ಐಎಂಎ ಬಹುಕೋಟಿ ವಂಚನೆ ಪ್ರಕರಣ: ಹೂಡಿಕೆದಾರರ ಹಣ ವಾಪಸ್ ಬರಲಿದೆಯೇ ?

Update: 2020-02-05 14:56 GMT

ಬೆಂಗಳೂರು, ಫೆ.5: ಐಎಂಎ (ಐ ಮಾನಿಟರಿ ಅಡ್ವೈಸರಿ) ಕಂಪೆನಿ ವಂಚನೆ ಪ್ರಕರಣ ಸಂಬಂಧ ಹೂಡಿಕೆದಾರರಿಗೆ ಹಣ ವಾಪಸ್ಸು ನೀಡುವ ನಿಟ್ಟಿನಲ್ಲಿ ರಾಜ್ಯ ಸರಕಾರ ಮೊದಲ ಹೆಜ್ಜೆ ಇಟ್ಟಿದ್ದು, ಇದಕ್ಕಾಗಿ ಹೂಡಿಕೆದಾರರ ಸಂಕ್ಷಿಪ್ತ ಮಾಹಿತಿ ಸಂಗ್ರಹಿಸಲು ಮುಂದಾಗಿದೆ. ಐಎಂಎ ಪ್ರಕರಣದಲ್ಲಿ ಆಸ್ತಿ ಮುಟ್ಟುಗೋಲು, ಚಿನ್ನಾಭರಣ ಜಪ್ತಿ ಸೇರಿ ಇತರೆ ಪ್ರಕ್ರಿಯೆಗಳಿಗೆ ರಚಿಸಲಾಗಿರುವ ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ ಹರ್ಷ ಗುಪ್ತ ನೇತೃತ್ವದಲ್ಲಿ ಇದೇ ತಿಂಗಳ ಅಂತಿಮ ವಾರದಲ್ಲಿ ಹೂಡಿಕೆದಾರರ ಮಾಹಿತಿ ಸಂಗ್ರಹ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ.

ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರದ ಮೂಲಕ ಹಣ ಹೂಡಿಕೆ ಸಂಬಂಧ ಮೂಲ ದಾಖಲೆಗಳನ್ನು ಹಣ ಕಳೆದುಕೊಂಡವರು ಲಗತ್ತಿಸಬೇಕು. ಜತೆಗೆ, ಹೆಸರು, ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ ಹಾಗೂ ಪಾನ್ ಕಾರ್ಡ್ ಸಂಖ್ಯೆಗಳನ್ನು ಕಡ್ಡಾಯವಾಗಿ ನಮೂದಿಸಬೇಕಾಗಿದೆ. ಇನ್ನು, ಇಲ್ಲಿನ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ಸಾವಿರಾರು ಹೂಡಿಕೆದಾರರ ಮತ್ತು ಐಎಂಎ ಕೇಂದ್ರ ಕಚೇರಿಯಲ್ಲಿ ಜಪ್ತಿಯಾದ ಹೂಡಿಕೆದಾರರ ಮಾಹಿತಿ ಆಧರಿಸಿ ಕೆಲವರಿಗೆ ಸಕ್ಷಮ ಪ್ರಾಧಿಕಾರದಿಂದಲೇ ಮಾಹಿತಿ ರವಾನೆ ಆಗಲಿದ್ದು, ಬಳಿಕ ಅವರು ಸಹ ಸೂಕ್ತ ದಾಖಲೆಗಳನ್ನು ಸಲ್ಲಿಸಬೇಕು.

ದಾಖಲೆ ಪ್ರಕ್ರಿಯೆ ಸಲ್ಲಿಸಲು 1 ತಿಂಗಳ ಕಾಲ ಅವಕಾಶ ನೀಡಲಿದ್ದು, ಇದಕ್ಕೂ ಮೊದಲು ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆ ಜಾಗೃತಿ ಮೂಡಿಸಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ. ಇನ್ನು, ಹೊರ ರಾಜ್ಯ ಮತ್ತು ವಿದೇಶಗಳಲ್ಲಿರುವ ಹೂಡಿಕೆದಾರರು ಸಹ ದಾಖಲೆ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹರ್ಷ ಗುಪ್ತ 'ವಾರ್ತಾಭಾರತಿ'ಗೆ ತಿಳಿಸಿದರು.

ಎಷ್ಟು ಹೂಡಿಕೆದಾರರು?: ಐಎಂಎ ವಂಚನೆ ಪ್ರಕರಣ ಸಂಬಂಧ ರಾಜ್ಯ ಸರಕಾರಕ್ಕೆ ವಿಶೇಷ ತನಿಖಾ ದಳ(ಎಸ್ಐಟಿ) ಸಲ್ಲಿಸಿರುವ ವರದಿ ಅನ್ವಯ 70 ಸಾವಿರ ಜನರು ಹೂಡಿಕೆ ಮಾಡಿದ್ದಾರೆ ಎಂದು ಉಲ್ಲೇಖಿಸಿದ್ದು, ದಾಖಲಾತಿ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ, ಹೂಡಿಕೆದಾರರ ಸಂಖ್ಯೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಬೇಕಾದ ದಾಖಲೆಗಳೇನು? 

* ಐಎಂಎನಲ್ಲಿ ಹೂಡಿಕೆ ಮಾಡಿದ ಹಣದ ಮೊತ್ತದ ದಾಖಲೆ

* ಪಾರ್ನ್ ಕಾರ್ಡ್
* ಆಧಾರ್ ಕಾರ್ಡ್
* ಮೊಬೈಲ್ ಸಂಖ್ಯೆ

ಎಚ್ಚರಿಕೆ ಅಗತ್ಯ
ಇದೇ ತಿಂಗಳ ಕೊನೆಯ ವಾರದಲ್ಲಿ ಐಎಂಎ ಹೂಡಿಕೆದಾರರ ಮಾಹಿತಿ ಸಂಗ್ರಹ ಮತ್ತು ಹಣದ ಮೊತ್ತದ ದಾಖಲೆ ಸಲ್ಲಿಕೆ ಪ್ರಕ್ರಿಯೆ ಆರಂಭಿಸಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ. ಇನ್ನು, ಬೆಂಗಳೂರು ಒನ್, ಕರ್ನಾಟಕ ಒನ್ ಮೂಲಕವೇ ಇದು ಜರುಗಲಿದೆ. ಆದರೆ, ಯಾವುದೇ ರೀತಿಯ ಮಧ್ಯವರ್ತಿ, ವ್ಯಕ್ತಿಗಳು ಮತ್ತು ಸಂಘ-ಸಂಸ್ಥೆಗಳು ಹೂಡಿಕೆದಾರರ ಮಾಹಿತಿ ಸಂಗ್ರಹಿಸಲು ಮುಂದಾದರೆ, ಕಠಿಣ ಕಾನೂನು ಕ್ರಮ ಜರುಗಿಸಲು ಸಕ್ಷಮ ಪ್ರಾಧಿಕಾರ ಮುಂದಾಗಿದೆ.

ಹಣ ಬರುತ್ತದೆ, ಆದರೆ?
ಹೂಡಿಕೆ ದಾಖಲಾತಿ ಸಲ್ಲಿಸಿದ ತಕ್ಷಣ ಹಣ ಬರಲಿದೆ ಎನ್ನುವ ನಿರೀಕ್ಷೆಯಿಲ್ಲ. ಆದರೆ, ನ್ಯಾಯಾಲಯದ ಆದೇಶದಂತೆ ಐಎಂಎ ಕಂಪೆನಿ ಮಾಲಕ ಮನ್ಸೂರ್ ಖಾನ್ ಮಾಲಕತ್ವದ ಬರೋಬ್ಬರಿ 450 ಕೋಟಿ ರೂ. ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದು, ಇದರ ಹಾಜರು ಪ್ರಕ್ರಿಯೆ ಮುಗಿದ ನಂತರವೇ ಎಷ್ಟು ಹಣ ಹೂಡಿಕೆದಾರರಿಗೆ ನೀಡಬೇಕೆಂದು ಸರಕಾರ ನಿರ್ಧಾರ ಕೈಗೊಳ್ಳಲಿದೆ.

ಆರೋಪಿ ಮನ್ಸೂರ್ ಖಾನ್ ನೇತೃತ್ವದ ಐಎಂಎ ಕಂಪೆನಿಯಲ್ಲಿ ಹೂಡಿಕೆದಾರರು ನಾನಾ ರೀತಿಯಲ್ಲಿ ಹಣ ಜಮೆ ಮಾಡಿದ್ದಾರೆ. ಹಾಗಾಗಿ, ಪ್ರತಿಯೊಬ್ಬರು ದಾಖಲಾತಿಗಳನ್ನು ಸಲ್ಲಿಸಬೇಕು. ಇದನ್ನು ಪರಿಶೀಲನೆ ನಡೆಸಲಾಗುವುದು. ಬಳಿಕ, ಆಸ್ತಿ ಮಾರಾಟವಾದ ನಂತರ, ಹೂಡಿಕೆದಾರರ ಹಣ ನೀಡುವ ಪ್ರಕ್ರಿಯೆ ಆರಂಭ ವಾಗಬಹುದು.
-ಹರ್ಷ ಗುಪ್ತ, ಸಕ್ಷಮ ಪ್ರಾಧಿಕಾರದ ಮುಖ್ಯಸ್ಥ

Writer - -ಸಮೀರ್ ದಳಸನೂರು

contributor

Editor - -ಸಮೀರ್ ದಳಸನೂರು

contributor

Similar News