ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದತಿ ಮೋದಿ ಮಾಡಿದ ‘ಗಂಭೀರ ತಪ್ಪು’ ಇಮ್ರಾನ್ ಖಾನ್

Update: 2020-02-05 16:35 GMT
ಫೋಟೊ ಕೃಪೆ: twitter.com/PakPMO

ಇಸ್ಲಾಮಾಬಾದ್, ಫೆ. 5: ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ‘ಗಂಭೀರ ತಪ್ಪು’ ಮಾಡಿದ್ದಾರೆ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿದ್ದಾರೆ.

ಮುಝಫ್ಫರಾಬಾದ್‌ನಲ್ಲಿ ಪಾಕ್ ಆಕ್ರಮಿತ ಕಾಶ್ಮೀರದ ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಇಮ್ರಾನ್ ಖಾನ್, ಚುನಾವಣೆಯಲ್ಲಿ ಪಾಕಿಸ್ತಾನವನ್ನು ಬಲಿಪಶುವಿನಂತೆ ಬಳಸಿ ಗೆದ್ದು ಬಂದ ಬಳಿಕ ಮೋದಿ ಹೀಗೆ ಮಾಡಿದ್ದಾರೆ ಎಂದು ಆರೋಪಿಸಿದರು.

‘‘ಮೋದಿ ಗಂಭೀರ ತಪ್ಪು ಮಾಡಿದ್ದಾರೆ. ಈಗ ಅದರಿಂದ ಅವರು ಹೊರಗೆ ಹೋಗುವಂತಿಲ್ಲ. ಅವರು ಭಾರತವನ್ನು ಎಲ್ಲಿಗೆ ತೆಗೆದುಕೊಂಡು ಹೋಗಿದ್ದಾರೋ ಅಲ್ಲಿಂದ ಈಗ ವಾಪಸ್ ಹೋಗುವಂತಿಲ್ಲ. ಹಿಂದೂ ರಾಷ್ಟ್ರೀಯತೆಯ ‘ಜೀನೀ’ (ಬಲಾಢ್ಯ ಸೇವಕ) ಬಾಟಲಿಯಿಂದ ಹೊರಗಿದ್ದು, ಅದನ್ನು ಮತ್ತೆ ಬಾಟಲಿಯೊಳಗೆ ಸೇರಿಸಲು ಸಾಧ್ಯವಿಲ್ಲ’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಈ ಸರಣಿ ಘಟನೆಗಳ ಪರಿಣಾಮವಾಗಿ, ಅಂತಿಮವಾಗಿ ಕಾಶ್ಮೀರವು ಸ್ವತಂತ್ರಗೊಳ್ಳುತ್ತದೆ’’ ಎಂದು ಅವರು ಹೇಳಿಕೊಂಡರು.

ಪಾಕಿಸ್ತಾನ ‘ಕಾಶ್ಮೀರಕ್ಕೆ ಬೆಂಬಲ ದಿನ’ವನ್ನು ಆಚರಿಸಿದ ಸಂದರ್ಭದಲ್ಲಿ ಪಾಕ್ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನ 370ನೇ ವಿಧಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರವು ಆಗಸ್ಟ್ 5ರಂದು ರದ್ದುಪಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News