತ್ತೊಂದು ಮಹಾ ಸುಳ್ಳು. ಸೆನ್ಸಸ್ ಎಂಬುದು ಪ್ರತಿ ಹತ್ತು ವರ್ಷಕ್ಕೊಮ್ಮೆ ಭಾರತೀಯ ಸೆನ್ಸಸ್ ಆಕ್ಟ್ ಮೂಲಕ ನಡೆಯುವ ಪ್ರಕ್ರಿಯೆಯಾಗಿದೆ. ಅದನ್ನು ಯಾರು ವಿರೋಧಿಸುತ್ತಿಲ್ಲ. ಆದರೆ NPR ಮತ್ತು ಮತ್ತು NRC ಗಳು ನಡೆಯುವುದು ಭಾರತೀಯ ನಾಗರಿಕತ್ವ ಕಾಯಿದೆ (1955) ಹಾಗು ಅದಕ್ಕೆ ವಾಜಪೇಯಿ ಸರ್ಕಾರ 2004ಕ್ಕೆ ತಂದ ತಿದ್ದುಪಡಿ ಮತ್ತು 2003ರಲ್ಲಿ ರೂಪಿಸಿದ ನಿಯಮಾವಳಿಯ ಅನುಸಾರವಾಗಿ.

3. 2003ರಲ್ಲಿ  ವಾಜಪೇಯಿ ಸರ್ಕಾರ  Citizenship (Registration Of Citizens and Issue Of National Identity Cards) Rules 2003 ನಿಯಮಾವಳಿಗಳನ್ನು ಜಾರಿ ಮಾಡಿದೆ. ಅದರ ಉಪ ನಿಯಮ 3ರ ಕ್ಲಾಸ್ 4 ಮತ್ತು 5 ಹೀಗೆ ಹೇಳುತ್ತದೆ:

(4)  The  Central  Government  may,  by  an  order issued in this  regard, decide a date by which the Population  Register  shall  be prepared  by  collecting  information relating to all persons who are usually residing within the jurisdiction of Local Registrar.

(5) The Local Register of Indian citizens shall contain  details  of persons after due verification made from the Population Register

ಈ ಮೇಲಿನ ನಿಯಮಾವಳಿಗಳು ಸ್ಪಷ್ಟಪಡಿಸುವಂತೆ NPR ಅನ್ನು ಪರಿಶೀಲಿಸಿದ ನಂತರವೇ NRC ಆಗುತ್ತದೆ. ಮತ್ತು NPR ಮಾಡಲು ಸೂಚನೆ ಜಾರಿಯಾದ ಮೇಲೆ NRC ಯ ಮೊದಲ ಹಂತ ಪ್ರಾರಂಭವಾಯಿತೆಂದೇ ಅರ್ಥ.

4. ಈ ನಿಟ್ಟಿನಲ್ಲಿ ಏನ್ ಪಿ ಆರ್ ಮಾಡಲು 2019ರ ಆಗಸ್ಟ್ ತಿಂಗಳಲ್ಲೇ ಮೋದಿ ಸರ್ಕಾರ ನೋಟಿಫಿಕೇಶನ್ ಜಾರಿ ಮಾಡಿದೆ. ಅರ್ಥಾತ್ NRC ಮಾಡುವ ಮೊದಲ ಹಂತದ ಪ್ರಕ್ರಿಯೆಗೆ ಮೋದಿ ಸರ್ಕಾರ ಚಾಲನೆ ಕೊಟ್ಟಾಗಿದೆ. ಆದ್ದರಿಂದ ಈಗ NRC ಮಾಡಲು ಇನ್ನು ತೀರ್ಮಾನ ತೆಗೆದುಕೊಂಡಿಲ್ಲ ಎನ್ನುವ ಹೇಳಿಕೆಗೆ ಅರ್ಥವೇ ಇಲ್ಲ. ಅದು ಜನರನ್ನು ಮೋಸಗೊಳಿಸವ ಮಾರ್ಗವಾಗಿದೆ.

5. ಆದ್ದರಿಂದ ಜನರು ಸರ್ಕಾರದ ಈ ಮೋಸಕ್ಕೆ ಬಲಿಯಾಗದೆ NRCಯ ತಾಯಿಯಾಗಿರುವ NPR ಅನ್ನು ರದ್ದುಗೊಳಿಸಲು ಹೋರಾಟವನ್ನು ತೀವ್ರಗೊಳಿಸಬೇಕಿದೆ. ಏಕೆಂದರೆ ... NPR ಇಲ್ಲದೆ NRC ಇಲ್ಲ. NRC ಇಲ್ಲವೆಂದರೆ CAAಗೆ ಹೆಚ್ಚು ಅರ್ಥವಿಲ್ಲ. ಇದು ಅಸಲಿ ಕ್ರೋನಾಲಜಿ ಯಾಗಿದೆ. ಆದ್ದರಿಂದ ಸರ್ಕಾರದ ಯಾವುದೇ ಸುಳ್ಳುಗಳಿಗೆ ಬಲಿಯಾಗದೆ ನಮ್ಮೆಲ್ಲರ ಹೋರಾಟವನ್ನು NPR  ರದ್ದುಗೊಳಿಸುವತ್ತ ಕೇಂದ್ರೀಕರಿಸಬೇಕೆಂದು ಮನವಿ ಮಾಡುತ್ತೇನೆ.

ಶಿವಸುಂದರ್

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News