ನ್ಯಾನ್ಸಿ ಪೆಲೋಸಿ ಕೈಕುಲುಕಲು ನಿರಾಕರಿಸಿದ ಟ್ರಂಪ್

Update: 2020-02-05 16:39 GMT

ವಾಶಿಂಗ್ಟನ್, ಫೆ. 5: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ದೇಶವನ್ನುದ್ದೇಶಿಸಿ ಮಾಡಿದ (ಸ್ಟೇಟ್ ಆಫ್ ದ ಯೂನಿಯನ್) ಭಾಷಣದ ವೇಳೆ, ಅವರು ಮತ್ತು ಪ್ರತಿಪಕ್ಷ ಡೆಮಾಕ್ರಟಿಕ್ ಪಕ್ಷದ ನಾಯಕಿ ನ್ಯಾನ್ಸಿ ಪೆಲೋಸಿ ನಡುವಿನ ದ್ವೇಷ ಬಹಿರಂಗವಾಗಿ ಪ್ರಕಟಗೊಂಡಿತು. ಮೊದಲು ನ್ಯಾನ್ಸಿ ಪೆಲೋಸಿ ಟ್ರಂಪ್‌ರ ಕೈಕುಲುಕಲು ಮುಂದಾದಾಗ, ಟ್ರಂಪ್ ಅದನ್ನು ತಿರಸ್ಕರಿಸಿದರು. ಬಳಿಕ, ಟ್ರಂಪ್‌ರ ಭಾಷಣದ ಪ್ರತಿಯನ್ನು ಹರಿದು ಹಾಕುವ ಮೂಲಕ ನ್ಯಾನ್ಸಿ ಅದಕ್ಕೆ ಪ್ರತೀಕಾರ ತೀರಿಸಿಕೊಂಡರು.

80 ನಿಮಿಷಗಳ ಭಾಷಣದಲ್ಲಿ ಟ್ರಂಪ್ ತನ್ನ ವಿರುದ್ಧದ ವಾಗ್ದಂಡನೆಯ ಬಗ್ಗೆ ಏನನ್ನೂ ಪ್ರಸ್ತಾಪಿಸಲಿಲ್ಲ. ಪ್ರತಿಪಕ್ಷ ಡೆಮಾಕ್ರಟಿಕ್ ಪ್ರಾಬಲ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಇತ್ತೀಚೆಗೆ ಟ್ರಂಪ್ ವಿರುದ್ಧದ ವಾಗ್ದಂಡನೆಯನ್ನು ಅಂಗೀಕರಿಸಿತ್ತು. ಈಗ ಅದನ್ನು ಸೆನೆಟ್‌ಗೆ ಕಳುಹಿಸಲಾಗಿದೆ. ಆಡಳಿತಾರೂಢ ರಿಪಬ್ಲಿಕನ್ ಪಕ್ಷದ ಪ್ರಾಬಲ್ಯವಿರುವ ಸೆನೆಟ್ ವಾಗ್ದಂಡನೆ ನಿರ್ಣಯದ ವಿರುದ್ಧವಾಗಿ ಮತ ಚಲಾಯಿಸಿ ಟ್ರಂಪ್‌ರನ್ನು ದೋಷಮುಕ್ತಗೊಳಿಸುವ ನಿರೀಕ್ಷೆಯಿದೆ.

ತನ್ನ ಎದುರಾಳಿ ಹಾಗೂ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಕಾಂಕ್ಷಿ ಜೋ ಬೈಡನ್ ವಿರುದ್ಧ ಭ್ರಷ್ಟಾಚಾರ ತನಿಖೆ ನಡೆಸುವಂತೆ ಯುಕ್ರೇನ್ ಮೇಲೆ ಒತ್ತಡ ಹೇರುವ ಮೂಲಕ ಟ್ರಂಪ್ ಅಧಿಕಾರ ದುರುಪಯೋಗ ಮಾಡಿದ್ದಾರೆ ಎನ್ನುವ ಆರೋಪವನ್ನು ಟ್ರಂಪ್ ಎದುರಿಸುತ್ತಿದ್ದಾರೆ.

ಟ್ರಂಪ್ ಮಂಗಳವಾರ ಸಂಸತ್ತಿಗೆ ಭಾಷಣ ಮಾಡಲು ಬಂದಾಗ, ಅವರ ಕೈಕುಲುಕುವುದಕ್ಕಾಗಿ ನ್ಯಾನ್ಸಿ ಪೆಲೋಸಿ ಕೈ ಮುಂದೆ ಚಾಚಿದರು. ಹಸ್ತಲಾಘವ ತಿರಸ್ಕರಿಸಿದ ಟ್ರಂಪ್, ಪೆಲೋಸಿ ಕೈಗೆ ತನ್ನ ಭಾಷಣದ ಪ್ರತಿಯೊಂದನ್ನು ನೀಡಿದರು.

ಟ್ರಂಪ್‌ರ ಭಾಷಣ ಕೊನೆಗೊಂಡಾಗ, ಎದ್ದು ನಿಂತ ಪೆಲೋಸಿ, ಟ್ರಂಪ್ ತನಗೆ ನೀಡಿದ ಭಾಷಣದ ಪ್ರತಿಯನ್ನು ಹರಿದುಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News